ದುರಸ್ಥಿ ಭಾಗ್ಯ ಕಾಣದ ಬೆಳ್ಳಟ್ಟಿ ನೀರು ಸರಬರಾಜು ಕೇಂದ್ರ !

0
73
loading...

ನಿರ್ವಹಣಾ ಜವಾಬ್ದಾರಿ ಮರೆತ ಮುಳಗುಂದ, ಶಿರಹಟ್ಟಿ ಪಪಂ | ಕುಡಿಯಲು ನಿರಿಲ್ಲದೇ ಜನರು ಹಾಹಾಕಾರ
|ಚಂದ್ರಶೇಖರ ಸೋಮಣ್ಣವರ
ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ತುಂಗಭದ್ರ ನದಿ ನೀರು ಸರಬರಾಜು ಘಟಕದ (ಪಂಪ್ ಹೌಸ್) 250 ಎಚ್.ಪಿ ಸಾಮಥ್ರ್ಯದ ಎರಡು ಮೋಟರ್ ಪಂಪಗಳಲ್ಲಿ ಒಂದು ಮೋಟರ್ ಒಂದು ವರ್ಷದ ಹಿಂದೆಯೇ ಸುಟ್ಟಿದ್ದರೂ ಸಹ ಈ ವರೆಗೂ ದುರಸ್ಥಿ ಭಾಗ್ಯ ಕಾಣದೇ ಸುಗನಹಳ್ಳಿ, ಬನ್ನಿಕೊಪ್ಪ, ಹಾಗೂ ತಾರಿಕೊಪ್ಪ ಗ್ರಾಮಗಳ ಜನತೆ ಕುಡಿಯುವ ಹನಿ ನೀರಿಗಾಗಿ ಪರಿತಪಿಸುವಂತಾಗಿದ್ದು, ಚುನಾಯಿತ ಜನಪ್ರತಿನಿಧಿಗಳ ವಿರುದ್ದ ಸುಗನಹಳ್ಳಿ ಗ್ರಾಮಸ್ಥರು ಬೆಳ್ಳಟ್ಟಿಯ ನೀರು ಸರಬುರಾಜು ಘಟಕದ ಮುಂದೆ ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈಗ ಸುಸ್ಥಿತಿಯಲ್ಲಿರುವ ಇನ್ನೊಂದು ಮೋಟಾರ ಪಂಪಿನ ಬೇರಿಂಗ್ ಸಹ ಹೋಗಿದ್ದು, ಇಂದು ನಾಳೆ ಕೆಟ್ಟು ನಿಲ್ಲುವ ಹಂತದಲ್ಲಿದೆ. ಅಲ್ಲದೇ, ಬೆಳ್ಳಟ್ಟಿ ಭಾಗದಲ್ಲಿ ಎಲ್‍ಆಂಡ್‍ಟಿ ಕಂಪನಿಗಳು ಕಾಮಗಾರಿ ನಡೆಸುತ್ತಿರುವುದರಿಂದ ಜೆಸಿಬಿ ಯಂತ್ರಗಳು ನೆಲ ಅಗೆಯುವಾಗ ಎಲ್ಲೆಂದರಲ್ಲಿ ಪೈಪಲೈನಗಳು ಕಿತ್ತು ನೀರು ಪೋಲಾಗುವುದಲ್ಲದೇ ಕೆಲವು ರೈತರು ತಮ್ಮ ಜಮೀನುಗಳಿಗೆ ಈ ನೀರನ್ನು ಬಳಸಿಕೊಳ್ಳುತ್ತಿದ್ದು, ಇಷ್ಟೆಲ್ಲಾ ಸಮಸ್ಯೆಯಾದರೂ ಸಹ ಮುಳಗುಂದ ಹಾಗೂ ಶಿರಹಟ್ಟಿ ಪಟ್ಟಣ ಪಂಚಾಯತಿಗಳು ಮಾತ್ರ ತನ್ನ ನಿರ್ವಹಣಾ ಜವಾಬ್ದಾರಿ ಮರೆತು ಕಣ್ಮುಚ್ಚಿ ಕುಳಿತಿವೆ.
ಘಟಕದಲ್ಲಿ ಒಟ್ಟು ಆರು ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತಿದ್ದು, ಈ ನೀರಿನ ಘಟಕದಲ್ಲಿ ತಾಂತ್ರಿಕ ಪರಿಣಿತರಿಲ್ಲದ್ದು ದುರ್ಧೈವದ ಸಂಗತಿಯಾಗಿದ್ದು, ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದು, ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದ್ದು ಸರಿಯಾದ ನಿರ್ವಹಣೆ ಇಲ್ಲದ್ದರಿಂದ ನಾಗರಿಕರಿಗೆ ಕುಡಿಯಲು ನೀರು ಸಿಗದೇ ಹಿಡಿ ಶಾಪ ಹಾಕುತ್ತಿದ್ದಾರೆ.
ರಣತೂರ, ದೇವಿಹಾಳ, ಛಬ್ಬಿ ಗ್ರಾಮಗಳಿಗೆ ಹಾಗೂ ಶಿರಹಟ್ಟಿ, ಮುಳಗುಂದ ಪಟ್ಟಣಗಳಿಗೂ ಸಹ ಇದೇ ಘಟಕದಿಂದ ತುಂಗಭದ್ರ ನದಿ ನೀರು ಪೂರೈಕೆಯಾಗುತ್ತಿದ್ದು ಮುಳಗುಂದ ಹಾಗೂ ಶಿರಹಟ್ಟಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಈಗಲಾದರೂ ಸಹ ಎಚ್ಚೆತ್ತುಕೊಂಡು ಸಮಸ್ಯೆ ಬಗೆ ಹರಿಸಬೇಕೆಂದು ಸುಗನಹಳ್ಳಿ, ಬನ್ನಿಕೊಪ್ಪ ಹಾಗೂ ತಾರಿಕೊಪ್ಪ ಗ್ರಾಮಸ್ಥರು ಆಗ್ರಹಿಸಿದ್ದಾರೆ. ನೀರಿನ ಸಮಸ್ಯೆ ಗ್ರಾಮಗಳಿಗೆ ಆಗುತ್ತಿರುವುದರಿಂದ ಪದೇ ಪದೇ ಜನರ ಸಮಸ್ಯೆಗಳನ್ನು ಆಲಿಸಿದ ಬನ್ನಿಕೊಪ್ಪ ಗ್ರಾಪಂ ಪಿಡಿಒ ಸುರೇಶ ಕಲ್ಲವಡ್ಡರ ಸಾರ್ವಜನಿಕರನ್ನು ಕರೆದುಕೊಂಡು ಕುದ್ದಾಗಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದರು.
ಬಾಕ್ಸ್:
ಈ ಸಮಸ್ಯೆ ಕುರಿತು ನಾನು ಈಗಾಗಲೇ ಮುಳಗುಂದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಜೊತೆ ಮಾತನಾಡಿದ್ದು ಈ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ

-ಎ.ಡಿ.ಅಮರಾವದಗಿ. ತಹಶೀಲ್ದಾರ, ಶಿರಹಟ್ಟಿ
ಬಾಕ್ಸ್:
ಈಗಾಗಲೇ ಪೈಪಲೈನ್ ದುರಸ್ಥಿ ಮಾಡಿಸಿದ್ದು ಮೋಟರ್ ಪಂಪ್ ದುರಸ್ಥಿಯಾದ ಕೂಡಲೇ ಮೂರು ಗ್ರಾಮಗಳಿಗೆ ದಿನಾಲು ತಪ್ಪದೇ ನೀರು ಪೂರೈಸಲು ಕ್ರಮಕೈಗೊಳ್ಳುತ್ತೇನೆ.
-ಕರಿಸಿದ್ಧಪ್ಪ ಬುಗಟೆ, ಎಇಇ, ಗ್ರಾಮೀಣ ನೀರು ಸರಬರಾಜು ಇಲಾಖೆ ಶಿರಹಟ್ಟಿ.
ಬಾಕ್ಸ್:
ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು, ಎಇಇ ಅವರೊಂದಿಗೆ ನಾನು ಮಾತನಾಡಿ ವರದಿ ತರಿಸಿಕೊಂಡು ಮದ್ರಾಸ್‍ಯಿಂದ ಪರಿಣಿತ ಸಿಬ್ಬಂದಿಗಳನ್ನು ಕರೆಯಿಸಿ ಪಂಪ್ ದುರಸ್ಥಿಪಡಿಸಲು ಕೂಡಲೇ ಕ್ರಮ ಕೈಗೊಳ್ಳುತ್ತನೆ.
-ಶಿವಪುತ್ರಪ್ಪ ಅಂಗಡಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮುಳಗುಂದ

loading...