ಕಾನ್ವೆಂಟ್ ಬಿಟ್ಟು ಗೌರ್ಮೆಂಟ್ ಶಾಲೆಗೆ ವಿದ್ಯಾರ್ಥಿಗಳು

0
44

ಜ್ಞಾನದ ಸೆಲೆಯಾದ ಹಣುಮಸಾಗರ-ರಾಜ್ಯಕ್ಕೆ ಹೊಸ ಮಾದರಿ….!!

-ಖಾಜಾಮೈನುದ್ದೀನ್ ಪಟೇಲ್-ವಿಜಯಪುರ
ಕಾನ್ವೆಂಟ್ ಶಾಲೆಗಳಲ್ಲಿರುವ ಶೈಕ್ಷಣಿಕ ಸೌಲಭ್ಯಗಳಿಂದ ಮಾರು ಹೋಗಿ ಗೌರ್ಮೆಂಟ್ ಶಾಲೆಯಿಂದ ಕಾನ್ವೆಂಟ್ ಶಾಲೆಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು, ಆದರೆ ವಿಜಯಪುರ ತಾಲೂಕಿನ ಹಣುಮಸಾಗರದ ವಿದ್ಯಾರ್ಥಿಗಳು ಕಾನ್ವೆಂಟ್ ಶಾಲೆ ತೊರೆದು ಸರ್ಕಾರಿ ಶಾಲೆಗೆ ಸೇರ್ಪಡೆಯಾಗುತ್ತಿರುವ ಮೂಲಕ ರಾಜ್ಯಕ್ಕೆ ಹೊಸ ಮಾದರಿ…
ಹಣುಮಸಾಗರ ಪ್ರಾಥಮಿಕ ಶಾಲೆಯಲ್ಲಿ ಅಚ್ಚುಕಟ್ಟುತನದಿಂದ ನಡೆದ ಬೇಸಿಗೆ ಸಂಭ್ರಮದ ಬೇಸಿಗೆ ಶಿಬಿರ, ಗ್ರಾಮಸ್ಥರ ಹಾಗೂ ಪಾಲಕರ ಅಭಿಮಾನ, ಶಿಕ್ಷಕರು ಹಾಗೂ ಎಸ್‍ಡಿಎಂಸಿ ಪದಾಧಿಕಾರಿಗಳ ವಿಶೇಷ ಮುತವರ್ಜಿಯ ಫಲವಾಗಿ ಶೈಕ್ಷಣಿಕ ಲೋಕದಲ್ಲಿ ಧೃವತಾರೆಯಾಗಿ ಮಿಂಚುತ್ತಾ `ಸರ್ಕಾರಿ ಶಾಲೆಗಳು ನಾವೇನೂ ಕಮ್ಮಿಯಿಲ್ಲ’ ಎಂದು ಹೇಳುವ ಸ್ಥಿತಿ ನಿರ್ಮಾಣಮಾಡಿದ್ದಾರೆ.
ಇಂದು ಊರಿನಲ್ಲಿ ಹಬ್ಬದ ಸಂಭ್ರಮ. ತಳಿರು-ತೋರಣಗಳಿಂದ ಸಿಂಗರಿಸಿದ ಶಾಲೆ, ರಂಗವಲ್ಲಿಯ ಚಿತ್ತಾರ. ಸ್ವತ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸರ್ಕಾರಿ ಶಾಲೆಗೆ ಸೇರ್ಪಡೆಯಾದ ಮಕ್ಕಳಿಗೆ ಹೂಗುಚ್ಚ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ಭಾರತ ಸ್ವಾತಂತ್ರ್ಯ ಪಡೆದ ದಿನ 15-8-1947 ರಂದೇ ಪ್ರಾರಂಭಗೊಂಡಿರುವ ಈ ಶಾಲೆ ಸರ್ಕಾರಿ ಶಾಲೆಗಳ ಪುನರುಜ್ಜೀವನ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಮುನ್ನುಡಿ ಬರೆಯುತ್ತಾ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದೆ.
ಹಣುಮಸಾಗರ, ಮಮದಾಪುರ, ಕಂಬಾಗಿ ಮೊದಲಾದ ಕಡೆ ಇರುವ ನೂರಾರು ವಿದ್ಯಾರ್ಥಿಗಳು ಸುತ್ತಮುತ್ತಲಿನ ಖಾಸಗಿ ಶಾಲೆಗಳನ್ನೇ ಅವಲಂಬಿಸಿದ್ದರು. ಈ ವರ್ಷ ಬೇಸಿಗೆಯಲ್ಲಿ ನಡೆದ `ಬೇಸಿಗೆ ಸಂಭ್ರಮ’ ಹೊಸ ಆಯಾಮವನ್ನೇ ಬರೆಯಿತು. ಶಿಬಿರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು, ಹಣುಮಸಾಗರ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತರಬೇತಿ ನೀಡಿದರು. ವ್ಯಾಕರಣ, ಗಣಿತದ ಪ್ರಮೇಯಗಳನ್ನು ಅತ್ಯಂತ ಸುಲಭವಾಗಿ ಮಕ್ಕಳು ಅರ್ಥೈಸಿಕೊಳ್ಳುವಂತೆ ಮಾಡಿದರು. ಪರಿಣಾಮವಾಗಿಯೇ ವಿದ್ಯಾರ್ಥಿಗಳೇ ಸ್ವಯಂಪ್ರೇರಣೆಯಿಂದ ನಾವು ಸರ್ಕಾರಿ ಶಾಲೆಯಲ್ಲಿಯೇ ಕಲಿಯುತ್ತೇವೆ ಎಂದು ಪಾಲಕರ ಮನವೊಲಿಸುವಲ್ಲಿ ಯಶಸ್ವಿಯಾದರು, ಪಾಲಕರಿಗೂ ತಮ್ಮ ಊರಿನ ಸರ್ಕಾರಿ ಶಾಲೆ ಎಂದರೆ ಅಭಿಮಾನ. ಮಕ್ಕಳು ಸಹ ಅಲ್ಲಿಗೆ ಹೋಗುತ್ತಾರೆ ಎಂದರೆ ತಕ್ಷಣದಲ್ಲಿಯೇ ಮಕ್ಕಳ ಅಭಿಲಾಷೆಗೆ ಒಪ್ಪಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರು.
ಈ ಪ್ರಯತ್ನಕ್ಕೆ ಮತ್ತಷ್ಟು ಬಲ ತುಂಬಿದ ಹಣಮಸಾಗರ ಗ್ರಾಮದ ನೇತಾಜಿ ಸುಭಾಷಚಂದ್ರ ಭೋಸ್ ಹಾಗೂ ಗಜಾನನ ತರುಣ ಸಂಘದ ಸದಸ್ಯರು ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಾರೆ ಎನ್ನುವುದು ಕೇವಲ ಭ್ರಮೆ, ನಾವು ಸರಕಾರಿ ಶಾಲೆಗಳಲ್ಲಿಯೇ ಅತ್ಯುನ್ನತ ಶಿಕ್ಷಣ ನೀಡಬಹುದು ಎಂದು ಮನವರಿಕೆ ಮಾಡಿಕೊಟ್ಟರು.
ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಜೊತೆಗೆ ಆ ಶಾಲೆಯಲ್ಲಿಯೇ ಎಲ್ಲ ಸೌಲಭ್ಯಗಳು ದೊರಕುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದರು. ಶಿಕ್ಷಕರ ಕೊರತೆ ಇರುವ ಕಾರಣದಿಂದಾಗಿ ಮೂವರು ಅತಿಥಿ ಶಿಕ್ಷಕರ ಸೇವೆ ಬಳಸಿಕೊಳ್ಳಲಾಗುತ್ತಿದೆ. ಗ್ರಾಮಸ್ಥರೇ ಹಣ ಸಂಗ್ರಹಿಸಿ ಆ ಶಿಕ್ಷಕರಿಗೆ ಗೌರವ ಸಂಭಾವನೆ ನೀಡುತ್ತಿದ್ದಾರೆ.

