ಸುಳ್ಳು ಭವಿಷ್ಯ ಹೇಳಿ ಮದುವೆ ನಿಲ್ಲಿಸಿದ ಕಳ್ಳಸ್ವಾಮಿ

0
97
loading...

ಸುಳ್ಳು ಭವಿಷ್ಯ ಹೇಳಿ ಮದುವೆ ನಿಲ್ಲಿಸಿದ ಕಳ್ಳಸ್ವಾಮಿ
|| ಮದುವೆಯಾದರೆ ಮಧುಮಗಳು ಹುಚ್ಚಿಯಾಗ್ತಾಳೆಂದು ಭವಿಷ್ಯ || ರೂಪಿನಾಳ ಗ್ರಾಮಸ್ಥರಿಂದ ಸ್ವಾಮಿಗೆ ಥಳಿತ ||
ಶಿವಾನಂದ ಪದ್ಮಣ್ಣವರ

ಚಿಕ್ಕೋಡಿ 26: ಇತ್ತೀಚಿನ ದಿನಮಾನಗಳಲ್ಲಿ ಭವಿಷ್ಯ ಜಾತಕದ ಮೇಲೆ ನಂಬಿಕೆ ಹೆಚ್ಚಿಸಿಕೊಳ್ಳುತ್ತಿರುವ ಜನತೆಗೆ ಮೋಸ ಮಾಡುವ ಕಳ್ಳಸ್ವಾಮಿಗಳಿಗೇನು ಕೊರತೆಯಿಲ್ಲ. ಆದರೆ ನೀನು ಮದುವೆಯಾದ ಆರು ತಿಂಗಳಲ್ಲಿಯೇ ಮಧುಮಗಳು ಹುಚ್ಚಿಯಾಗುತ್ತಾಳೆ ಎಂದು ಮಧುಮಗನಿಗೆ ಸುಳ್ಳು ಭವಿಷ್ಯ ಹೇಳಿ ಮದುವೆ ನಿಲ್ಲಿಸಿದ ಕಳ್ಳಸ್ವಾಮಿಗೆ ಚಿಕ್ಕೋಡಿ ತಾಲೂಕಿನ ರೂಪಿನಾಳ ಗ್ರಾಮಸ್ಥರು ಸಖತ್ ಗೂಸಾ ನೀಡಿದ್ದಾರೆ.

