ರಾಜಕೀಯಲ್ಲಿ ಉನ್ನತ ಸ್ಥಾನ ತ್ಯಾಗ-ನೀರಾವರಿ ಯೋಜನೆಗಳ ಜಾರಿಗೆ ಸತತ ಕಾರ್ಯ: ಜಲಸಂಪನ್ಮೂಲ ಸಚಿವರು

0
29

ಕನ್ನಡಮ್ಮ ಸುದ್ದಿ-ವಿಜಯಪುರ
ಅವಕಾಶಗಳು ದೊರೆತಾಗ ಅದರ ಸದ್ಬಳಕೆ ಆಗಬೇಕು ಎಂಬ ಸದುದ್ದೇಶದಿಂದ ರಾಜಕೀಯವಾಗಿ ಉನ್ನತ ಸ್ಥಾನಗಳು ಲಭ್ಯವಿದ್ದಾಗಲೂ, ಅದನ್ನು ತ್ಯಾಗ ಮಾಡಿ ರಾಜ್ಯದ ನೀರಾವರಿ ಯೋಜನೆಗಳ ಜಾರಿಗಾಗಿ ಸತತ ಕಾರ್ಯಮಾಡುತ್ತಾ ನನ್ನ ಅವಧಿಯ ಕೊನೆಯ ತಕ್ಷಣದವರೆಗೂ ಕೇಲಸ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಂಬಾಗಿ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆಯಿಂದ 1 ಕೋಟಿ ರೂ. ವೆಚ್ಚದಲ್ಲಿ ಬಾಂದಾರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲೆಡೆ ನೀರಾವರಿ ಕಾರ್ಯ ಭರದಿಂದ ಸಾಗಿದ್ದು, ನನ್ನ ಅವಧಿಯಲ್ಲಿಯೇ ಹೆಚ್ಚಿನ ಯೋಜನೆಗಳನ್ನು ಪೂರ್ಣಗೊಳಿಸಲು ಹಗಲಿರುಳು ಕಾರ್ಯ ಮಾಡುತ್ತಿದ್ದೆನೆ. ಆದರೆ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ. ಸತತ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಿ, ಕೆರೆಗಳನ್ನು ತುಂಬಿಸಲು ದಶಕಗಳ ಹಳೆಯ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿ, ಅಜ್ಜಂಪುರ ಹತ್ತಿರ ಸುರಂಗ ಮಾರ್ಗ ಕೊರೆದು ನೀರು ಹರಿಸುವುದಾಗಿ ನಾನು ಮಾತು ಕೊಟ್ಟಿದ್ದೆ. ಆದರೆ ಸುರಂಗ ಮಾರ್ಗದಲ್ಲಿ ಹಾರ್ಡ್‍ರಾಕ್ ಹತ್ತಿರುವುದರಿಂದ ಕೆಲಸ ವಿಳಂಬವಾಗಿದೆ. ಇದರಿಂದ ಈ ಯೋಜನೆ ಅಡಿ ಪ್ರಸಕ್ತ ಅವಧಿಯಲ್ಲಿ ನೀರು ಕೊಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಆತ್ಮಸಾಕ್ಷಿ ಅನುಗುಣವಾಗಿ ಕಾರ್ಯ ಮಾಡುತ್ತಿದ್ದು, ಶ್ರೀ ಸಿದ್ಧೇಶ್ವರ ಶ್ರೀಗಳ ಹಿತ ವಚನದಂತೆ ನನ್ನ ಕ್ಷೇತ್ರ, ಸಂಸ್ಥೆ, ಕುಟುಂಬ ಎಲ್ಲವನ್ನು ಬದಿಗಿಟ್ಟು ನೀರಾವರಿ ಕ್ಷೇತ್ರಕ್ಕಾಗಿ ಕಾರ್ಯ ಮಾಡುತ್ತಿದ್ದೇನೆ ಎಂದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಸುಮಾರು 100 ಬಾಂದಾರಗಳನ್ನು ನನ್ನ ಅವಧಿಯಲ್ಲಿ ನಿರ್ಮಿಸಿದ್ದು, ಇಲ್ಲಿ ಬೀಳುವ ಒಂದು ಹನಿ ನೀರು ಕೂಡ ಹರಿದು ಹೋಗದಂತೆ ಇನ್ನೂ ಅಗತ್ಯವಿರುವ ಕಡೆ ಬಾಂದಾರಗಳನ್ನು ನಿರ್ಮಿಸಲು ಸಿದ್ದನಿದ್ದು, ಆಯಾ ಗ್ರಾಮಸ್ಥರು, ಯುವಕರು, ನನಗೆ ಎಲ್ಲಲ್ಲಿ ಬಾಂದಾಗಳನ್ನು ಬೇಕು ಎಂಬುದನ್ನು ಪಟ್ಟಿ ಕೊಡಿ, ಒಂದು ತಿಂಗಳಲ್ಲಿ ಮಂಜೂರಾತಿ ನೀಡುತ್ತೇನೆ ಎಂದರು. ನೀರಿನ ಇಂಗುವಿಕೆಯಲ್ಲಿ ಬಬಲೇಶ್ವರ ಮಾದರಿ ಕ್ಷೇತ್ರವಾಗಲಿದ್ದು, ಬೇರೆ ರಾಜ್ಯಗಳಿಂದ ಜನ ಇಲ್ಲಿ ನೀರು ಸಂಗ್ರಹಣೆ ಕುರಿತು ಅಭ್ಯಾಸಕ್ಕೆ ಬರುವಂತೆ ಮಾಡಲು ಮಾದರಿ ಯೋಜನೆಗಳನ್ನು ಇಲ್ಲಿ ಜಾರಿ ಮಾಡುತ್ತಿದ್ದೇನೆ ಎಂದರು.
ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ನಂದಿ ಕಾರ್ಖಾನೆ ಅದ್ಯಕ್ಷ ಕುಮಾರ ದೇಸಾಯಿ, ನಿರ್ದೇಶಕ ಉಮೇಶ ಮಲ್ಲಣ್ಣವರ, ಯುವ ಮುಖಂಡ ಸಂಗಮೇಶ ಬಬಲೇಶ್ವರ, ಅಪ್ಪುಗೌಡ ಪಾಟೀಲ ಶೇಗುಣಸಿ, ಭೀಮಣ್ಣ ಕುಚನೂರ, ಷಣ್ಮೂಖ ಮೇಲ್ಗಡೆ, ರಂಗನಗೌಡ ಪಾಟೀಲ, ರಮೇಶ ದೇಸಾಯಿ, ನಾರಾಯಣ ಫಕೀರಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.

loading...