ಸೇನೆಯಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಪಾಕಿಸ್ತಾನ ವಿಷಬೀಜ : ಕೇಂದ್ರ ಸಚಿವ ರಾಠೋಡ

0
122
loading...


ಕನ್ನಡಮ್ಮ ಸುದ್ದಿ
ಚಿಕ್ಕೋಡಿ 12: ಭಾರತ ಗಡಿ ಕಾಶ್ಮೀರದಲ್ಲಿ ದೇಶವಾಸಿಗಳಲ್ಲಿ ಪಾಕಿಸ್ತಾನ ವಿಷಬೀಜ ಬಿತ್ತಲು ಕಾಂಗ್ರೆಸ್ ಪಕ್ಷವನ್ನು ಬಳಸಿಕೊಳ್ಳುತ್ತಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ರಾಜವರ್ಧನಸಿಂಗ ರಾಠೋಡ ಆರೋಪಿಸಿದರು.
ಸ್ಥಳೀಯ ಕೆಎಲ್‍ಇ ಇಂಜಿನೀಯರಿಂಗ ಮಹಾವಿದ್ಯಾಲಯದಲ್ಲಿ ಕೇಂದ್ರ ಸಹಕಾರದ ಮಹತ್ವಾಕಾಂಕ್ಷಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಅನೇಕ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಗಡಿಕಾಯುವಲ್ಲಿಯೂ ಸರಕಾರ ಉತ್ತಮ ಕ್ರಮ ಕೈಕೊಂಡಿದೆ ಆದರೆ ಪಾಕಿಸ್ತಾನ ಕಾಂಗ್ರೆಸ್‍ವನ್ನು ಬಳಸಿಕೊಂಡು ಸೇನಾ ಅಧಿಕಾರಿಗಳನ್ನು ದೂರುವ ಮೂಲಕ ಸೇನೆಯನ್ನು ಅಭದ್ರಗೊಳಿಸುವ ಯತ್ನ ಮಾಡುತ್ತಿದೆ.
ಸಂವಿಧಾನದ ನಾಲ್ಕನೆಯ ಅಂಗವಾಗಿರುವ ಮಾಧ್ಯಮದಲ್ಲಿ ರಾಜಕೀಯ ಮಾಡಬಾರದು. ಆದರೆ ಕಾಂಗ್ರೆಸ್ ಸರಕಾರ ನ್ಯಾಶನಲ್ ಹೆರಾಲ್ಡ ಪತ್ರಿಕೆಯನ್ನು ಮರುಸ್ಥಾಪನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂದು ಪ್ರಶ್ನಿಸಿದರು.
ಅಭಿವೃದ್ಧಿಪರ ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿರುವ ಭಾರತ ದೇಶ ಪ್ರಗತಿ ಹೊಂದಬೇಕಾದರೆ ಯುವ ಜನರು ದೇಶದ ವ್ಯವಸ್ಥೆಯಲ್ಲಿ ಹೊಸ-ಹೊಸ ಬದಲಾವಣೆಗಳನ್ನು ಜಾರಿಗೆ ತರಬೇಕಾದ ಅವಶ್ಯಕತೆಯಿದೆ. ದೇಶದ ಜಾರಿಯಾದ ಯೋಜನೆಗಳನ್ನು ಮುಂದುವರೆಸುವುದು ಯುವಕರ ಧ್ಯೇಯವಾಗಬೇಕು ಅಂದಾಗ ಮಾತ್ರ ದೇಶ ಸುಭಿಕ್ಷವಾಗಲು ಸಾಧ್ಯವೆಂದರು.
ಮುಂದುವರೆದ ಅವರು, ಭ್ರಷ್ಟಮುಕ್ತ ಆಡಳಿತ ನೀಡಿದ ಕೀರ್ತಿ ಸರಕಾರಕ್ಕಿದೆ. ಕಪ್ಪುಹಣ ವರ್ಗಾವಣೆ ನಿಂತಿದೆ. ನೋಟು ರದ್ಧತಿ ಬಳಿಕ ಆರ್ಥಿಕ ಸುಧಾರಣೆಗಳಾಗಿವೆ. ದೇಶದ ಅಭೂತಪೂರ್ವ ಬೆಳವಣಿಗೆಗೆ ಉತ್ಪಾದನಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿವುದು ಅತಿಮುಖ್ಯವಾಗಿದೆ. ಹೀಗಾಗಿ 9000 ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ಔದ್ಯೋಗಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ. ಯುವಕರು ತಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಪ್ರಾದೇಶಿಕ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸಬೇಕು ಎಂದರು.