*****
ನಮ್ಮ ಊರಿನ ಸಾಲಿ ಅಂದ್ರ ನಮಗ ಹೆಮ್ಮೆ ನೋಡ್ರಿ…!!
`ಕಾನ್ವೆಂಟ್ ಸಾಲಿ ಅಂದ್ರ ಬರೀ ಫ್ಯಾಷನ್ ನೋಡ್ರಿ… ಕಲಿಸುವುದಕ್ಕಿಂತ ಅವರು ಬರೀ ಬಾಯಿಪಾಠ ಮಾಡಸ್ತಾರ, ಇದರಿಂದ ನಮ್ಮ ಮಕ್ಕಳು ಏನು ಕಲಿತಾವ ಬಿಡ್ತಾವ ಗೊತ್ತಿಲ್ಲ. ಹಿಂಗಾಗಿ ನಮಗ ಸರ್ಕಾರಿ ಸಾಲಿನೇ ಛಲೋ ಅನಸ್ತ್ರೀ…ಹಂಗ ನಾವು ಎಲ್ಲಾರೂ ಸೇರಿ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹಾಕಬೇಕು ಅಂತ ನಿರ್ಧಾರ ಮಾಡಿವಿ ಎಂದು ಪಾಲಕರು ತಮ್ಮ ಅನುಭವ ಹಂಚಿಕೊಂಡರು.

loading...