ಶಾಸಕರು ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸಿಎಂ ಸಿದ್ದರಾಮಯ್ಯ ತಾಕೀತು

0
36
26052015-Bengaluru-CM Siddaramaiah with KJ George, Home Minister, Minister Roshan Baig and others addressing the press conference on the Single Digit Lottery Scam at Conference Hall, Vidhan Soudha in Bengaluru on Tuesday
loading...

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರು ಮತ್ತು ಸಚಿವರ ಗೈರು ಹಾಜರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜೂ.16ರವರೆಗೆ ನಡೆಯುವ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಕಟ್ಟಪ್ಪಣೆ ಮಾಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ ಅವರು, ಕಳೆದ ಮೂರ್ನಾಲ್ಕು ದಿನಗಳಿಂದಲೂ ಸದನದಲ್ಲಿ ಶಾಸಕರು ಮತ್ತು ಸಚಿವರ ಗೈರು ಹಾಜರಿಯ ಬಗ್ಗೆ ನಿರಂತರ ವರದಿಗಳಾಗುತ್ತಿವೆ.
ಪ್ರತಿಪಕ್ಷದವರು ಟೀಕೆಗಳನ್ನು ಮಾಡುತ್ತಾ ಸರ್ಕಾರಕ್ಕೆ ಜವಾಬ್ದಾರಿ ಇಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಕುರಿತು ಮಾಹಿತಿಗಳು ನಿಮ್ಮ ನಿಮ್ಮ ವಿಧಾನಸಭಾ ಕ್ಷೇತ್ರಗಳಿಗೂ ತಲುಪುತ್ತವೆ. ಜನ ನಿಮ್ಮನ್ನು ತಪ್ಪು ತಿಳಿದುಕೊಳ್ಳುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಎಲ್ಲರೂ ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿ ಎಂದು ತಾಕೀತು ಮಾಡಿದರು. ಸಚಿವರು ಸದನಕ್ಕೆ ಗೈರು ಹಾಜರಾಗುತ್ತಿರುವ ಬಗ್ಗೆ ಸಭಾಧ್ಯಕ್ಷರು ಎಚ್ಚರಿಕೆ ಕೊಡುತ್ತಿದ್ದಾರೆ. ಮುಂದಿನ ಸಾಲು ಖಾಲಿ ಇದೆ ಎಂದು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಳ್ಳುತ್ತಿವೆ. ಸಚಿವರು ಖುದ್ದು ಹಾಜರಿದ್ದು, ಚರ್ಚೆಗೆ ಪ್ರತಿಕ್ರಿಯಿಸದೆ ಇದ್ದರೆ ಶಾಸಕರು ಉತ್ತರಿಸಲು ಸಾಧ್ಯವೇ. ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ಸದನದಲ್ಲಿ ಕೆಟ್ಟ ಹೆಸರು ತೆಗೆದುಕೊಳ್ಳಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.
ಸಾಲಮನ್ನಾ ಸಾಧ್ಯವಿಲ್ಲ: ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಸಹಕಾರ ಬ್ಯಾಂಕುಗಳಲ್ಲಿ ಶೇ.22ರಷ್ಟು ಮಂದಿಗೆ ಮಾತ್ರ ಸಾಲ ನೀಡಲಾಗಿದೆ. ಅವರಲ್ಲೂ ಬಹಳಷ್ಟು ಮಂದಿ ಪುನರಾವರ್ತಿತ ರೈತರಿದ್ದಾರೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಶೇ.78ರಷ್ಟು ಮಂದಿ ಸಾಲ ಪಡೆದಿದ್ದಾರೆ. ಕೇಂದ್ರ ಸರ್ಕಾರ ಆ ಸಾಲವನ್ನು ಮನ್ನಾ ಮಾಡಿದರೆ ರಾಜ್ಯ ಸರ್ಕಾರ ಸಹಕಾರ ಬ್ಯಾಂಕುಗಳ ಸಾಲ ಮನ್ನಾ ಮಾಡಲು ತಕ್ಷಣ ನಿರ್ಧಾರ ತೆಗೆದುಕೊಳ್ಳಲಿದೆ. ಈ ನಿಲುವನ್ನು ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಮುಂದೆಯೂ ಇದೇ ನಿಲುವು ಇರಲಿದೆ. ಯಡಿಯೂರಪ್ಪ ಅವರು ಸಾಲ ಮನ್ನಾ ಮಾಡಿಯೇ ತೀರುತ್ತೇನೆ ಎಂದು ಹಾದಿ-ಬೀದಿಯಲ್ಲಿ ಹೇಳಿಕೊಅಂಡು ಬರುತ್ತಿದ್ದಾರೆ. ಸಾಲ ಮನ್ನಾ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಸಿಎಂ ಕಿಡಿಕಾರಿದ್ದಾರೆ.
ಪದೇ ಪದೇ ಸಾಲ ಮನ್ನಾ ಮಾಡುವುದು ಆರ್ಥಿಕತೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಲ ಮನ್ನಾ ಪರಿಪಾಠದಿಂದ ಸಾಲ ವಸೂಲಾತಿ ಕಡಿಮೆಯಾಗಲಿದೆ. ಇದರಿಂದ ಸಹಕಾರ ಕ್ಷೇತ್ರ ಸೊರಗಿಹೋಗಲಿದೆ. ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಿಸಿದರೆ ತಕ್ಷಣ 11 ಸಾವಿರ ಕೋಟಿ ರೂ.ಗಳನ್ನು ಸಹಕಾರ ಬ್ಯಾಂಕುಗಳಿಗೆ ಕೊಡಬೇಕು. ಇಲ್ಲವಾದರೆ ಸಹಕಾರಿ ಬ್ಯಾಂಕುಗಳು ದಿವಾಳಿಯಾಗುತ್ತವೆ. ವಾಸ್ತವತೆಯ ಅರಿವಿಲ್ಲದೆ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ಸಾಮಥ್ರ್ಯವಿದ್ದರೆ ಕೇಂದ್ರಕ್ಕೆ ಹೋಗಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಿಸಲಿ ಎಂದರು.ಸಾಲ ಮನ್ನಾ ಬಗ್ಗೆ ಹಲವಾರು ಶಾಸಕರು ಪ್ರಸ್ತಾಪಿಸಲು ಮುಂದಾದರಾದರೂ ಈ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಸಿದ್ದರಾಮಯ್ಯ ಹೇಳಿದರು.
ಗೋ ಹತ್ಯೆ ನಿಷೇಧದ ಬಗ್ಗೆ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾನೂನು ರೂಪಿಸಬೇಕೆಂದು ವಿ.ಎಸ್.ಉಗ್ರಪ್ಪ ಪ್ರಸ್ತಾಪಿಸಿದರು. ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಿರುವಕಾನೂನಿನ ಕುರಿತು ಉಗ್ರಪ್ಪ ವಿವರಿಸಲು ಮುಂದಾದಾಗ ಅದಕ್ಕೆ ತಡೆ ಹಾಕಿದ ಸಿಎಂ, ಸದ್ಯಕ್ಕೆ ಆ ವಿಷಯ ಚರ್ಚೆ ಬೇಡ. ಅನಗತ್ಯ ಗೊಂದಲಗಳಾಗುತ್ತವೆ. ಇರುವ ವ್ಯವಸ್ಥೆಯಲ್ಲೇ ಸುಧಾರಣೆ ಮಾಡುವ ಪ್ರಯತ್ನ ಮಾಡೋಣ ಎಂದು ಉಗ್ರಪ್ಪ ಅವರನ್ನು ಸುಮ್ಮನಿರಿಸಿದರು.

loading...