3 ವರ್ಷದಲ್ಲಿ ಮುದ್ರಾ ಯೋಜನೆ 3 ಲಕ್ಷ ಕೋಟಿ ಹಣ ನೀಡಲಾಗಿದೆ. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯಾಗಿದೆ. ದೇಶದಲ್ಲಿ ವಿದ್ಯುತ್ ಕ್ರಾಂತಿಯಾಗುತ್ತಿದ್ದು ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆಯಾಗಿದೆ. 18 ಸಾವಿರ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದ ಸಂದರ್ಭ ಎದುರಿಸಿ ಕೇಂದ್ರ ಸಾಧನೆ ಮಾಡಿದೆ. ಕೇಂದ್ರ ಹೆದ್ದಾರಿಗಳನ್ನು ವಿಸ್ತರಿಸುತ್ತಿದೆ.
ಸಂಸದ ಸುರೇಶ ಅಂಗಡಿ ಮಾತನಾಡಿ, 12ನೇ ಶತಮಾನದ ಬಸವಣ್ಣವರ ಆಶಯ ಪ್ರಧಾನಿ ಮೋದಿ ಅವರಿಂದ ಈಡೇರುತ್ತಿವೆ. ಅವರು ಘೋಷಿಸಿದ ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ, ಜನಧನ, ಫಸಲ್ ಬಿಮಾ, ಜಿಎಸ್‍ಟಿ ಸೇರಿದಂತೆ 42 ಯೋಜನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಇವುಗಳ ಅನುಷ್ಠಾನಕ್ಕೆ ಎಲ್ಲರೂ ಜೊತೆಗೂಡಿ ಶ್ರಮಿಸಬೇಕಾದ ಅಗತ್ಯವಿದೆ ಎಂದರು. ಕೇಂದ್ರ ಸರಕಾರದಿಂದ ಬೆಳಗಾವಿ ರಿಂಗರೋಡ, ಓವರ್‍ಬ್ರಿಜ್ಡ್ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಕೇಂದ್ರ ಸರಕಾರದಿಂದಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಅಂತರ್‍ರಾಷ್ಟ್ರೀಯಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿ ದೇಶದ ಪ್ರಗತಿಯಲ್ಲಿ ಮುಂದಿದ್ದಾರೆ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಸರಕಾರಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿದ್ದವು. ಆದರೆ ಪ್ರಧಾನಿ ಮೋದಿ ಅವರು ಎಲ್ಲರೊಂದಿಗೆ ಎಲ್ಲರ ವಿಕಾಸ ಮಾಡಲು ಮುಂದಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ನೋಟು ರದ್ಧತಿ ಬಗ್ಗೆ ಸಂಸದ ಪ್ರಕಾಶ ಹುಕ್ಕೇರಿ ಅವರು ವಿನಾಕಾರಣ ಟೀಕೆ ಮಾಡಿದ್ದರು. ಆದರೆ ಸರಕಾರದ ಯೋಜನೆಗಳನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ದುರ್ಯೋಧನ ಐಹೊಳೆ, ಮಾಜಿ ಸಚಿವ ಶಶಿಕಾಂತ ನಾಯಿಕ, ಅಣ್ಣಾಸಾಹೇಬ ಜೊಲ್ಲೆ, ಕೆಎಲ್‍ಇ ಪ್ರಾಚಾರ್ಯ ಸಿದ್ರಾಮಪ್ಪ ಇಟ್ಟಿ, ಸುರೇಶ ಬೆಲ್ಲದ, ರಾಜಕುಮಾರ ಟೋಪಣ್ಣವರ, ಜಗದೀಶ ಕವಟಗಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಜಾನ್‍ಬಾಜ್ ಸ್ವಾಗತಿಸಿದರು. ಸುರೇಶ ಉಕ್ಕಲಿ ನಿರೂಪಿಸಿದರು.
ನಿದ್ರೆಗೆ ಜಾರಿದ ಐಹೊಳೆ
ಸಬ್ ಕಾ ಸಾಥ್ ಸಬಕಾ ವಿಕಾಸ ಕಾರ್ಯಕ್ರಮದಲ್ಲಿ ಎಲ್ಲರೂ ಭಾಷಣದತ್ತ ಮಗ್ನರಾಗಿದ್ದರೆ, ಶಾಸಕ ದುರ್ಯೋಧನ ಐಹೊಳೆ ಮಾತ್ರ ನಿದ್ರೆಗೆ ಜಾರಿದ್ದರು. ಭಾಷಣ ಮಾಡುವ ವಿಷಯದ ಸಲುವಾಗಿ ಅವರನ್ನು ಎಚ್ಚರಿಸಿದಾಗ ಸಭೆ ನಗೆಗಡಲಲ್ಲಿ ತೇಲಿತು.

loading...