ಅಗಷ್ಟ 15 ರೊಳಗೆ ಬಯಲು ಶೌಚಮುಕ್ತ ಜಿಲ್ಲೆ

0
50
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ರೈತರೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸೌಜನ್ಯತೆಯಿಂದ ನಡೆದುಕೊಳ್ಳಬೇಕು. ಶೌಚಗೃಹ ನಿರ್ಮಿಸುವಲ್ಲಿ ಎಲ್ಲರೂ ಪ್ರವೃತರಾಗಿ, ಆಗಷ್ಟ 15ರೊಳಗೆ ಗದಗ ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದುಡಿಯುವ ಕೈಗಳಿಗೆ ಕೆಲಸ ನೀಡುವುದು, ಕುಡಿಯುವ ನೀರು ಮತ್ತು ಜಾನುವಾರಗಳಿಗೆ ಮೇವಿನ ಕೊರತೆಯಾಗದಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಸಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರದಲ್ಲೇ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಬೇಕು ತಿಳಿಸಿದರು.
ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ರೈತರಿಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ನೀಡುವುದು, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸುವಲ್ಲಿ ಪಿಡಿಒ ಶ್ರಮಿಸಬೇಕು ಎಂದು ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ನೆಗಳೂರ ಮಾತನಾಡಿ, ತಾಲೂಕಿನಲ್ಲಿ ಒಟ್ಟು 272 ಕೃಷಿ ಹೊಂಡ ನಿರ್ಮಾಣವಾಗಿವೆ. ಮುಂಗಾರಿನಲ್ಲಿ ಶೇ.40ರಷ್ಟು ಬಿತ್ತನೆಯಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಶಾಸಕ ಜಿ.ಎಸ್.ಪಾಟೀಲ, ತಾಲೂಕಿನಲ್ಲಿ ಮುಂಗಾರು ಸರಿಯಾಗಿ ಮಳೆಯಾಗಿಲ್ಲ, ಕೆಲವಡೆ ಅಲ್ಲಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ನೀವು ನೋಡಿದ್ರೆ ಶೇ.40ರಷ್ಟು ಬಿತ್ತನೆಯಾಗಿದೆ ಎಂದು ಹೇಳುತ್ತೀರಿ ಸರಿಯಾಗಿ ಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಎಂ.ಡಿ.ತೋಗಣಸಿ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಯಲ್ಲಿ ಬೋರ್‍ವೆಲ್ ಕೊರೆಸಿ ಪೈಪ್‍ಲೈನ್ ಮಾಡಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಎಸ್ಸಿ ಕಾಲೋನಿಯಲ್ಲಿ ಮಾತ್ರ ಐದು ಬೋರ್‍ವೆಲ್ ಹಾಕಿಸಿದರೂ ನೀರು ಬಿದ್ದಿಲ್ಲ. ಹೀಗಾಗಿ ಅಲ್ಲಿ ಎರಡು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಜಿ.ಪಂ.ಸದಸ್ಯರಾದ ಶೋಭಾ ಮೇಟಿ, ಈರಣ್ಣ ನಾಡಗೌಡ್ರ, ತಾ.ಪಂ.ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ, ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಉಪತಹಸೀಲ್ದಾರ್ ಕೆ.ಬಿ.ಕೋರಿಶೆಟ್ಟರ್, ಬಿಇಒ ಎಂ.ಎ.ರಡ್ಡೇರ, ಹೆಸ್ಕಾಂ ಎಇಇ ಗೌರೋಜಿ, ಎಸ್.ಎಸ್.ವಾರದ, ಬಸವರಾಜ ಅಂಗಡಿ, ನರಗೇಶ, ಬಿ.ಎನ್.ರಾಟಿ, ಎಂ.ಎಸ್.ವಾಲಿಕಾರ, ಆರ್‍ಎಫ್‍ಒ ಹೊಸಳ್ಳಿ, ಸೇರಿದಂತೆ ಇತರರು ಇದ್ದರು.

loading...