ರಾಯಣ್ಣನೆನ್ನುವ ರಣಧೀರನನ್ನು ರಾಜಕೀಯವಾಗಿ ನೆನೆಯುವ ಮುನ್ನ….!!

0
290
loading...

ಕಿತ್ತೂರು ಸಮರ ಕಲಿಗಳ ಜನ್ಮ ಭೂಮಿ.ಮಲ್ಲಸಜ್ಜ ದೊರೆಯ ರಾಜ ಪ್ರಭುತ್ವದಲ್ಲಿ ನೆಮ್ಮದಿಯ ದಿನಗಳು ಕಳೆಯುತ್ತಾ ಸುಖದ ಸುಪತ್ತಿಗೆಯಲ್ಲಿ ಜೀವನ ಸಾಗಿಸುವ ಪ್ರಜೆಗಳು ಮಲ್ಲಸಜ್ಜ ದೊರೆಯನನ್ನು ದೇವರೆಂದು ಪೂಜಿಸುತ್ತಿದ್ದರು.ಸಂಪದ್ಭರಿತ ಭೂಮಿಯಿಂದ ಕಂಗೋಳಿಸುತ್ತಿದ್ದ ಪುಟ್ಟ ಕಿತ್ತೂರು ರಾಜ ಭೂಮಿಯಲ್ಲಿ ರಾಜ ಲಕ್ಮಿ ನಿತ್ಯವೂ ನೃತ್ಯ ಮಾಡುತ್ತಿದ್ದಳಂತೆ..! ಅಷ್ಟೋಂದು ನೆಮ್ಮದಿಯ ನಾಡಾಗಿತ್ತು ನಮ್ಮ ಕಿತ್ತೂರು.ಕಷ್ಟಗಳ ಪರಿಚಯವೆ ಇಲ್ಲದ ನೆಮ್ಮದಿಯ ರಾಜ ಅದು.ಮಲ್ಲ ಸಜ್ಜ ದೊರೆಯ ಅಕಾಲಿಕ ನಿಧನ,ದತ್ತು ಮಕ್ಕಳಿಗೆ ಹಕ್ಕು ಇಲ್ಲ ವೆನ್ನುವ ಆಂಗ್ಲರ ಜಂಭದ ನಿರ್ಧಾರ ಕಿತ್ತೂರನ್ನು ಸಿಡಿದೇಳುವಂತೆ ಮಾಡಿತ್ತು.ಅಂದಿನಿಂದ ಪ್ರಾರಂಭವಾದ ಪ್ರಥಮ ಸ್ವಾತಂತ್ರ್ಯ ಹೋರಾಟ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದಂತೆ ಛಾಪು ಮೂಡಿಸಿದೆ.ಅಂಥಹ ವೀರ ಮಣ್ಣಿನಲ್ಲಿ ಹುಟ್ಟಿದ ಮಕ್ಕಳು ನಾವು ಎಂದು ಆತ್ಮಾಭಿಮಾನ ಪಡಬೇಕು.

ರಾಯಣ್ಣನನ್ನು ನೆನೆಯುವ ಮುನ್ನ ನಾವು ಸ್ವಾಭಿಮಾನಿ ನೆಲ ಕಿತ್ತೂರನ್ನು ನೆನೆಯಲೇಬೆಕಾಗುತ್ತದೆ.ಇ ರಾಜ  ಮನೆತನವೇ ರಾಯಣ್ಣನ ವೀರತ್ವಕ್ಕೆ ನೀರೆರೆದು ಪೋಷಣೆ ಮಾಡಿದ್ದು.  ಕಿತ್ತೂರು ಅರಸು ಮನೆತನದ ಇತಿಹಾಸ ಕ್ರಿ.ಶ.೧೫೮೫ರಿಂದ ಆರಂಭವಾಗುತ್ತದೆ.ಇದರ ಸ್ಥಾಪಕರು ‘ಹಿರೇಮಲ್ಲಶೆಟ್ಟಿ’ ಮತ್ತು ‘ಚಿಕ್ಕ ಮಲ್ಲಶೆಟ್ಟಿ’ ಎಂಬ ಶೂರ ಸೇನಾನಿಗಳು.ಬಿಜಾಪುರದ ಆದಿಲ್ ಶಾಹಿಗಳಿಂದ ಈ ನಾಡನ್ನು ಬಳುವಳಿಯಾಗಿ ಪಡೆದರು.ಶೂರ ಸಂತತಿಯ ವಾರಸುದಾರಿಕೆಯಿಂದ ಕೂಡಿದ ಕಿತ್ತೂರಿನ ಅರಸ ಸಂತತಿಯಲ್ಲಿ ಒಬ್ಬರಿಗಿಂತ ಒಬ್ಬರೂ ಪರಾಕ್ರಮ ಶಾಲಿಗಳೆ ಈ ರಾಜ್ಯವನ್ನು ಆಳಿದ್ದು ವಿಶೇಷ.ಸುಮಾರು ೨೩೯ ವರ್ಷಗಳ ಕಾಲ ಕಿತ್ತೂರು ರಾಜ ಮನೆತನ ಅಸ್ತಿತ್ವದಲ್ಲಿ ಇತ್ತು ಎಂದು ಹೇಳಲಾಗುತ್ತದೆ. ೧೨ ಜನ ಅರಸರು ಆಗಿ ಹೋಗಿದ್ದಾರೆ ಅವರಲ್ಲಿ ೧೬೬೦ ರಿಂದ ೧೬೯೧ರ ವರೆಗೆ ಆಳಿದ ಅಲ್ಲಪ್ಪಗೌಡ ಸರ್ ದೇಸಾಯಿ ವಿಖ್ಯಾತನು.ಅವನು ಕಿತ್ತೂರು ಅರಸು ಮನೆತನದ ೫ ನೆ ಅಧಿಪತಿ.ಅವನ ಕಾಲಕ್ಕೆ ಕಿತ್ತೂರು ರಾಜ್ಯದ ರಾಜಧಾನಿಯಾಯಿತು.ಆತನು ೧೬೮೨ರಲ್ಲಿ ಇಲ್ಲಿಗೆ ಬಂದು ನೆಲೆಸಿದ.ಅಲ್ಲಿಯವರೆಗೂ ಆ ಹಳ್ಳಿಗೆ ” ಗೀಜಗನ ಹಳ್ಳಿ ” ಎಂದು ಕರೆಯುತ್ತಿದ್ದರು.ಇಂದು ಕಿತ್ತೂರಿನಲ್ಲಿ ನಮಗೆ ಕಾಣ ಸಿಗುವ ಅಳಿದುಳಿದ ಕೋಟೆ ಅವನ ಕಾಲದಲ್ಲಿಯೇ ಕಟ್ಟಲಾಯಿತು.ಇಂಥಹ ಪರಾಕ್ರಮಿಗಳ ವಂಶ ವೃಕ್ಷ ಕಿತ್ತೂರಿನಲ್ಲಿ ಪ್ರಪ್ರಥಮ ಸ್ವಾತಂತ್ರ್ಯ ಜ್ಯೋತಿಯನ್ನು ಹೊತ್ತಿಸಿ,ಅದರ ಕಿಡಿಯನ್ನು ಭರತ ಖಂಡಕ್ಕೂ ವಿಸ್ತರಿಸಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿ ಭಾರದಲ್ಲಿ ಆಂಗ್ಲರ ಅಸ್ತಿತ್ವವನ್ನೆ ಸುಟ್ಟು ಹಾಕಿದ್ದು ಮಾತ್ರ ರೋಚಕ.

