loading...

 ಪಾರಿಶ್ವಾಡದಲ್ಲಿ ಜರುಗಿದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ
ಕನ್ನಡಮ್ಮ ಸುದ್ದಿ-ಖಾನಾಪುರ: 2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಬಹುಮತ ನೀಡಿ ಗೆಲ್ಲಿಸಿದರೆ 24 ಗಂಟೆಯಲ್ಲಿ ರೈತರ ಸಾಲಮನ್ನಾ, ನೆನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ಹಾಗೂ ಮಹಾದಾಯಿ ಯೋಜನೆ ಅನುಷ್ಠಾನ ಮತ್ತು ರೈತರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ತಾಲೂಕಿನ ಪಾರಿಶ್ವಾಡ ಗ್ರಾಮದ ಬಿ.ವಿ ಸಂಬರಗಿ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ಸಂಜೆ ಜರುಗಿದ ಪಕ್ಷದ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಮತ್ತೊಮ್ಮೆ ರಾಮ ರಾಜ್ಯವನ್ನು ಸ್ಥಾಪಿಸುವ ಕೆಲಸ ಮತದಾರರಿಂದ ಆಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ರಾಜ್ಯದ ಅರಣ್ಯದಂಚಿನ ಜನರನ್ನು ಕಾಡುತ್ತಿರುವ ಕಸ್ತೂರಿರಂಗನ್ ವರದಿ ಅನುಷ್ಠಾನವನ್ನು ಬಿಜೆಪಿ ವಿರೋಧಿಸುತ್ತಿದ್ದು, ಕಾನನದಂಚಿನ ಜನರ ಜೀವನಕ್ಕೆ ಧಕ್ಕೆ ಬರುವ ಸಂದರ್ಭದಲ್ಲಿ ಬಿಜೆಪಿ ಜನಪರ ಹೋರಾಟ ಕೈಗೊಳ್ಳಲಿದೆ. ಈಗಾಗಲೇ ಪ್ರಧಾನಿ ಮೋದಿಯವರಿಗೆ ರಾಜ್ಯದ ಸಂಸದರ ನಿಯೋಗದ ಮೂಲಕ ಕಸ್ತೂರಿರಂಗನ್ ವರದಿಯ ಸಾಧಕ-ಬಾಧಕಗಳ ಬಗ್ಗೆ ಮನವರಿಕೆ ಮಾಡಕೊಡಲಾಗಿದ್ದು, ಬಿಜೆಪಿ ಬಡವರ ಪರವಾದ ನಿಲುವು ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ಸಮಾವೇಶ ಉದ್ದೇಶಿಸಿ ಸಂಸದ ಅನಂತಕುಮಾರ ಹೆಗಡೆ, ಪಕ್ಷದ ಜಿಲ್ಲಾಧ್ಯಕ್ಷ ಡಾ.ವಿ.ಐ ಪಾಟೀಲ, ಶಾಸಕ ಸಂಜಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಮಾಜಿ ಶಾಸಕ ಪ್ರಹ್ಲಾದ ರೇಮಾಣಿ, ಮುಖಂಡರಾದ ಸುಭಾಸ ಗುಳಶೆಟ್ಟಿ, ಸಂಜಯ ಕುಬಲ, ಪ್ರಮೋದ ಕೊಚೇರಿ ಮತ್ತಿತರರು ಮಾತನಾಡಿ ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯ ಬಗ್ಗೆ ಸಾರ್ವಜನಿಕರಿಗೆ ವಿವರಿಸಿದರು. ಪಕ್ಷದ ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಸಮಾವೇಶದಲ್ಲಿ ಹಿರೇಹಟ್ಟಿಹೊಳಿ, ಹಿರೇಮುನವಳ್ಳಿ, ಅವರೊಳ್ಳಿ, ಪಾರಿಶ್ವಾಡ, ಇಟಗಿ, ದೇವಲತ್ತಿ, ಗಂದಿಗವಾಡ ಸೇರಿದಂತೆ ತಾಲೂಕಿನ ವಿವಿಧ ಭಾಗದ ನಾಗರಿಕರು ಭಾಗವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಮುಖಂಡರಾದ ವಲ್ಲಭ ಗುಣಾಜಿ, ವಿಠ್ಠಲ ಹಲಗೇಕರ, ಮಂಜುಳಾ ಕಾಪಸೆ, ಅಪ್ಪಯ್ಯ ಕೋಡೊಳಿ, ವೀರೇಶ ದೇವರಮನಿ, ಸಂಜಯ ಕಂಚಿ, ಬಾಬಣ್ಣ ಪಾಟೀಲ, ಮಲ್ಲಪ್ಪ ಮಾರಿಹಾಳ, ಜ್ಯೋತಿಬಾ ರೇಮಾಣಿ, ಪುಂಡಲೀಕ ಕಾರಲಗೇಕರ, ಶಿವಾನಂದ ಗುದ್ಲಿ, ಸುರೇಶ ದೇಸಾಯಿ, ಧನಶ್ರೀ ಸರ್-ದೇಸಾಯಿ, ಕಿರಣ ಕಾಮತ, ಹಣಮಂತ ಪಾಟೀಲ, ಬಾಬುರಾವ್ ದೇಸಾಯಿ, ಜೀತೇಂದ್ರ ಮಾದಾರ, ಶಿವಾನಂದ ಚಲವಾದಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
ಸಮಾವೇಶದ ಬಳಿಕ ಯಡಿಯೂರಪ್ಪ ಬೀಡಿ ಮಾರ್ಗವಾಗಿ ಗೋಲಿಹಳ್ಳಿಗೆ ತೆರಳಿದರು. ಗ್ರಾಮದ ಜಿಪಂ ಮಾಜಿ ಸದಸ್ಯ ಅಶೋಕ ಚಲವಾದಿ ಅವರ ತಾಯಿ ಇತ್ತೀಚೆಗೆ ಮೃತಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಸಾಂತ್ವನ ಹೇಳಿ ಕಕ್ಕೇರಿ ಮೂಲಕ ಹಳಿಯಾಳ ಪಟ್ಟಣದತ್ತ ತೆರಳಿದರು.

loading...