ಚನ್ನಮ್ಮ ಕಿತ್ತೂರು :ಚಾತುರ್ಮಾಸಕ್ಕಾಗಿ ರಾಷ್ಟ್ರ ಸಂತ ಮುನಿಶ್ರೀ 108 ಚಿನ್ಮಯಸಾಗರ ಮಹಾರಾಜ ಜಂಗಲವಾಲೇ ಬಾಬಾ ಅವರು ದೇಗಾಂವ-ಹೊನ್ನಾಪೂರ ದಟ್ಟವಾದ ಅರಣ್ಯವನ್ನು ಪ್ರವೇಶ ಮಾಡಿದರು

loading...


ಕನ್ನಡಮ್ಮ ಸುದ್ದಿ,
ಚನ್ನಮ್ಮ ಕಿತ್ತೂರು ಃ ಆಧ್ಯಾತ್ಮದ ಸಂಗದಿಂದ ವಿಶ್ವಾಸದ ಬೀಜವನ್ನು ಎಲ್ಲರೂ ತಮ್ಮಲ್ಲಿಯೇ ಬಿತ್ತಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದು ರಾಷ್ಟ್ರ ಸಂತ ಮುನಿಶ್ರೀ 108 ಚಿನ್ಮಯಸಾಗರ ಮಹಾರಾಜ ಜಂಗಲವಾಲೇ ಬಾಬಾ ಹೇಳಿದರು.
ಚಾತುರ್ಮಾಸಕ್ಕಾಗಿ ತಾಲೂಕಿನ ದೇಗಾಂವ-ಹೊನ್ನಾಪೂರ ದಟ್ಟವಾದ ಅರಣ್ಯವನ್ನು ರವಿವಾರ ಪ್ರವೇಶ ಮಾಡಿದ ನಂತರ ನಡೆದ ಸಮಾರಂಭದಲ್ಲಿ ಪ್ರವಚನ ನೀಡಿದ ಅವರು, ಮನುಷ್ಯನು ತನ್ನ ಮೇಲೆ ಮೊದಲು ಆತ್ಮ ವಿಶ್ವಾಸ ಮೂಡಿಸಿಕೊಂಡಾಗ ಜಗತ್ತನ್ನು ಪ್ರೀತಿ ವಿಶ್ವಾಸದಿಂದ ನೊಡಲು ಸಾದ್ಯವಾಗುತ್ತದೆ ಎಂದ ಅವರು, ನೋವು ನೀಡದೆ ಸಹಾಯ ಹಸ್ತ ಚಾಚಿ ನೋವು ನಲಿವುಗಳಿಗೆ ಸ್ಪಂದಿಸುವ ವಿಶಾಲ ಮನೋಭಾವ ಬೆಳೆಸಿಕೊಂಡರೆ ಭಗವಂತನ ಕೃಪೆಯಾಗಲು ಸಾಧ್ಯ. ಶರೀರ ನಶ್ವರವಾಗಿದ್ದು ಇರುವಷ್ಟು ಕಾಲ ಸತ್ಕಾರ್ಯ ಮಾಡುವ ಮೂಲಕ ಬದುಕಿನ ಅರ್ಥವನ್ನು ಪೂರ್ಣಗೊಳಿಸಬೇಕೆಂದು ಎಂದು ಹೇಳಿದರು.

ಆರಿಕಾರತ್ನ ಜಿನವಾಣಿ ಮಾತಾಜಿ ಮಾತನಾಡಿ, ಮನುಷ್ಯ ಜೀವಿ ಭಗವಂತನ ಅದ್ಬುತ ಕೊಡುಗೆಯಾಗಿದ್ದು, ಹಿಂಸಾತ್ಮಕ ಮನೋಭಾವನೆಯನ್ನು ತೊರೆದು ಮಾನವಿಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಸ್ಪರ ಪ್ರೀತಿ ವಿಶ್ವಾಸಗಳ ಮೂಲಕ ಸಹೋದರತ್ವ ಭಾವನೆ ಬೆಳೆಸಿಕೊಂಡು ಜೀವನವನ್ನು ಸಾಧು ಸಂತರ ಸಂಗದಲ್ಲಿ ಕಳೆಯಬೇಕೆಂದು ಹೇಳಿದರು.

ಇದಕ್ಕೂ ಮೊದಲು ಮುನಿಶ್ರೀಗಳು ಧಾರ್ಮಿಕ ವಿಧಿ ವಿಧಾನಗಳ ಸಹಿತ ಸಕಲವಾದ್ಯಮೇಳಗಳೊಂದಿಗೆ ತಿಗಡೊಳ್ಳಿ, ದೇಗಾಂವ, ಶಿರಗಾಪೂರ ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನರೊಂದಿಗೆ ಶಿರಗಾಪೂರ-ದೇಗಾಂವ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಭಕ್ತರಿಂದ ಗೌರವಗಳನ್ನು ಸ್ವೀಕರಿಸಿ, ಆಶೀರ್ವದಿಸಿ ಭಕ್ತರ ಜಯಘೋಷಗಳ ಮಧ್ಯ ವಿಹಾರದ ಮೂಲಕ ಪ್ರವೇಶಿಸಿದರು.

ಶ್ರೀ ಚಿನ್ಮಯಸಾಗರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಸುಮನಲತಾ ಪ್ರಕಾಶ ಮೋದಿಯವರು ಚಾತುರ್ಮಾಸ ಕಾರ್ಯಕ್ರಮದ ಆಯೋಜಕರಾಗಿದ್ದಾರೆ. ನಿಂಗನಗೌಡ ಹಳೆಮನಿ, ಮಾಜಿ ತಾ.ಪಂ.ಸದಸ್ಯೆ ಸರಸ್ವತಿ ಹೈಬತ್ತಿ, ಕಲ್ಲಪ್ಪ ಶಿವನ್ನವರ, ಬಾಬು ದೇವರಮನಿ, ರವಿ ಉಡಿಕೇರಿ, ಗುಂಡುಗೌಡ ಪಾಟೀಲ, ಯಲ್ಲಪ್ಪ ಕಾಳಾರ, ಮುದಕಪ್ಪ ಗಂದಿಗವಾಡ, ಚಂದ್ರಗೌಡ ಪಾಟೀಲ, ಶಿವಾನಂದ ಉಡಿಕೇರಿ, ದೇವೇಂದ್ರ ಪಾಟೀಲ, ತವನಪ್ಪ ಹಿತ್ತಲಕೇರಿ, ಬಸವರಾಜ ಶಿರಗಾಪೂರ ಸೇರಿದಂತೆ ಇತರ ಗಣ್ಯರು ಹಾಗೂ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮುನಿಶ್ರೀಗಳಿಂದ ತಪಸ್ಸು ಃ ಜಂಗಲವಾಲೆ ಬಾಬಾ ಅವರು ದಿನನಿತ್ಯ ಸಾಯಂಕಾಲ 6 ರಿಂದ ಬೆಳಗಿನವರೆಗೆ ಹೊನ್ನಾಪೂರ ದಟ್ಟ ಅರಣ್ಯದಲ್ಲಿ ತಪಸ್ಸು ಮಾಡುತ್ತಾರೆ. ನಂತರ ಮುಂಜಾನೆಯಿಂದ ಸಾಯಂಕಾಲದ ವರೆಗೆ ಪ್ರವಚನ ಹಾಗೂ ಆಧ್ಯಾತ್ಮ ಕಾರ್ಯಕ್ರಮಗಳು ಜರಗುತ್ತವೆ.

loading...