ಇಂಥಹ ಕಿತ್ತೂರು ರಾಜ್ಯರಲ್ಲಿ ಮಲ್ಲಸರ್ಜನ ಆಳ್ವಿಕೆ ಅತ್ಯಂತ ವೈಭವಪೂರ್ಣ.ಹಾಗು ಅನೇಕ ಮಹತ್ವದ ಘಟನೆಗಳಿಂದ ಒಡಗೂಡಿದ ಕಾಲ.ಅದು ಕಿತ್ತೂರಿನ ಇತಿಹಾಸದಲ್ಲಿ ಅತ್ಯಂತ ಕಷ್ಟದ ಕಾಲವೂ ಹೌದು.ಕಿತ್ತೂರು ರಾಜ್ಯವನ್ನು ಆತನು ೩೪ ವರ್ಷಗಳ ಕಾಲ ಆಳಿದನು.ಮಲ್ಲಸರ್ಜ ದೊರೆ ಕಿತ್ತೂರಿನ ರಾಜರಲ್ಲಿ ಅತ್ಯಂತ ಪ್ರಖ್ಯಾತ ಹಾಗು ಗೌರವಾನ್ವಿತ ದೊರೆ.ಇತನ ಎರಡನೆಯ ಧರ್ಮ ಪತ್ನಿ ವೀರ ರಾಣಿ ಚೆನ್ನಮ್ಮ.ಗಂಡನಿಗೆ ಆದರ್ಶ ಪತ್ನಿಯಾಗಿ,ರಾಜ್ಯ ಭಾರದ ನೊಗವನ್ನು ಪತಿಯೊಂದಿಗೆ ತಾನೂ ಎಳೆದು ಕಿತ್ತೂರು ಇತಿಹಾಸ ಅಜರಾಮರ ಗೋಳಿಸಿದ ಕೀರ್ತಿ ಈ ಮಹಾ ತಾಯಿಗೆ ಸಲ್ಲುತ್ತದೆ.ಮಲ್ಲ ಸರ್ಜ ದೊರೆಯನ್ನು ಶಿವಾಜಿಯ ದಂಡನಾಯಕ ಬಾಜಿರಾಯ ಮೋಸದಿಂದ ಬಂಧಿಸಿ ಪುಣೆಯಲ್ಲಿಟ್ಟಾಗ  ರಾಜ್ಯ ಭಾರದ ನೊಗ ಹೋತ್ತ ಚೆನ್ನಮ್ಮ ಕಿತ್ತೂರು ರಾಜ್ಯ ರಕ್ಷಕಳಾಗಿ ನಿಂತಳು.ಅವಳ ಜೀವನ ಮತ್ತು ಬದುಕೆ ಒಂದು ಆದರ್ಶ.ಇಂಥಹ ವೀರ ವನಿತೆಯ ನಾಡ ಭಕ್ತಿ,ರಾಜ್ಯ ಭಕ್ತಿಯನ್ನು ಮೆಚ್ಚಿ ಸೇವಕನಾಗಿ ಬಂದ ರಾಯಣ್ಣ ಮುಂದೆ ಚನ್ನಮ್ಮಳ ದತ್ತು ಮಗನಾಗಿ ರಾಜ್ಯ ರಕ್ಷಣೆಯ ಸಂಕಲ್ಪ ತೊಟ್ಟ.ತಾಯಿ ಚೆನ್ನಮ್ಮಳ ಕಿತ್ತೂರು ಸ್ವಾತಂತ್ರ್ಯದ ಕನಸು ನನಸು ಮಾಡಲು ರಾಯಣ್ಣ ಅನುಭವಿಸಿದ ಕಷ್ಟ,ನಷ್ಟ,ನೋವು,ಇಂದಿನ ಬಹುತೇಕರಿಗೆ  ಅರಿವಿಲ್ಲ.ರಾಯಣ್ಣ ಛಲಗಾರ.ಅಂದುಕೊಂಡಿರುವುದನ್ನು ಮಾಡಿ ತೋರಿಸುವ ಗಂಡೆದೆಯ ವೀರ.ಅದನ್ನು ಅದೆಷ್ಟೋ ಸಲ ಸಾಬಿತು ಪಡಿಸಿದ್ದಾನೆ.ತ್ಯಾಗ,ಬಲಿದಾಗಳಿಂದ ಕಟ್ಟಿದ ಕಿತ್ತೂರು ನಾಡಿನಲ್ಲಿ ಜಾತಿಯ ವಿಷ ಬಿಜ ಬಿತ್ತದೆ ಸಮಾನತೆಯ ಸಾಧನವಾಗಿ ರಾಯಣ್ಣ ನಮ್ಮ ಕಣ್ಣಿಗೆ ಕಾಣಸಿಗುತ್ತಾನೆ.ತನ್ನ ಜೀವನದ ಸರ್ವಸ್ವವೇ ಕಿತ್ತೂರು ಸಾಮ್ರಾಜ್ಯಕ್ಕಾಗಿ ಮಿಸಲಿಟ್ಟ ಆ ರಣಧೀರನನ್ನು ನಾವು ಇಂದು ಜಾತಿಯಿಂದ ನೆನೆಯುತ್ತಿರುವುದು ಯಾವ ಸಾಧನೆಗಾಗಿ?.ನಾಯಕ ನಿಷ್ಠೆಯಲ್ಲಿ ರಾಯಣ್ಣನನ್ನು ಮಿರಿಸುವ ವ್ಯಕ್ತಿತ್ವ ಇನ್ನೂಬ್ಬರದಿಲ್ಲ.ಇ ಗುಣದಿಂದಾಗಿಯೇ ರಾಯಣ್ಣ ಬ್ರಿಟಿಷ್ ರ ಮೆಚ್ಚುಗೆಗೂ ಪಾತ್ರನಾಗಿದ್ದ.