loading...

ಬೈಲಹೊಂಗಲ- ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಮದುವೆಯಾಗುವದರಿಂದ ಆರ್ಥಿಕ ಸಂಕಷ್ಟದಿಂದ ಪಾರಾಗಿ ಸುಖಕರ ಜೀವನ ಸಾಗಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರದ ನಿವೃತ್ತ ಉಪಕಾರ್ಯದರ್ಶಿ ಯು.ಬಿ.ಉಳವಿ ಹೇಳಿದರು.
ಅವರು ಗುರುವಾರ ತಾಲೂಕಿನ ಹಣಬರಟ್ಟಿ ಗ್ರಾಮದಲ್ಲಿ ಸಾಮೂಹಿಕ ವಿವಾಹ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ, ಇಂದಿನ ಕಷ್ಟದ ದಿನಮಾನಗಳಲ್ಲಿ ಮನುಷ್ಯನು ಅತ್ಯಂತ ಕ್ಲಿಷ್ಟ ಪರಿಸ್ಥಿತಿ ಎದುರಿಸುತ್ತಿದ್ದು ಅದರೂ ಕೂಡಾ ಜನರು ಮದುವೆ ಮುಂಜುವೆಗಳನ್ನು ಸಾಲಸೋಲ ಮಾಡಿ ಲಕ್ಷಾಂತರ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ವಿವಾಹವಾಗಿ ನಂತರದ ದಿನಗಳಲ್ಲಿ ಸಾಲ ತೀರಿಸಲು ಆಗದೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವದು ಕಂಡು ಬರುತ್ತದೆ ಇದನ್ನು ತಡೆಗಟ್ಟಲು ಎಲ್ಲರೂ ಬದ್ದರಾಗಿ ಸಾಮೂಹಿಕ ವಿವಾಹದತ್ತ ಹೆಚ್ಚಿನ ಒಲವು ತೋರಿದಾಗ ಮಾತ್ರ ಅತನ ಜೀವನ ನೆಮ್ಮದಿಯಿಂದ ಕಳೆಯಲು ಸಾಧ್ಯ ಎಂದರು.
ಪ್ರತಿಯೊಬ್ಬ ತಂದೆ ತಾಯಿಗಳು ಮಕ್ಕಳ ಮದುವೆ ಮಾಡುವದು ಪ್ರತಿಷ್ಠೆ ಎಂದು ತಿಳಿದು ಸಾಲದ ಸುಳಿಯಲ್ಲಿ ಸಿಲುಕುತ್ತಿರುವದು ಸರಿಯಲ್ಲ. ಅದೇ ಹಣವನ್ನು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಾದಿಡಬೇಕೆಂದರು. ಅಪ್ರಾಪ್ತ ವಯಸ್ಸಿನಲ್ಲಿ ಮಹಿಳೆಯರು ಸಾಕಷ್ಟು ದೈಹಿಕ, ಮಾನಸಿಕ ತೊಂದರೆಗಳಿಗೆ ಗುರಿಯಾಗುತ್ತಿದ್ದಾರೆ ಪಾಲಕರು ಗಮನ ಹರಿಸಿ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸಬೇಕು. ಇದು ಕೇವಲ ಸರ್ಕಾರದ ಕೆಲಸವಲ್ಲ ತಂದೆತಾಯಿಗಳ ಪಾತ್ರವೂ ಕೂಡಾ ಅಮೂಲ್ಯವಾಗಿದೆ. ಮನೆ ಮನೆಗಳ ಮುಂದೆ ಮಂಟಪ ಹಾಕುವ ಬದಲಿಗೆ ಸಾಮೂಹಿಕವಾಗಿ ಮಂಟಪ ಹಾಕಿ ಮದುವೆಗಳನ್ನು ಹಮ್ಮಿಕೊಳ್ಳುವದರ ಮೂಲಕ ಸಾಮೂಹಿಕ ವಿವಾಹ ಸರಳಗೊಳಿಸಬೇಕಾದ ಅವಶ್ಯಕತೆ ಇದೆ ಈ ದಿಶೆಯಲ್ಲಿ ಮಠಮಾನ್ಯಗಳ ಪಾತ್ರ ಬಹುಮುಖ್ಯವಾಗಿದೆ ಎಂದರಲ್ಲದೆ ನವ ದಂಪತಿಗಳಿಗೆ ಶುಭ ಹಾರೈಸಿದರು.
ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಸರ್ಕಾರದ ನಿವೃತ್ತ ಉಪಕಾರ್ಯದರ್ಶಿ ಯು.ಬಿ.ಉಳವಿಯವರು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಜೀವನದಲ್ಲಿ ಅರಾಮವಾಗಿ ಜೀವನ ಕಳೆಯದೆ ಸಾಮಾಜಿಕವಾಗಿ ಕಾರ್ಯ ನಿರ್ವಹಿಸುತ್ತಿರುವದು ಶ್ಲಾಘನೀಯವಾಗಿದೆ. ಅವರ ಅಧಿಕಾರದ ಅವಧಿಯಲ್ಲಿ ಈ ಭಾಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಹಸ್ತ ನೀಡಿ ಪರೋಕ್ಷವಾಗಿ ಬಡ ವಿದ್ಯಾವಂತ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡಿರುವ ಕಾರ್ಯ ಅವೀಸ್ಮರನೀಯವಾಗಿದೆ ಎಂದರು. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಸಮಾಜ ಸೇವಕರಾಗಿ ಹೊರಬರುತ್ತಿರುವ ಇವರಿಗೆ ಸಾರ್ವಜನಿಕರು ಕೂಡಾ ಸಹಕಾರ ನೀಡಬೇಕೆಂದರು.
ಶಾಖಾಮೂರುಸಾವಿರಮಠದ ಮಠದ ಪ್ರಭುನೀಲಕಂಠ ಸ್ವಾಮಿಜಿ, ಯಕ್ಕುಂಡಿ ವಿರಕ್ತಮಠದ ಚನ್ನಬಸವ ಸ್ವಾಮಿಜಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ವೇದಿಕೆಯ ಮೇಲೆ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೆಂದ್ರ ಸ್ವಾಮಿಜಿ, ಹಣಬರಹಟ್ಟಿಯ ಬಸವಲಿಂಗ ಸ್ವಾಮಿಜಿ, ಸಿದ್ದಬಸವ ಸ್ವಾಮಿಜಿ ಕಾದರವಳ್ಳಿ ಬಿ.ಎಸ್.ಪಾಲಾಕ್ಷದೇವರು, ಅಡಿವೆಪ್ಪ ಅಂಬಲಿ, ಶಾಂಭವಿ ಉಳವಿ ಇದ್ದರು. ಮಹಾಂತೇಶ ಕಿತ್ತೂರ ನಿರೂಪಿಸಿದರು, ವಿಜಯ ಪತ್ತಾರ ಸ್ವಾಗತಿಸಿದರು. ರಾಜು ಬಡಿಗೇರ ವಂದಿಸಿದರು. ಈ ಸಂದರ್ಭದಲ್ಲಿ ಸುಮಾರು 11 ಜೋಡಿ ಸಾಮೂಹಿಕ ವಿವಾಹಗಳು ಜರುಗಿತು. ಗ್ರಾಮದ ಸುತ್ತಮುತ್ತಲಿನ ಸುಮಾರು 16 ಗ್ರಾಮಗಳ ಗ್ರಾಮಸ್ಥರು ಇದ್ದರು.

loading...