ಮಹಿಳಾ ಕ್ರಿಕೆಟ್ ವಿಶ್ವಕಪ್ ಬಹುಮಾನದ ಮೊತ್ತ ಹತ್ತು ಪಟ್ಟು ಹೆಚ್ಚಳ!

0
49
loading...

ಲಂಡನ್: ಮಹತ್ವದ ಬೆಳವಣಿಗೆಯಲ್ಲಿ ಮೂಲೆಗುಂಪಾಗಿದ್ದ ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಕ್ರಮ ಕೈಗೊಂಡಿದ್ದು, ಇದೇ ಜೂನ್ 24ರಿಂದ ಆರಂಭವಾಗಲಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಬಹುಮಾನದ ಮೊತ್ತವನ್ನು ಹೆಚ್ಚಳ ಮಾಡಿದೆ.
ಸಾಮಾನ್ಯವಾಗಿ ಕ್ರಿಕೆಟ್ ಆಡಳಿತ ಸಂಸ್ಥೆಗಳು ಪುರುಷರ ಕ್ರಿಕೆಟಿಗೆ ನೀಡಿದಷ್ಟು ಪ್ರಾಧಾನ್ಯತೆಯನ್ನು ಮಹಿಳಾ ಕ್ರಿಕೆಟಿಗೆ ನೀಡುವುದಿಲ್ಲ ಎಂಬ ಅಪವಾದವಿದೆ. ಆದರೆ ಈ ಬಾರಿಯ ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಕೊರತೆ ಬಹಳ ದೊಡ್ಡ ಮಟ್ಟದಲ್ಲೇ ನೀಗಲಿದ್ದು, ಮಹಿಳಾ ಕ್ರಿಕೆಟನ್ನೂ ಜನಪ್ರಿಯಗೊಳಿಸುವ ಉದ್ದೇಶದಿಂದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಬಹುಮಾನದ ಮೊತ್ತವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಮೂಲಗಳ ಪ್ರಕಾರ ಮಹಿಳಾ ವಿಶ್ವಕಪ್ 2017 ಟೂರ್ನಿಯ ಚಾಂಪಿಯನ್ ತಂಡಕ್ಕೆ 4 ಕೋಟಿ, 25 ಲಕ್ಷ ರು. ಬಹುಮಾನ ನೀಡುವುದಾಗಿ ಐಸಿಸಿ ಘೋಷಿಸಿದ್ದು, ರನ್ನರ್ ಅಪ್ ತಂಡಕ್ಕೆ 2 ಕೋಟಿ 12 ಲಕ್ಷ ರು. ನೀಡಲಾಗುತ್ತದೆ ಎಂದು ಐಸಿಸಿ ಹೇಳಿದೆ.
ಸೆಮೀಸ್ ನಲ್ಲಿ ಸೋಲುವ ತಂಡಗಳಿಗೂ ನಗದು
ಕೇವಲ ವಿಜೇತ ತಂಡ ಹಾಗೂ ರನ್ನರ್ ಅಪ್ ತಂಡಗಳು ಅಷ್ಟೇ ಅಲ್ಲ ಸೆಮಿಫೈನಲ್ ಗಳಲ್ಲಿ ಸೋಲುವ ತಂಡಗಳಿಗೂ ತಲಾ 1 ಕೋಟಿ 6 ಲಕ್ಷ ರು. ಹಣ ನೀಡುವುದಾಗಿ ಹೇಳಿದೆ. ಅಂತೆಯೇ ಗ್ರೂಪ್ ಹಂತಗಳಲ್ಲಿ ಸೋತು ಮನೆಗೆ ತೆರಳುವ ತಂಡಗಳಿಗೂ ನಗದು ಪುರಸ್ಕಾರವಿದ್ದು, ಈ ತಂಡಗಳಿಗೆ ತಲಾ 12 ಲಕ್ಷ ರು. ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಮಹತ್ವದ ಬೆಳವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಡಿಆರ್ ಎಸ್ ನಿಯಮ ಅಳವಡಿಕೆಗೆ ಐಸಿಸಿ ಆಸ್ತು ಎಂದಿದೆ.