ತನ್ನ ಮನೆತನಕ್ಕಿದ್ದ ವಾಲಿಕಾರಿಕೆಯನ್ನು ಜನರಿಗೆ ನೋವಾಗದಂತೆ ನಿರ್ವಹಣೆ ಮಾಡುತ್ತಿದ್ದ ರಾಯಣ್ಣನನ ಜನ ಪ್ರೇಮ ಆಂಗ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ಸಂಪಗಾವಿಯ ಕಲೆಕ್ಟರ್ ರಾಯಣ್ಣನ ನಾಡ ಪ್ರೇಮವನ್ನು ಮೆಚ್ಚಿ ಕಂಪನಿಯ ಸರಕಾರಕ್ಕೆ ಬಲವಂತವಾಗಿ ಭೂ ಕಂದಾಯ ವಸೂಲು ಮಾಡುವುದು ಬೇಡ.ಇಲ್ಲಿಯ ಜನ ಬಹಳ ಸ್ವಾಭಿಮಾನಿಗಳು ಮತ್ತು ಗೌರವ ನಿಷ್ಠರು.ಅವರು ಬಂಡೆದ್ದರೆ ನಮಗೆ ಉಳಿಗಾಲವಿಲ್ಲ.ರಾಯಣ್ಣ ಎನ್ನುವ ವಾಲಿಕಾರನ ನಿಷ್ಠಯಿಂದಲೇ ನಮಗದು ತಿಳಿಯುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟ.ಅಂಥಹ ಉತ್ಕಟ ನಾಡ ಪ್ರೇಮಿಯನ್ನು ಇಂದು ನಾವು ರಾಜಕಾರಣದ ಬೆಳೆ ಬೆಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ? ಹಿಂದುಳಿದವರ ಏಳಿಗೆಗಾಗಿ ರಾಯಣ್ಣನ ಹೆಸರು ಬಳಸಿಕೊಳ್ಳುವುದಾಗಿ ಹೇಳುವವರು ತಾವು
ಅಧಿಕಾರದಲ್ಲಿದ್ದಾಗ ಹಿಂದುಳಿದವರ ಏಳಿಗೆ ಯಾಕೆ ಮಾಡಲಾಗಲಿಲ್ಲ? .ನಾಡಿನ ಸ್ವಾಭಿಮಾನಿ ಯುವ ಶಕ್ತಿ ಇಂದು ರಾಯಣ್ಣನ ಹೆಸರಲ್ಲಿ ಒಂದಾಗುತ್ತಿರುವುದು ನೋಡಿದರೆ  ಸಂತೋಷವಾಗುತ್ತದೆ.ಆದರೆ ಆ ಒಗ್ಗಟ್ಟನ್ನು  ರಾಜಕಾರಣಕ್ಕೆ  ಅಡಿಯಾಳಾಗಿ ಇಡುತ್ತಿರುವುದು ನೋವಿನ ಸಂಗತಿ .ಚೆನ್ನಮ್ಮ ಮತ್ತು ರಾಯಣ್ಣನ ಹೆಸರು ರಾಜಕೀಯವಾಗಿ ಬಳಿಸಿಕೊಳ್ಳುವ ಯೋಗ್ಯತೆ ನಮಗ್ಯಾರಿಗೂ  ಇಲ್ಲ.ಜಾತಿ,ಧರ್ಮದ ಎಲ್ಲೇ ಮೀರಿ ಸುಂದರ ಸಮಾಜ ಕಟ್ಟಿದವರು ಅವರು.ಇಂದು ರಾಯಣ್ಣ ಮತ್ತು ಚೆನ್ನಮ್ಮನನ್ನು  ರಾಜಕೀಯವಾಗಿ ವಿಭಜಿಸುವ ಕೆಲಸ ನಡೆಯುತ್ತಿದೆ.ತಾಯಿ ಮತ್ತು ಮಗನ ಆದರ್ಶ ಸಂಬಂಧಕ್ಕೆ ಎಳ್ಳು-ನೀರು ಬಿಡುವ ಕೆಲಸ ಮಾಡಲು ಹೊರಟಿರುವುದು ನಿಜಕ್ಕೂ ಖಂಡನಿಯ. ಈ ಹಿಂದೆ ಅಹಿಂದ ಹೆಸರಿನಲ್ಲಿ  ಉಡುಪಿಯಲ್ಲಿ ಶ್ರೀಕೃಷ್ಣ ಮತ್ತು ಕನಕನನ್ನು ಬೀದಿಗೆ ತಂದು ನಿಲ್ಲಿಸುವ ಕೆಲಸ ಮಾಡಲಾಯಿತು ಅದನ್ನು ಹಿಂದುಳಿದವರ ಮತ್ತು ಮುಂದುವರೆದವರ ನಡುವಿನ ಯುದ್ಧವೆಂದೇ ಬಿಂಬಿಸಲಾಯಿತು.ಆದರೆ ಆದದ್ದೇನು? ಹಿಂದುಳಿದವರ ಹೆಸರಿನಲ್ಲಿ ಅಲ್ಲಿ ಅಂದು ನಡೆದದ್ದು ರಾಜಕೀಯ ಭಜನೆ.ಆ ಭಜನೆಯ ನಾದಕ್ಕೆ ವಿಧಾನಸೌಧ ಮೇಲೆದ್ದಿತೆ ವಿನಹ: ಹಿಂದುಳಿದವರು ಮೇಲೆಳಲೇ ಇಲ್ಲ.ಕನಕ ಮತ್ತು ಕೃಷ್ಣರ ಸಂಬಂಧ ಗುರು-ಶೀಷ್ಯರಗಿಂತಲೂ ಮಿಗಿಲಾಗಿತ್ತು.ಅದನ್ನು ಜಾತಿಯ ಹೆಸರಲ್ಲಿ ವ್ಯವಸ್ಥಿತವಾಗಿ ಒಡೆಯಲಾಯಿತು.