ಹೌದು, ಮೋಸ ಹೋಗುವ ಜನರಿರುವೆಗೂ ಇಂತಹ ಡೋಂಗಿ ಸ್ವಾಮಿಗಳು ತಮ್ಮ ಕರಾಮತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಚಿಕ್ಕೋಡಿ ತಾಲೂಕಿನ ರೂಪಿನಾಳ ಗ್ರಾಮದ ಹೊರವಲಯದಲ್ಲಿ ತನ್ನದೇ ಆಶ್ರಮ ಸ್ಥಾಪಿಸಿಕೊಂಡಿರುವ ಕಳ್ಳ ಕಿರಾತಕ ಅಪ್ಪಾಸಾಹೇಬ ಖಿರಾಯಿ ಎಂಬ 30 ವರ್ಷದ ಸ್ವಾಮಿ ಕಳೆದ ಮೂರ್ನಾಲ್ಕು ವರ್ಷಗಳಿಂದ ದೇವಿಯ ಹೆಸರಿನಲ್ಲಿ ತನ್ನ ಆಶ್ರಮಕ್ಕೆ ಬರುವ ಜನರಿಗೆಲ್ಲ ಮಂಕುಬೂದಿ ಎರಚುತ್ತಲೇ ಇರುತ್ತಾನೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ದೆವ್ವ-ಭೂತದ ಹೆಸರಿನಲ್ಲಿ ಮೋಸ:
ತನ್ನ ಆಶ್ರಮದಲ್ಲಿ ನಿಷ್ಕ್ರಿಯಗೊಂಡಿರುವ ಎರಡು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಂಡಿರುವ ಈ ಸ್ವಾಮಿ ತನ್ನನ್ನು ನಂಬಿ ಭವಿಷ್ಯ ಕೇಳಲು ಬಂದ ಜನರಿಗೆಲ್ಲ ದೆವ್ವ-ಭೂತದ ಪುರಾಣ ಕಿವಿತುಂಬಿ ಅವರಿಂದ ಸಾವಿರಾರು ರೂಪಾಯಿ ಹಣ ಪೀಕುತ್ತಿದ್ದ ಜೊತೆಗೆ ಮೂಢನಂಬಿಕೆಗಳನ್ನು ಜನರಲ್ಲಿ ಜಾತಕ ದೋಷದ ಅಡ್ಡಪರಿಣಾಮಗಳ ಕುರಿತು ಇನ್ನಿಲ್ಲದ ಸುಳ್ಳು ಹೇಳಿ ಜನರಲ್ಲಿ ಭಯದ ವಾತಾವರಣ ಹುಟ್ಟಿಸಿ ತನ್ನ ಜೇಜು ತುಂಬಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಏನಿದು ಪ್ರಕರಣ?
ಇತ್ತೀಚಿಗೆ ವಧು-ವರರ ಪರಸ್ಪರ ಒಪ್ಪಿಗೆ ಮೇರೆಗೆ ಗೊತ್ತಾಗಿದ್ದ ಮದುವೆಗೆ ಸ್ವಾಮಿ ಅಡ್ಡಗಾಲು ಹಾಕಿದ್ದಾನೆ. ಮದುವೆಯಾದರೆ ಮಧುಮಗಳಿಗೆ ಆರು ತಿಂಗಳಿನಲ್ಲಿ ಹುಚ್ಚಿಯಾಗ್ತಾಳೆ, ನಿನ್ನ ಜೀವನ ಅಧೋಗತಿಗೆ ತಲುಪುತ್ತದೆ ಎಂದೆಲ್ಲ ಹೇಳಿ ವರನ ಕಡೆಯವರಿಗೆ ಸುಳ್ಳು ಭವಿಷ್ಯ ಹೇಳಿ ಹಣ ಪೀಕಿರುವುದು ವಧುವಿನ ಮನೆಯವರಿಗೆ ಗೊತ್ತಾಗಿದೆ. ಹೀಗಾಗಿ ಇಂತಹ ವಧುವಿನ ಕಡೆಯ ಜನ ಬಂದು ಸ್ವಾಮಿಯ ಆಶ್ರಮಕ್ಕೆ ನುಗ್ಗಿ ಸ್ವಾಮೀಜಿಯನ್ನು ಥಳಿಸಿದ್ದಾರೆ.

ಒಟ್ಟಾರೆಯಾಗಿ ಸಮಾಜದಲ್ಲಿ ಮೂಢನಂಬಿಕೆ ಕಂದಾಚಾರಗಳನ್ನು ಹೊಡೆದು ಹಾಕಲು ಒಂದು ಸಮುದಾಯ ಮುಂದಾಗಿದ್ದರೆ ಭವಿಷ್ಯ-ಜಾತಕಗಳನ್ನು ನಂಬಿದ ಜನರು ಮೋಸ ಹೋಗಿ ಇಂತಹ ಆಕಸ್ಮಿಕ ಘಟನೆಗಳು ಸಂಭವಿಸುತ್ತಿದ್ದು, ಇನ್ನಾದರೂ ಸಮಾಜ ಜಾಗೃತವಾಗಬೇಕಿದೆ.

ಬಾಕ್ಸ
ಚಿಕ್ಕೋಡಿ ತಾಲೂಕಿನ ರೂಪಿನಾಳ ಗ್ರಾಮದ ಹೊರವಲಯದ ಆಶ್ರಮದಿಂದ ಜನರಿಂದ ತಪ್ಪಿಸಿಕೊಂಡಿರುವ ಕಳ್ಳ ಸ್ವಾಮಿಯ ವಿರುದ್ಧ ಅಂಕಲಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರೊಂದಿಗೆ ಆಶ್ರಮಕ್ಕೆ ನುಗ್ಗಿದ ಜನ ಆಶ್ರಮ ಧ್ವಂಸ ಮಾಡಲು ಮುಂದಾದರು ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.

ಪ್ರತಿಕ್ರಿಯೆ:
ರುಪಿನಾಳ ಗ್ರಾಮದ ಅಪ್ಪಾಸಾಹೇಬ ಖಿರಾಯಿ ಎಂಬ ಸ್ವಾಮಿ ಭೂತ-ಪಿಶಾಚಿ-ಪೀಡೆಗಳ ನೆಪ ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾನೆಂದು ವ್ಯಕ್ತಿಯ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.
ವೀರಣ್ಣ ಲಟ್ಟೆ
ಪಿಎಸ್ಐ, ಅಂಕಲಿ

loading...