ಈ ಹಿಂದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಗೆ ಆತಿಥ್ಯ ವಹಿಸಿದ್ದ ಇಂಗ್ಲೆಂಡ್ ಮತ್ತೊಂದು ಮಹತ್ವದ ಕ್ರಿಕೆಟ್ ಸರಣಿಗೆ ಸಜ್ಜಾಗಿದ್ದು, 2017ನೇ ಸಾಲಿನ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೂ ಆತಿಥ್ಯ ವಹಿಸಿದೆ. ಅಂತೆಯೇ ಮಹಿಳಾ ಕ್ರಿಕೆಟ್ ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಐಸಿಸಿ ಈ ಭಾರಿಯ ಟೂರ್ನಿಯಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಸರಣಿಯಲ್ಲಿ ಅಂಪೈರ್ ಡಿಸಿಷನ್ ರಿವ್ಯೂ ಸಿಸ್ಟಮ್-ಡಿಆರ್ ಎಸ್ ವ್ಯವಸ್ಥೆಯನ್ನು ಅಳವಡಿಸುವುದಾಗಿ ಘೋಷಣೆ ಮಾಡಿದೆ.
ಇದೇ ಜೂನ್ 24ರಿಂದ ಇಂಗ್ಲೆಂಡ್ ನಲ್ಲಿ ಮಹಿಳಾ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದ್ದು, ಈ ಪಂದ್ಯಾವಳಿಗೆ ಯುಕೆ ಆತಿಥ್ಯ ವಹಿಸಿಕೊಂಡಿದೆ. ಜಗತ್ತಿನ ಅಗ್ರ ಎಂಟು ಕ್ರಿಕೆಟ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಮುಂದಿನ ತಿಂಗಳ 23ರವರೆಗೆ ಟೂರ್ನಿ ನಡೆಯಲಿದೆ. ಟಾಪ್ 8 ತಂಡಗಳಾಗಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಭಾರತ, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸರಣಿಯಲ್ಲಿ ಪಾಲ್ಗೊಳ್ಳುತ್ತಿವೆ.
ಈಗಾಗಲೇ ಸರಣಿಯ ಅಭ್ಯಾಸ ಪಂದ್ಯಗಳು ಚಾಲ್ತಿಯಲ್ಲಿದ್ದು, ಜೂನ್ 24 ಶನಿವಾರದಿಂದ ಟೂರ್ನಿ ಆರಂಭವಾಗಲಿದೆ. ಭಾರತದ ಅಭಿಯಾನ ಕೂಡ ಇದೇ 24ರಿಂದ ಆರಂಭವಾಗಲಿದೆ. 31 ಪಂದ್ಯಗಳ ಪೈಕಿ 10 ಪಂದ್ಯಗಳಿಗೆ ಮಾತ್ರ ನೇರ ಪ್ರಸಾರದ ಅವಕಾಶ ಇನ್ನು ಸರಣಿಯಲ್ಲಿ ಒಟ್ಟು 31 ಪಂದ್ಯಗಳನ್ನು ಆಡಿಸಲಾಗುತ್ತಿದ್ದು, ಈ ಪೈಕಿ ಕೇವಲ 10 ಪಂದ್ಯಗಳಿಗೆ ಮಾತ್ರ ಐಸಿಸಿ ನೇರ ಪ್ರಸಾರದ ಅವಕಾಶ ಕಲ್ಪಿಸಿದೆ. ಪ್ರಾಯೋಜಕರ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದು ರೌಂಡ್ ರಾಬಿನ್ ಮಾದರಿಯ ಪಂದ್ಯಾವಳಿಯಾಗಿದ್ದು, ಲೀಗ್ ಹಂತದಲ್ಲಿ ಪ್ರತಿಯೊಂದು ತಂಡ ಉಳಿದ 7 ತಂಡಗಳ ವಿರುದ್ಧ ಒಂದೊಂದು ಪಂದ್ಯವನ್ನು ಆಡಲಿದೆ. ಮಿಥಾಲಿ ರಾಜ್ ನಾಯಕತ್ವದಲ್ಲಿ ಭಾರತ ತಂಡ ಜು. 24ರಂದು ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡನ್ನು ಎದುರಿಸಲಿದೆ.

loading...