ಇಂದು ಮತ್ತದೇ ವಿಭಜನೆಯ ನಾದ ಕೇಳಿ ಬರುತ್ತಿದೆ.ಈ ಭಜನೆಯು ತಾಯಿ ಮತ್ತು ಮಗನ ಸಂಬಂಧ ವಿಭಜನೆ ಮಾಡುವ  ಮತ್ತೊಂದು ಪಂಥಕ್ಕೆ ನಾಂದಿ ಹಾಡುವ ಕೆಲಸ ಮಾಡುತ್ತಿದೆ.ಇಲ್ಲೂ ಉಡುಪಿಯ ಕನಕನ ಕಿಂಡಿಯದೆ  ಮಂತ್ರ ಆದರೆ ಇಲ್ಲಿ ಪಾತ್ರಧಾರಿ,ನಾಟ್ಯಧಾರೆ ಎಲ್ಲವೂ ಬೇರೆ…! ಹಿಂದುಳಿದವರ ಅಭಿವೃದ್ಧಿಗಾಗಿ ಎಂದು ಬೋರ್ಡ ಹಾಕಿಕೊಂಡು ಹೊರಟ ‘ದಂಡ’ ನಾಯಕರುಗಳು ದಂಡೇ ಇಲ್ಲಿದೆ.ಬೋರ್ಡು ಹಾಕಿಕೊಂಡು ಹೊರಟ ಇಂಥಹ ‘ದಂಡ’ ನಾಯಕರಿಂದ  ಹಿಂದುಳಿದವರ ಅಭಿವೃದ್ಧಿ  ಸಾಧ್ಯನಾ? ಹಿಂದುಳಿದ ಸಮಾಜಗಳನ್ನು ದೀಪವಾಗಿ ಬೆಳಗಿದ ದೇವರಾಜ ಅರಸುರವರ ಆತ್ಮವೆ ಇವರುಗಳಿಗೆ ಉತ್ತರಿಸಬೇಕು. ಜಾತಿಗಳ ಹೆಸರಲ್ಲಿ ಸಾಮಾಜಿಕ ಸಾಮರಸ್ಯ ಹಾಳು ಮಾಡುವುದೇ ಇವರುಗಳ ರಾಜಕಾರಣದ ಕಾಯಕ ಎಂದು ಬೋರ್ಡ್ ಹಾಕಿಕೊಂಡಿರುವ ಈ ನಕಲಿ ಕಾಯಕ “ಜೋಗಿಗಳಿಗೆ “ನಾಡಿನ  ಧಿಟ್ಟ ಯೋಗಿಗಳು ಉತ್ತರ ನೀಡಬೇಕಾಗಿದೆ. ತಮ್ಮ ರಾಜಕೀಯ ಅಸ್ತಿತ್ವದ ಅಸ್ಮಿತೆಯನ್ನು  ಕಂಡುಕೊಳ್ಳಲು ಹೊಂಚು ಹಾಕಿ ಕಾಯುತ್ತಿರುವ ಜನರಿಗೆ ನಾವ್ಯಾಕೆ ನಮ್ಮವರ ಆದರ್ಶಗಳನ್ನು ಮಾರಾಟ ಮಾಡಬೇಕು? ನಾವ್ಯಾಕೆ ನಮ್ಮ ವೀರ ಪರಂಪರೆಯನ್ನು ಅವರಿಗೆ ಅಡವಿಡುವ ಕೆಲಸ ಮಾಡಬೇಕು? . ದುರುಳರಿಗೆ ದಾಸರಾಗಿ ದಾಸ್ಯದಲ್ಲಿ ಬದುಕುವುದು ಬೇಡ ಎಂದು ರಣ ಮಂತ್ರದ ಉಚ್ಛಾರ ಮಾಡಿದ ರಣಧೀರ ರಾಯಣ್ಣನನ್ನು ನಾವು ಇವರುಗಳ ಸ್ವಾರ್ಥ ರಾಜಕಾರಣಕ್ಕೆ ಅಡವಿಡಬಹುದೆ? ಈ ನಾಡಿನ ವೀರ ಚರಿತ್ರೆಯ ಜೊತೆಯಲ್ಲಿ ಆಟವಾಡಿ ಅಸ್ತಿತ್ವ ಕಟ್ಟಿಕೊಳ್ಳಲು ಹವಣಿಸುತ್ತಿರುವವರಿಗೆ ದಿಟ್ಟ ಉತ್ತರ ನೀಡುವ ಕೆಲಸ ಈ ನಾಡಿನ ಸ್ವಾಭಿಮಾನಿ ಯುವ ಶಕ್ತಿ  ಮಾಡಬೇಕಾಗಿದೆ.ರಾಜಕಾರಣದ ಹೆಸರಲ್ಲಿ ಸಮಾಜ ಮತ್ತು ಮನಸ್ಸು ಒಡೆಯುವ ಕೆಲಸ ಮಾಡುತ್ತಿರುವವರನ್ನು ಕೊರಳು ಪಟ್ಟಿ ಹಿಡಿದು ತಡೆದು ನಿಲ್ಲಿಸಬೇಕಾಗಿದೆ.ಸಮಾನತೆಯ ಸಾರಿದ ಈ ನೆಲದಲ್ಲಿ ಸಾಧಕರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತುವ ಕೆಲಸ ಮಾಡಬೇಕಾಗಿದೆ. ಈ ನಾಡಿನ ಚರಿತ್ರೆಗೆ ಅವರೆಲ್ಲರೂ ಬೆಳಕಾಗಿ ನಿಂತವರು .ಮತ್ತೊಬ್ಬರಿಗೆ ಬೆಳಕು ತೋರಿದ ಅವರುಗಳು ಇಂದು ನಮ್ಮ ಸ್ವಾರ್ಥಕ್ಕೆ ಬಲಿಯಾಗುವುದು ಬೇಡ.

