ಭಯೋತ್ಪಾದನೆ ವಿರುದ್ಧ ಮಾತುಕತೆಗೆ ವೇದಿಕೆ ಸಜ್ಜು

0
41
loading...

ವಾಷಿಂಗ್ಟನ್:- ಜಾಗತಿಕ ಪಿಡುಗಾಗಿರುವ ಭಯೋತ್ಪಾದನೆಯ ವಿರುದ್ಧ ಸಮರಕ್ಕೆ ಜಂಟಿ ಹೋರಾಟ, ಇಂಧನ, ರಕ್ಷಣೆ, ಹೆಚ್ 1 ಬಿ 1 ವೀಸಾ ಸೇರಿದಂತೆ, ಹಲವು ಮಹತ್ವದ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಬಹುನಿರೀಕ್ಷಿತ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ.
ಭಾರತೀಯ ನೌಕಾಪಡೆಗೆ ಸರಿಸುಮಾರು 3 ಶತಕೋಟಿ ಡಾಲರ್ ಮೊತ್ತದ ಮಾನವ ರಹಿತ ಗಾರ್ಡಿಯನ್ ಡ್ರೋಣ್‍ಗಳನ್ನು ಭಾರತಕ್ಕೆ ಸರಬರಾಜು ಮಾಡಲು ಅಮೆರಿಕಾ ಉತ್ಸುಕವಾಗಿದ್ದು, ಉಭಯ ನಾಯಕರ ಮಾತುಕತೆ ವೇಳೆ ಇದಕ್ಕೆ ಮುದ್ರೆ ಬೀಳುವ ಸಾಧ್ಯತೆಗಳಿವೆ.
ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಪೋರ್ಚುಗಲ್ ಪ್ರವಾಸ ಮುಗಿಸಿ ಅಮೆರಿಕಾದ ವಾಷಿಂಗ್ಟನ್ ಡಿಸಿ ತಲುಪಿದ್ದು, ಅವರಿಗೆ ರತ್ನಗಂಬಳಿಯ ಸ್ವಾಗತ ದೊರಕಿದೆ.
ಅಮೆರಿಕಾದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ ನಡುವೆ ನಾಳೆ ಮೊದಲ ಭೇಟಿ ನಡೆಯಲಿದೆ. ಹೀಗಾಗಿ ಇವರಿಬ್ಬರ ಮಾತುಕತೆ ತೀವ್ರ ಕುತೂಹಲ ಕೆರಳಿಸಿದೆ.
ಟ್ರಂಪ್ ಆಡಳಿತವೂ ಕೂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದೊಂದಿಗೆ ಹಲವು ಒಪ್ಪಂದಗಳು, ವಿಚಾರ ವಿನಿಮಯ ಮಾಡಿಕೊಳ್ಳಲು ತೀವ್ರ ಉತ್ಸುಕತೆ ಹೊಂದಿದೆ.
ಉಭಯ ನಾಯಕರು ಸರಿಸುಮಾರು 5 ಗಂಟೆಗಳಿಗೂ ಹೆಚ್ಚು ಸಮಯ ಮಾತುಕತೆ ನಡೆಸಲಿದ್ದಾರೆ. ಇದಾದ ಬಳಿಕ ಅಧಿಕಾರಿ ಮಟ್ಟದ ನಿಯೋಗ, ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ಶ್ವೇತ ಭವನದಲ್ಲಿ ಔತಣ ಕೂಟ ಆಯೋಜಿಸಿದ್ದು, ಟ್ರಂಪ್ ಅಧ್ಯಕ್ಷರಾದ ಮೇಲೆ ವಿದೇಶಿ ನಾಯಕರಿಗೆ ಔತಣ ಕೂಟ ಆಯೋಜಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಇತ್ತೀಚೆಗೆ ತೀವ್ರ ಚರ್ಚೆಗೆ ಗುರಿಯಾಗಿರುವ ಹೆಚ್ 1 ಬಿ 1 ವೀಸಾ ನೀತಿಯ ಕುರಿತಂತೆಯೂ ನರೇಂದ್ರ ಮೋದಿ ಅವರು ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಬಳಿಕ ಉಭಯ ನಾಯಕರು ಹವಾಮಾನ ಬದಲಾವಣೆ, ಪ್ಯಾರಿಸ್ ಒಪ್ಪಂದ, ವಲಸೆ ನಿಯಂತ್ರಣ ಸೇರಿದಂತೆ, ಹಲವು ವಿಷಯಗಳ ಕುರಿತಂತೆ ತಮ್ಮ ತಮ್ಮ ಸರ್ಕಾರಗಳ ನಿಲುವನ್ನು ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಿದ್ದಾರೆ.
ಟ್ರಂಪ್ ಜೊತೆಗಿನ ಭೇಟಿಯ ಬಳಿಕ ಅಮೆರಿಕಾದ ಮುಂಚೂಣಿಯ ಕಂಪನಿಯ ಸಿಇಒಗಳ ಜೊತೆ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಅಮೆಜಾನ್‍ನ ಮುಖ್ಯಸ್ಥ ಜೆಸ್ ಬಿಯೋಜ್, ಆಪೆಲ್‍ನ ಮುಖ್ಯಸ್ಥ ಟಿಮ್ ಕುಕ್, ಮೈಕ್ರೋಸಾಫ್ಟ್‍ನ ಸತ್ಯನಾದೆಲ್ಲಾ, ಗೂಗಲ್‍ನ ಸುಂದರ್ ಪಿಚ್ಚೈ ಸೇರಿದಂತೆ, 20ಕ್ಕೂ ಹೆಚ್ಚು ಸಿಇಒಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.
ನಿಜವಾದ ಸ್ನೇಹಿತ
ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಕ್ಕೆ ನಿಜವಾದ ಸ್ನೇಹಿತ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನರೇಂದ್ರ ಮೋದಿ ಅವರೊಂದಿಗೆ ಮೂರು ಬಾರಿ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ಅವರೊಂದಿಗೆ ಮುಖಾಮುಖಿ ಭೇಟಿ ನಡೆಯುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.

loading...