ಸಭಾಪತಿಯಾಗಿ ಡಿ.ಎಚ್.ಶಂಕರಮೂರ್ತಿ ಮುಂದುವರಿಕೆ

0
38
loading...

ಬೆಂಗಳೂರು: ಕುತೂಹಲ ಕೆರಳಿಸಿ ಕೊನೆ ಕ್ಷಣದವರೆಗೂ ಇಡೀ ರಾಜ್ಯವನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಠುಸ್ ಆಗಿದ್ದು ಡಿ.ಎಚ್.ಶಂಕರಮೂರ್ತಿ ಕೊನೆಗೂ ಪಾರಾಗಿದ್ದಾರೆ. ಕೊನೆ ಘಳಿಗೆಯವರೆಗೂ ನಡೆದ ನಾನಾ ಬಗೆಯ ವಿದ್ಯಮಾನಗಳ ನಡುವೆಯೂ ಕಾಂಗ್ರೆಸ್ ತಂತ್ರ ವಿಫಲವಾಗಿದೆ. ಸಭಾಪತಿಗೆ ತಮ್ಮ ಬೆಂಬಲ ಮುಂದುವರೆಸುವುದಾಗಿ ಜೆಡಿಎಸ್ ಘೋಷಿಸುವುದರೊಂದಿಗೆ ಕಾಂಗ್ರೆಸ್ ತಂತ್ರ ವಿಫಲವಾಗಿದ್ದು, ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟಾಗಿದೆ.ಇಂದು ಸದನ ಸಮಾವೇಶಗೊಂಡ ನಂತರ ಡಿ.ಎಚ್.ಶಂಕರಮೂರ್ತಿ ಅವರ ಅನುಪಸ್ಥಿತಿಯಲ್ಲಿ ನಡೆದ ಮತದಾನದಲ್ಲಿ ಜೆಡಿಎಸ್ ಸದಸ್ಯರು ತಮ್ಮ ಬೆಂಬಲ ಮೊದಲಿನಂತೆಯೇ ಮುಂದುವರೆಸುವುದಾಗಿ ತಿಳಿಸಿದರು. ಸಭಾಪತಿ ಶಂಕರಮೂರ್ತಿ ಅವರು ವಿಧಾನ ಪರಿಷತ್‍ಗೆ ಆಗಮಿಸಿದ್ದರೂ ಸಭಾಪತಿ ಸ್ಥಾನದಲ್ಲಿ ಕೂರದೆ ಕೊಠಡಿಯಲ್ಲೇ ಉಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಉಪ ಸಭಾಪತಿ ಮರಿತಿಬ್ಬೇಗೌಡ ಅವರು ಕಲಾಪ ನಡೆಸಿಕೊಟ್ಟರು. ಈ ವೇಳೆ ಕಾಂಗ್ರೆಸ್‍ನ ವಿ.ಎಸ್.ಉಗ್ರಪ್ಪ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು.
ಅಂತಿಮ ಘಟ್ಟದವರೆಗೂ ನಾನಾ ಕಸರತ್ತು ನಡೆಸಿದ ಕಾಂಗ್ರೆಸ್ ಕೊನೆಗೆ ವಿಧಿ ಇಲ್ಲದೆ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬ ನೆಪವೊಡ್ಡಿ ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟು ಕೊಡಲು ಸಿದ್ಧವಾಗಿತ್ತು. ಆದರೆ ಕಾಂಗ್ರೆಸ್‍ನ ಕೊನೆ ಘಳಿಗೆಯ ಈ ಬೇಡಿಕೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇದು ಅವಕಾಶವಾದಿ ರಾಜಕೀಯ ಮತ್ತು ಕಾಂಗ್ರೆಸ್ ಮಾಡುತ್ತಿರುವುದು ಮನೆ ಒಡೆಯುವ ಕೆಲಸ ಎಂದು ಹೇಳುವ ಮೂಲಕ ಕಾಂಗ್ರೆಸ್‍ನ ಅಭಿಪ್ರಾಯವನ್ನು ಸಾರಾ ಸಗಟಾಗಿ ತಳ್ಳಿ ಹಾಕಿದರು.
ಇದರೊಂದಿಗೆ ಶತಾಯ ಗತಾಯ ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸಲೇ ಬೇಕು ಎಂದು ಮಸಲತ್ತು ನಡೆಸಿದ್ದ ಕಾಂಗ್ರೆಸ್‍ಗೆ ಇದರಿಂದ ಭಾರೀ ಮುಖಭಂಗ ಉಂಟಾಯಿತು. ಶಂಕರಮೂರ್ತಿ ಅವರು ತಮ್ಮ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರೆಯಲು ಅವಕಾಶವಾಯಿತು.
ಇದಕ್ಕೂ ಮೊದಲು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಳಿ ಈ ಕುರಿತಂತೆ ಮಾತುಕತೆ ನಡೆಸಿದ್ದರು. ಆಗಲೂ ಕೂಡ ದೇವೇಗೌಡರು ಯಾವುದೇ ನಿರ್ಧಾರವನ್ನು ಪ್ರದರ್ಶಿಸಲಿರಲಿಲ್ಲ.

loading...