ಹೆಬ್ಬಾಳ ಬಿಡಿಸಿಸಿ ಬ್ಯಾಂಕ ದರೋಡೆ

0
213
loading...

 

ಕನ್ನಡಮ್ಮ ಸುದ್ದಿ
ಸಂಕೇಶ್ವರ 15: ಸ್ಥಳೀಯ ಪೊಲೀಸ ಠಾಣಾ ವ್ಯಾಪ್ತಿಗೆ ಒಳಪಡುವ ಇಲ್ಲಿಗೆ ಸಮೀಪದ ಹೆಬ್ಬಾಳ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಶಾಖೆಯಿಂದ 5.5 ಕೆಜಿ ಬಂಗಾರದ ಆಭರಣ ಹಾಗೂ 30 ನಗದು ದೋಚಿ ಕಳ್ಳರು ಫರಾರಿಯಾಗಿದ್ದಾರೆ.
ಕಳೆದ ಶುಕ್ರವಾರ ವ್ಯವಹಾರ ಕೊನೆಗೊಂಡ ಶನಿವಾರ ಹಾಗೂ ರವಿವಾರ ರಜೆ ಎರಡು ದಿನಗಳ ರಜೆಯಲ್ಲಿ ದರೋಡೆ ನಡೆದಿದ್ದು, ಇಂದು ಸೋಮವಾರ ಬ್ಯಾಂಕ ಸಿಬ್ಬಂದಿ ಮುಂಜಾನೆ ಬ್ಯಾಂಕ ಆರಂಭವಾಗುತ್ತಿದ್ದಂತೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಕೂಡಲೇ ಸಿಬ್ಬಂದಿ ಸ್ಥಳೀಯ ಪೊಲೀಸ ಠಾಣೆಗೆ ವಿಷಯ ತಿಳಿಸಿದ್ದಾರೆ.
ಬ್ಯಾಂಕ ಹಿಂಬದಿಯಲ್ಲಿರುವ ಕಿಟಕಿಯ ಸ್ಕ್ರೂಗಳನ್ನು ಬಿಚ್ಚಿಟ್ಟು, ಆನಾಯಾಸವಾಗಿ ಬ್ಯಾಂಕಿಗೆ ನುಗ್ಗಿರುವ ದರೋಡೆಕೋರರು ಬ್ಯಾಂಕಿನಲ್ಲಿರುವ ಲಾಕರ ಒಡೆದು ಅದರಲ್ಲಿರುವ 5.5 ಕೆಜಿ ಆಭರಣ ಹಾಗೂ 30 ಲಕ್ಷ ನಗದು ಕಳ್ಳತನವಾಗಿರುವ ಕುರಿತ ಮಾಹಿತಿ ದೊರೆತಿದ್ದು, ಬ್ಯಾಂಕಿನಲ್ಲಿರುವ ಸಿಸಿಟಿವಿಯನ್ನು ನಿಷ್ಕ್ರಿಯಗೊಳಿಸಿರುವ ಮೂಲಕ ಕಳ್ಳತನದಲ್ಲೂ ತಮ್ಮ ಚಾಣಾಕ್ಷತನ ತೋರಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ಕಳ್ಳತನ, ಕೊಲೆ, ಸುಲಿಗೆ ದರೋಡೆಯಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಈ ಪ್ರಕರಣದಲ್ಲಿಯೂ ಅಂತರಾಜ್ಯ ದರೋಡೆಕೋರರು ಶಾಮೀಲಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಐಜಿ ಡಿ.ಕೆ. ರಾಮಚಂದ್ರ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ರವಿಕಾಂತೇಗೌಡ, ಡಿವೈಎಸ್ಪಿ ಸತೀಶ ಚಿಟಗುಬ್ಬಿ, ವೀರೇಶ ದೊಡ್ಡಮನಿ, ಸದಾಶಿವ ಕಟ್ಟಿಮನಿ, ಸಿಪಿಐ ಸಂದೀಪಸಿಂಗ ಮುರಗೋಡ ಭೇಟ್ಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೆಟ್ಟಿ ನೀಡಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಕುರಿತು ಸಂಕೇಶ್ವರ ಪಿಎಸ್ಐ ಎಚ್.ಡಿ.ಮುಲ್ಲಾ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದಾರೆ.
ಬಿಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸುರೇಶ ಅಳಗುಂಡಿ, ಉಪಪ್ರಧಾನ ವ್ಯವಸ್ಥಾಪಕ ಮಾನಗಾಂವಿ ಹುಕ್ಕೇರಿ ಬಿಐ ಬಿರಾದಾರ ಪಾಟೀಲ, ಶಾಖಾ ವ್ಯವಸ್ಥಾಪಕ ದಿಲೀಪ ಬೊಮ್ಮನ್ನವರ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದರು

loading...