ರಾಯಣ್ಣನದು ವೀರ ಪರಂಪರೆಯ ಮನೆತನ.ಪಾರಂಪರಿಕವಾಗಿ ಅವನ ಮನೆತನದ ವೀರತನದಿಂದಾಗಿ ಕಿತ್ತೂರು ಸಂಸ್ಥಾನದ ದೇಸಾಯರ ಪ್ರೀತಿಗೆ ಪಾತ್ರವಾಗಿತ್ತು.ರಾಯಣ್ಣ ಅಜ್ಜ ರಾಗಪ್ಪ ಅಪ್ರತಿಮ ವೀರನಾಗಿದ್ದ ಕಿತ್ತೂರು ದೇಸಾಯಿಗಳ ಜೊತೆಯಲ್ಲಿ ಹಲವು ಯುದ್ಧಗಳಲ್ಲಿ ಹೋರಾಡಿದರ ಫಲವಾಗಿ ರಾಗಪ್ಪನಿಗೆ ” ಸಾವಿರ ಒಂಟಿಯ ಸರದಾರ ” ಎನ್ನುಬ ಬಿರುದು ಪಡೆದುಕೊಂಡಿದ್ದ.ಈ ರಾಗಪ್ಪನು ವಿವಿಧ ರೋಗಗಳಿಗೆ ಔಷಧಿಗಳನ್ನು ಕೊಡುವ ಕೆಲಸ ಮಾಡುತ್ತಿದ್ದ ಇದರಿಂದ ಆ ಭಾಗದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ.ರೋಗಗಳನ್ನು ವಾಸಿ ಮಾಡುತ್ತಿರುವ ಕಾರಣಕ್ಕಾಗಿ ಸಹಜವಾಗಿಯೇ ರೋಗಣ್ಣವರ ಎಂದು ಜನ ಕರೆಯಲಾರಂಭಿಸಿದರು. ಹಿಗಾಗಿಯೇ ಇತನ ದೊಡ್ಡ ಮಗ (ರಾಯಣ್ಣನ ತಂದೆ) ಭರಮಪ್ಪನಿಗೆ ಸಹಜವಾಗಿ ರೋಗಣ್ಣವರ ಅನ್ನುವ ಅಡ್ಡ ಹೆಸರು ತಂದೆಯಿಂದ ಬಳುವಳಿಯಾಗಿ ಬಂದಿತು.ಮುಂದೆ ಜನರು ಇವರನ್ನು “ರೋಗಣ್ಣವರ” ಅಂತಲೇ ಕರೆಯಲು ಪ್ರಾರಂಭಿಸಿದರು. ಅಜ್ಜ ಮತ್ತು ತಂದೆ ಭರಮಪ್ಪರ ವೀರತ್ವ ಮತ್ತು ಸಮಾಜದ ಕಳಕಳಿ ರಾಯಣ್ಣನಿಗೆ ರಕ್ತದಲ್ಲಿಯೇ ಬಂದಿತು.ಬಡತನವನ್ನು ಹತ್ತಿರದಿಂದ ಕಂಡ ರಾಯಣ್ಣನಿಗೆ ಅದರ ಆಳ,ಅರಿವು,ಹರಿವು ತುಂಬಾ ಚನ್ನಾಗಿ ಗೊತ್ತಿತ್ತು.ಅದಕ್ಕಾಗಿ ಬಡತನದ ವಿರುದ್ಧ ನಿರಂತರವಾಗಿ ಹೋರಾಡಿ ಬದುಕು ಕಟ್ಟಿಕೊಳ್ಳುವ ಕುಟುಂಬಗಳಿಗೆ ನೆಚ್ಚಿನ‌ ನಾಯಕನಾಗಿ ಬೆಳೆದು ಬಿಟ್ಟ.ಕುಟುಂಬದಿಂದ ಬಳುವಳಿಯಾಗಿ ಬಂದ ವಾಲಿಕಾರಿಕೆಯ ಕುಲಕಸಬು ಇದನ್ನೆಲ್ಲ ರಾಯಣ್ಣನಿಗೆ ಹತ್ತಿರದಿಂದ ತೊರಿಸಲು ಸಹಾಯಮಾಡಿತು.ಆಂಗ್ಲರ ಬಲವಂತದ ಕರ ವಸೂಲಿ ಈ ವೀರ ವಾಲಿಕಾರನಿಗೆ ಸರಿ ಎನಿಸಲಿಲ್ಲ.ಅದನ್ನು ಯಾವಾಗಲೂ ಪ್ರತಿರೋಧಿಸುತ್ತಲೆ ಬಂದ ರಾಯಣ್ಣ ಇದೆ ಕಾರಣಕ್ಕಾಗಿ ಅವರ ಕೋಪಕ್ಕೆ ತುತ್ತಾಗಿ ಸೇರೆವಾಸ ಅನುಭವಿಸಬೇಕಾಯಿತು. ಜನರ ಒಳಿತಿಗಾಗಿ ಸದಾ ಹಂಬಲಿಸುವ ರಾಯಣ್ಣನಿಗೆ ಕಿತ್ತೂರು ರಾಜ ಮನೆತನದ ರಾಜ ಮಾತೆ ಚೆನ್ನಮ್ಮ ತಾಯಿಯ ಸಾನಿಧ್ಯ ದೊರೆತದ್ದು ಒಂದು ದೊಡ್ಡ ಶಕ್ತಿಯಾಗಿ ಪರಿಣಮಿಸಿತು.ಆಂಗ್ಲರ ದಾಸ್ಯದಿಂದ ಕಿತ್ತೂರ ರಾಜ್ಯ ಮಾತೆಯನ್ನು ಬಿಡುಗಡೆಗೋಳಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿ ತನ್ನ ಉಸಿರಿನ ಕೊನೆಯವರೆಗೂ ಅದರಂತೆ ನಡೆದುಕೊಂಡ.ನೇಣಿಗೆ ಕೊರಳೊಡ್ಡವಾಗ ದೇಶವಾಸಿಗಳಿಗೆ ನೀಡಿದ ಕರೆ ಇವತ್ತಿಗೂ ಕಿವಿಯಲ್ಲಿ ಮೊಳೆ ಹೊಡೆದಂತೆ ಭಾಸವಾಗುತ್ತದೆ.