ಹಸಿದವರಿಗೆ 5 ರೂಗೆ ಹೊಟ್ಟೆ ತುಂಬಾ ಊಟ

0
53
loading...

ಭಾನುವಾರ ಹೊರತು ಪಡಿಸಿ ಉಳಿದ ಎಲ್ಲದಿನಗಳು ಒಂದು ಗಂಟೆಯಿಂದ 3ರ ವರೆಗೆ ಊಟ
| ಚಂದ್ರಶೇಖರ ಸೋಮಣ್ಣವರ
ಲಕ್ಷ್ಮೇಶ್ವರ/ಗದಗ: ನಗರದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಕಳೆದ ಒಂದೂವರಿ ವರ್ಷದಿಂದ ಭಾನುವಾರ ಹೊರತುಪಡಿಸಿ ಉಳಿದ ಪ್ರತಿದಿನವೂ ಮಧ್ಯಾಹ್ನ ಒಂದು ಗಂಟೆಯಿಂದ ಮೂರು ಗಂಟೆ ಅವಧಿಯಲ್ಲಿ ಪ್ರತಿದಿನ 700ಕ್ಕೂ ಅಧಿಕ ಹಸಿದ ಜನರಿಗೆ 5 ರೂ ನೀಡಿದರೆ ಹೊಟ್ಟೆ ತುಂಬಾ ಅನ್ನಪ್ರಸಾದ ನೀಡುತ್ತಿರುವ ಅನ್ನಪೂರ್ಣೆಶ್ವರ ಪ್ರಸಾದ ನಿಲಯ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ.
ಜಿಲ್ಲೆಯು ಸತತವಾಗಿ ಕಳೆದ ನಾಲ್ಕೈದು ವರ್ಷಗಳಿಂದಲೂ ಭೀಕರ ಬರಗಾಲಕ್ಕೆ ತುತ್ತಾಗಿದ್ದು ಜನತೆ ಅನ್ನ, ನೀರಿಗೆ ಹಾಹಾಕಾರ ಪಡುತ್ತಿರುವುದನ್ನು ಮನಗಂಡ ಗದಗ ನಗರದ ಅಮರೇಶ ಉಮಚಗಿ, ಗುರುಮೂರ್ತಿ ಮರಬುದ್ದಿ, ಕೆ.ಪಿ.ಗಂಗಾವತಿ, ಆರ್.ಕೆ.ಸಿರಿ, ಸುಭದ್ರಕ್ಕ ನೀಲಪ್ಪನವರ ಹಾಗೂ ಶೈಲಜಾ ಕೋಡಿಹಳ್ಳಿ ಈ ಆರು ಜನ ಹೃದಯವಂತರು ಸೇರಿ ಹಸಿದವರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಹೆಣ್ಣುಮಕ್ಕಳಿಗೆ, ನಿರ್ಗತಿಕರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಅಂಗವಿಕಲರಿಗೆ ಉಚಿತವಾಗಿ ಹಾಗೂ ಉಳಿದವರಿಗೆ ಕೇವಲ ಐದು ರೂಪಾಯಿಗೆ ಹೊಟ್ಟೆ ತುಂಬಾ ಅನ್ನ ಸಾಂಬಾರ ನೀಡುತ್ತಿರುವ ಇವರ ಈ ಸೇವಾಕಾರ್ಯಕ್ಕೆ ಜಿಲ್ಲಾಧಿಕಾರಿ ಮನೋಜಕುಮಾರ ಜೈನ್ ಭೇಟಿ ನೀಡಿ ಅನ್ನಪ್ರಸಾದ ಸ್ವೀಕರಿಸುವುದರೊಂದಿಗೆ ಇವರ ಕಾರ್ಯಕ್ಕೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಅಲ್ಲಿಯೇ ಊಟ ಮಾಡುತ್ತಿದ್ದ ಹಿರಿಯ ನಾಗರಿಕರೊಬ್ಬರು ಕನಡಮ್ಮಗೆ ತಿಳಿಸಿದ್ದಾರೆ.
ಒಟ್ಟಾರೆ ಇವರ ಸೇವಾಕಾರ್ಯ ಮೆಚ್ಚುವಂತಿದ್ದು ಆ ಭಗವಂತನು ಇವರ ಪುಣ್ಯಕಾರ್ಯದ ಹೃದಯ ಶ್ರೀಮಂತಿಕೆಗೆ ಇನ್ನಷ್ಟು ಶಕ್ತಿಯ ಬಲ ನೀಡಲೆಂದು ಶುಭ ಹಾರೈಸಿ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಅನ್ನಪೂರ್ಣೇಶ್ವರಿ ಉಚಿತ ಪ್ರಸಾದ ಸೇವಾ ಸಮಿತಿಯ ಉತ್ತಮ ಕಾರ್ಯವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಬಾಕ್ಸ್
ಸರ್ ಸ್ವ ಇಚ್ಚೆಯಿಂದ ನಾವು ಆರು ಜನ ಸೇರಿಕೊಂಡು ಹಸಿದವರಿಗೆ ಅನ್ನಪ್ರಸಾದ ನೀಡುವ ಮೂಲಕ ಒಂದು ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ. ಪ್ರತಿನಿತ್ಯವೂ 700ಕ್ಕೂ ಅಧಿಕ ಜನರು ಇಲ್ಲಿ ಊಟ ಮಾಡುತ್ತಿದ್ದು, ತಲಾ ಒಬ್ಬರಿಗೆ ಹದಿಮೂರು ರೂಪಾಯಿ ಊಟದ ಖರ್ಚು ಬರುತ್ತದೆ ದಾನಿಗಳು ಸಹಾಯ ಮಾಡುತ್ತಿದ್ದು ಕಳೆದ ಒಂದೂವರಿ ವರ್ಷದಿಂದ ನಿರಂತರವಾಗಿ ಮುನ್ನೆಡೆಸಿಕೊಂಡು ಬಂದಿದ್ದೇವೆ.
-ಅಮರೇಶ ಉಮಚಗಿ. ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದ ಮಾಲಿಕ

loading...