ನಿಮ್ಮ ದಾಸ್ಯದಿಂದ ನನ್ನ ತಾಯಿ ಮತ್ತು ತಾಯ್ನಾಡು ಮುಕ್ತಿಗಾಗಿ ಪ್ರತಿ ಮನೆ ಮನೆಯಲ್ಲೂ ನನಂಥಹ ವೀರ ಮಗನು ಹುಟ್ಟಿ ಬರುತ್ತಾನೆ.ನಿಮ್ಮನ್ನು ಈ ನಾಡಿನಿಂದ ಮಧ್ಯರಾತ್ರಿಯಲ್ಲಿಯೇ ಹೊಡೆದೊಡಿಸುತ್ತಾರೆ ಎಂದು ೧೮೩೦ ಜನೆವರಿ ೨೬ರಂದು ನೇಣು ಕುಣಿಕಿಗೆ ಕೊರಳೊಡ್ಡಿದ್ದ ಆ ಧೀರನ ಕನಸು ನನಸಾಯಿತು.ಆಂಗ್ಲರ ದಾಸ್ಯದಿಂದ ಈ ನಾಡು ಸ್ವಾತಂತ್ರ್ಯವಾಯಿತು.ಆದರೆ ಮನೆಗೊಬ್ಬ ರಾಯಣ್ಣ ಹುಟ್ಟಿ ಬರಲೇ ಇಲ್ಲ…!! ಅದಕ್ಕೆ ಸಾಕ್ಷಿ ಎನ್ನುವಂತೆ ನಂದಗಡದ ಹೊರವಲಯದಲ್ಲಿರುವ ಆ ಮೂರು ಆಲದ ಮರಗಳು…!! ಇಂದಿಗೂ ಮೂಕವಾಗಿ ನಿಂತು  ಮೂಕರೋಧನೆ ಮಾಡುತ್ತಲೇ ಇವೆ.ರಾಯಣ್ಣನ ಸಮಾಧಿ ಮೇಲೆ ಅಂದು ಹಚ್ಚಿದ ಆಲದ ಸಸಿ ಇಂದು ಹೆಮ್ಮರವಾಗಿ ಬೆಳೆದು ರಾಯಣ್ಣನ ಹೃದಯ ವಿಶಾಲತೆಯನ್ನು ಜಗತ್ತಿಗೆ ಸಾರಿ ಹೇಳುತ್ತಿದೆ.ರಾಯಣ್ಣನ ಸಮಾಧಿ ಸ್ಥಳ ಅಭಿಮಾನಿಗಳು “ವೀರನ ದೇವಸ್ಥಾನ” ಎಂದು ಪೂಜಿಸುತ್ತಿದ್ದಾರೆ.ನಮಗೆ ಹುಟ್ಟಿದರೆ ರಾಯಣ್ಣನಂಥಹ ವೀರ ಮಗನೆ ಹುಟ್ಟಲಿ ಎಂದು ಹರಕೆ ಹೊತ್ತು ಆಲದ ಮರಕ್ಕೆ ತೊಟ್ಟಿಲುಗಳನ್ನು ಕಟ್ಟಿ ಹೋಗುತ್ತಾರೆ.ಇಂದು ರಾಯಣ್ಣ ಜನ ಮಾಸದಲ್ಲಿ ದೇವರು.ಅಲ್ಲಿರುವ ಆಲದ ಮರಗಳು ರಾಯಣ್ಣನನ್ನು ನಾವು ಜಾತಿಯಿಂದ ಬಳಸಿಕೊಳ್ಳುತ್ತಿರುವುದನ್ನು ಕಂಡು ರೋಧಿಸುತ್ತಿವೆ.ಅವುಗಳ ರೋಧನದ ಧ್ವನಿಯನ್ನಾಲಿಸುವ ಕನಿಷ್ಠ ಸೌಜನ್ಯವೂ ದಶಕಗಳಿಂದ ನಾವು ಬೆಳಸಿಕೊಳ್ಳಲೇ ಇಲ್ಲ.ಭರ್ತಿ ನೂರು ವರ್ಷಗಳ ನಂತರ ರಾಯಣ್ಣ ಇಂದು ನಮಗೆ ನೆನಪಾಗಿದ್ದಾನೆ.ಅದು ರಾಜಕೀಯಕಾರಣಕ್ಕಾಗಿ.ರಾಯಣ್ಣನನ್ನು ಕನಸು ಮನಸ್ಸಲ್ಲೂ ನೆನೆಯದವರು ಇಂದು ದಿಢೀರನೆ ರಾಯಣ್ಣನ ಭಕ್ತರಾಗಿ ಎದ್ದು ನಿಂತಿದ್ದಾರೆ.ರಾಜಕೀಯ ಅಧಿಕಾರದಲ್ಲಿದ್ದಾಗ ನಂದಗಡದಲ್ಲಿ ಹಿರಿಯರು ಹಚ್ಚಿಟ್ಟ ನಂದಾ ದೀಪ ಉರಿಯುತ್ತಿದೆಯೋ ಇಲ್ಲ ಆರಿದೆಯೋ ಎಂದು ನೋಡಲು ಹೊಗದವರಿಂದ ಇಂದು ನಿತ್ಯವೂ ರಾಯಣ್ಣನ ಜಪ …!! ಇಂದಿನ ಶಾಲಾ ಮಕ್ಕಳಿಗೆ ರಾಯಣ್ಣ ಯಾರು ಎಂದು ಕೇಳಿದರೆ ನಟ ದರ್ಶನ ಎಂದು ಹೇಳುವಷ್ಟರ ಮಟ್ಟಿಗೆ ನಾವು ರಾಯಣ್ಣನನ್ನು ರಾಜಕೀಯವಾಗಿ ಈ ಹಿಂದಿನಿಂದ ನೆನೆಯುವ ಕೆಲಸ ಮಾಡಿದ್ದೆವೆ.ರಾಯಣ್ಣನ ಬಗ್ಗೆ ನಾವು ಇಟ್ಟುಕೊಂಡಿರುವ ಪ್ರೇಮಕ್ಕೆ ಇದಕ್ಕಿಂತ ಜ್ವಲಂತ ಉದಾಹರಣೆ ಬೇರೆ ಬೇಡ.ಹಲವು ವರ್ಷಗಳ ಹೋರಾಟಗಳ ಫಲವಾಗಿ ಇ ವರ್ಷದಿಂದ ರಾಯಣ್ಣನ ಚರಿತ್ರೆ ಓದುವ ಭಾಗ್ಯ ನಮ್ಮ ನಾಡಿನ ಮಕ್ಕಳು ಪಡೆದುಕೊಂಡಿದ್ದಾರೆ ಅದೂ ಕೂಡಾ ರಾಜಕಾರಣಕ್ಕಾಗಿ…! ಬ್ರಿಗೇಡ್ ಭೂತಕ್ಕೆ ಹೆದರಿ..!! ರಾಷ್ಟ್ರೀಯ ಪುರುಷರ ವಿಚಾರದಲ್ಲಿ ನಮಗಿರುವ ಇಂಥಹ ಸಣ್ಣ ಮನಸ್ಥಿಯಿಂದಾಗಿಯೇ ನಾವು ನಿತ್ಯವೂ ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೆವೆ.ನಮ್ಮವರ ತ್ಯಾಗ ಮತ್ತು ಬಲಿದಾನಗಳನ್ನು ಪ್ರಾಮಾಣಿಕವಾಗಿ ನೆನೆಯುವ ಬದಲು ಅವರನ್ನು ಜಾತಿ ಪ್ರೇಮಕ್ಕೋ,ರಾಜಕಾರಣದ ತೆವಲಿಗೋ ಬಳಸಿಕೊಳ್ಳುತ್ತಾ ಅಮಾಯಕ ಮುಗ್ದ ಜನರ ಮನಸ್ಸಿನಲ್ಲಿ ಅವರನ್ನು ಜಾತಿಯಿಂದ ಗುರುತಿಸುವ ಕೆಟ್ಟ ಕೆಲಸ ಮಾಡುತ್ತಿದ್ದೆವೆ.ಇದರಿಂದ ಸಮಾಜಕ್ಕೆ ನಾವು ಕೊಡುವ ಸಂದೇಶವಾದರೂ ಎನು? ಅಧಪತನದ ಅಂಚಿನಲ್ಲಿ ನಿಂತಿರುವ ನಮ್ಮ ಸಮಾಜಕ್ಕೆ ಇಂಥಹ ವೀರರ ತ್ಯಾಗ ಮತ್ತು ಸ್ಮರಣೆಯ ಟಾನಿಕ್ ಗಳನ್ನು ತುಂಬುವ ಬದಲು ಅವರನ್ನೇ ನಮ್ಮ ಬೆಳವಣಿಗೆಗಾಗಿ ಟಾನಿಕ್ ನಂತೆ ಉಪಯೋಗಿಸಿಕೊಳ್ಳುತ್ತಿರುವುದು ಯಾವ ನ್ಯಾಯ? ಇಂದು     ಹಿಂದುಳಿದವರು ಹಿಂದುಳಿಯುತ್ತಲೇ ಇದ್ದಾರೆ.ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಏಣೆಯನ್ನು ಹತ್ತಿದ ರಾಜಕಾರಣದ ವ್ಯಕ್ತಿಗಳು ತಾವುಗಳು ಇಂಥಹ ಸಮಯಗಳನ್ನು ಬಳಸಿಕೊಂಡು ಮುಂದುವರೆಯುತ್ತಲೇ ಇದ್ದಾರೆ.ಇದರಿಂದ ಸಮಾಜಕ್ಕೆ ಯಾವ ಲಾಭವೂ ಇಲ್ಲ.ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯನ್ನು ನಮ್ಮ ಸಮಾಜ ಬೆಳಸಿಕೊಳ್ಳಬೇಕಾಗಿದೆ.ರಾಯಣ್ಣ ರಣಧೀರ ಅವನೊಬ್ಬ ಸಮಾಜ ಪ್ರೇಮಿ.ಜಾತ್ಯತೀತ ಮನಸ್ಥಿತಿ ಇದ್ದ ಮಹಾ ಪುರುಷ ಅವನನ್ನು ನಾವು ಅಭಿವೃದ್ಧಿಯ ನೆಪ ಮಾಡಿಕೊಂಡು ಜಾತಿಯ ಹೆಸರಿನ ರಾಜಕಾರಣಕ್ಕೆ ಎಳೆದು ತರುತ್ತಿರುವುದನ್ನು ನಾವು ವಿರೋಧಿಸಬೇಕಾಗಿದೆ.ಕನಕನಿಗೆ ಉಡುಪಿಯ ನಡು ಬೀದಿಯಲ್ಲಿ ತಂದು ಬಿಟ್ಟು ರಾಜಕಾರಣ ಮಾಡಿದವರನ್ನು ನಾವು ಈ ಹಿಂದೆ ನೋಡಿದ್ದೆವೆ.ಈಗ ರಣ ಧೀರ ರಾಯಣ್ಣ ನಿಗೆ ಕನಕನ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಮ್ಮ ರಾಜಕಾರಣದ ವ್ಯವಸ್ಥೆಯಿಂದ  ನಡೆಯುತ್ತಿದೆ ಅದನ್ನು ತಡೆಯುವ ಕೆಲಸ ಮಾಡಬೇಕಾದ ನಾಡಿನ ಯುವ ಶಕ್ತಿ ಅವರ ದಾಸರಾಗಿ ರಾಯಣ್ಣನ ತತ್ವ ಸಿದ್ದಾಂತ ಬಲಿ ನೀಡುತ್ತಿರುವುದು ನೋವಿನ ಸಂಗತಿ.ಇಂದು ನಂದಗಡದ ಹೊರ ವಲಯದಲ್ಲಿರುವ ಆ ಮೂರು ಆಲದ ಮರಗಳಿಗೆ ಅಂದಿನ ಬ್ರಿಟಿಷ್ ರಿಂದ ಹಿಡಿದು ಇಂದಿ ಬ್ರಿಟಿಷ್ ರು ( ರಾಜಕಾರಣಿಗಳು ) ರಾಯಣ್ಣನಿಗೆ ಮಾಡಿರುವ ಅಪಚಾರದ ಎಲ್ಲ ಕಥೆಗಳು ಗೋತು..! ಆದರೆ ಮಾತನಾಡುತ್ತಿಲ್ಲ. ಅವುಗಳಿಗೆ ಮಾತು ಬರಲ್ಲ…!!ಅವುಗಳ ಮೂಕ ರೋಧನದ ಧ್ವನಿಯನ್ನಾಲಿಸಿಯಾದರೂ ನಾವು ಇಂದು ರಾಯಣ್ಣನೆನ್ನುವ ರಣಧೀರನನ್ನು ರಾಜಕೀಯವಾಗಿ ನೆನೆಯಯುವುದು ನಿಲ್ಲಿಸಬೇಕು…!!!

ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಹೆಮ್ಮೆಯ ಸ್ವಾತಂತ್ರ್ಯ ಸೇನಾನಿ .ಹೆಸರೆ ಒಂದು ರೊಮಾಂಚನ,ಆ ಹೆಸರಿನಲ್ಲಿಯೇ  ಮಿಂಚು ಮತ್ತು ಗುಡುಗು ಕಂಡವರು ಆಂಗ್ಲರು.ರಾಯಣ್ಣನೆನ್ನುವ ಗುಡಗು ಮಿಂಚಿಗೆ ಸೂರ್ಯ ಮುಳುಗದ ಸಾಮ್ರಾಜ್ಯ ಗಡಗಡನೆ ನಡುಗಿದ್ದು ಸುಳ್ಳಲ್ಲ.ರಾಯಣ್ಣನನ ರಣ ತಂತ್ರಕ್ಕೆ ಬೆದರಿ ಬೆವರಿದ ಆಂಗ್ಲರಿಗೆ ರಾಯಣ್ಣನನ್ನು ಸದೆಬಡೆಯದೆ ಬೇರೆ ಮಾರ್ಗ ಇರಲಿಲ್ಲ.ರಣ ತಂತ್ರಗಳಿಗೆ  ಬಗ್ಗದ ರಾಯಣ್ಣನನ್ನು ಕುತಂತ್ರದಿಂದ ಬಂಧಿಸಿ ನೇಣಿಗೆರಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಸಾಮ್ರಾಜ್ಯ ಶಾಹಿಗಳ ರಣಹೇಡಿತವನ್ನು ಇಂದಿಗೂ ಈ ವೀರ ಭೂಮಿ ಉಗ್ರವಾಗಿ ಖಂಡಿಸುತ್ತಲೇ ಇದೆ.ರಾಯಣ್ಣನನ್ನು ರಣಧೀರನಂತೆ ಆರಾಧಿಸುತ್ತ,ಪೂಜಿಸುತ್ತ,ಗೌರವಿಸುತ್ತಲೇ ಇದೆ.ರಾಯಣ್ಣ ಕನ್ನಡಿಗರಿಗೆ ಚೆನ್ನಮ್ಮ ತಾಯಿಯ ಬಲಗೈ ಬಂಟನಾಗಿ ಚಿರಪರಿಚಿತ.ಜಾತಿ ಮಿರಿದ ತಾಯಿ ಮತ್ತು ಮಗನ ಬಾಂಧವ್ಯ ಅವರಿಬ್ಬರದು.ಕಿತ್ತೂರಿನ ಕಿಡಿಯಾಗಿ ರಾಯಣ್ಣನ ಬೆಳವಣಿಗೆಯ ಹಿಂದೆ ಜ್ಯೋತಿಯಾಗಿ ನಿಂತು ಬೆಳಕು ನೀಡಿದವರು ವೀರ ರಾಣಿ ಚೆನ್ನಮ್ಮ. ಇಂಥಹ ವೀರ ಚರಿತ್ರೆಯ ವಾರಸುದಾರರನ್ನು ನಾವು ಇಂದು ಯಾವ ರೀತಿಯಾಗಿ ನೆನೆಯುತ್ತಿದ್ದೆವೆ? ನೆನೆದರೆ ರಕ್ತ ಕುದಿಯದೆ ಇರದು.ಇಂಥಹ ಪವಿತ್ರ ಮಣ್ಣಿನಲ್ಲಿ ಜನಸಿದ ನಮ್ಮ ಹೆಮ್ಮೆಯ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನೆನ್ನುವ ರಣಧೀರನನ್ನು ರಾಜಕೀಯವಾಗಿ ನೆನೆಯವ ಮುನ್ನ ನಮ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿ ಕಾರ್ಯ ಮಾಡಿಕೊಳ್ಳೊಣ.ನಂದಗಡದಲ್ಲಿರುವ ಆ ನಂದಾ ದೀಪಕ್ಕೆ ನಾವುಗಳು ರಾಜಕೀಯ ರಹಿತವಾಗಿ ಎಣ್ಣೆ-ಬತ್ತಿಗಳಾಗಿ ಉರಿಯೋಣ, ಮುಂದಿನ ಪಿಳಿಗೆಯ ಕ್ರಾಂತಿಯ ಕಾರ್ಯಕ್ಕೆ ಬೆಳಕಾಗೋಣ.ಸ್ವಾರ್ಥ ರಾಜಕಾರಣ ಬದಿಗಿಟ್ಟು ರಾಯಣನನ್ನು ಅಭಿಮಾನದಿಂದ ನೆನೆಯೋಣ…!!

ಲೇಖನ

ಭೀಮಾಶಂಕರ ಪಾಟೀಲ
ರಾಜ್ಯಾಧ್ಯಕ್ಷರು
ಕನಾ೯ಟಕ ನವನಿಮಾ೯ಣ ಸೇನೆ

loading...