ಅಧಿಕಾರಿಗಳಿಗೆ ತಿಳಿಸಿದರೂ ಬಗೆಹರಿಯದ ಸಮಸ್ಯೆ

0
32
loading...

ಕನ್ನಡಮ್ಮ ಸುದ್ದಿ-ನರಗುಂದ: ಕಳೆದ 2014 ರಿಂದ ತಾಲೂಕಿನ ಚಿಕ್ಕನರಗುಂದದ ನಿವಾಸಿ ಮಲ್ಲಪ್ಪ ಅರೆಬೆಂಚಿ ತಮ್ಮ ಮನೆ ಮುಂದಿರುವ ಕಲ್ಲು ಮಣ್ಣುಗಳ ರಾಶಿ ತೆಗಸಿಹಾಕಿಸುವಂತೆ ಜಿಪಂ ಹಾಗೂ ತಾಪಂ ಮತ್ತು ಗ್ರಾಪಂ ಅಧಿಕಾರಿಗಳಿಗೆ ಲಿಖಿತ ಮುಖಾಂತರ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಸಮಸ್ಯೆ ಪರಿಹಾರ ಕಂಡಿಲ್ಲವೆಂದು ಅಧಿಕಾರಿಗಳ ನಿರ್ಲಕ್ಷತೆಯನ್ನು ಟೀಕೆ ಮಾಡಿದ್ದಾರೆ.
ತಾಲೂಕ ಪಂಚಾಯತಿ ಅಧಿಕಾರಿಗಳು 2014 ರ ಸೆಪ್ಟೆಂಬರ್‍ದಲ್ಲಿ ಸ್ಥಳಕ್ಕೆ ಆಗಮಿಸಿ ಕಸ ಕಲ್ಲು ಮಣ್ಣು ತೆಗೆಸುವುದಾಗಿ ತಿಳಿಸಿ ಹೋಗಿದ್ದರೂ ಕೂಡಾ ಇದುವರೆಗೂ ಸಮಸ್ಯೆ ಪರಿಹಾರ ಕಾಣದೇ ಉಳಿದುಕೊಂಡಿದೆ. ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ಹಿಂದೆ ತಾಪಂ ಹಾಗೂ ಗ್ರಾಪಂ ದವರಿಗೆ ಆದೇಶಿಸಿ ಕಲ್ಲು ಮಣ್ಣು ತೆಗೆಸುವಂತೆ ತಿಳಿಸಿದ್ದರೂ ಕೂಡಾ ಈ ಕೆಲಸವಿನ್ನು ಆಗಿಲ್ಲವೆಂದು ಮಲ್ಲಪ್ಪ ಅರೆಬೆಂಚಿ ಅಧಿಕಾರಿಗಳ ನಿರ್ಲಕ್ಷತೆಯನ್ನು ಟೀಕಿಸಿದ್ದಾರೆ.
ವಿವಾದ: ಮಲ್ಲಪ್ಪ ಅರೆಬೆಂಚಿ ಅವರ ಮನೆ ಪಕ್ಕದಲ್ಲಿ ಕಳೆದ 10 ವರ್ಷದ ಹಿಂದೆ ಬಿದ್ದುಕೊಂಡಿರುವ ಮನೆಯೊಂದಿದೆ. ಅದು ಪ್ರೇಮಾ ಸಾಲೂಟಗಿ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಇದೇ ಮನೆಯ ಬದುವಿನಿಂದ ಮಲ್ಲಪ್ಪ ಅರೆಬೆಂಚಿ ಕುಟುಂಬದವರು ತಮ್ಮ ಮನೆ ಸಂಚಾರಕ್ಕಾಗಿ ರಸ್ತೆಯನ್ನು ಬಳಸಿಕೊಂಡಿದ್ದಾರೆ. ಆದರೆ ರಸ್ತೆ ಜಾಗೆ ನಮ್ಮದು ಎನ್ನುವ ಕುರಿತಾದ ವಿವಾದ ಎರಡು ಮನೆಯವರಲ್ಲಿ ಆಗಾಗ ಉಂಟಾದ ಸಂದರ್ಭದಲ್ಲಿ ಕೊನೆಗೆ ಗ್ರಾಪಂದವರು ಹಾಗೂ ಹಿರಿಯರು ಸೇರಿ ಜಾಗೆ ಅಳತೆಮಾಡಿ ಕೊನೆಗೆ ರಾಜೀ ಮೂಲಕ ಮೊದಲಿದ್ದ ರಸ್ತೆಯನ್ನು ಸಂಚರಿಸಲು ಮಾಡಿಕೊಟ್ಟಿದ್ದಾರೆ. ಆದರೆ ಅತೀ ಹಳೆಯದಾದ ಮನೆಯ ಕಲ್ಲು ಮಣ್ಣು ಮನೆ ಪಕ್ಕದಲ್ಲಿರುವರಿಂದ ಗಲೀಜಿನಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಮಲ್ಲಪ್ಪ ಅರೆಬೆಂಚಿ ಈ ಹೊಲಸನ್ನು ಬೇರೆಡೆಗೆ ಸಾಗಿಸಲು ಗ್ರಾಪಂದವರಲ್ಲಿ ಕಳೆದ ಎರಡು ವರ್ಷದಿಂದಲೂ ಮನವಿ ಮಾಡುತ್ತಲೇ ಬಂದಿದ್ದು ಸಮಸ್ಯೆ ಪರಿಹಾರ ಕಂಡಿಲ್ಲ.
ಈ ಕುರಿತು ಚಿಕ್ಕನರಗುಂದ ಗ್ರಾಪಂ ಪಿಡಿಒ ಎಸ್.ಎಂ. ಬಡಿಗೇರ ಅವರು ಮಾಹಿತಿ ಒದಗಿಸಿ, ಮಲ್ಲಪ್ಪ ಅರೆಬೆಂಚಿ ಅವರ ಸಮಸ್ಯೆ ಕುರಿತು ಕಳೆದ ತಿಂಗಳು 26 ರಂದು ಚರ್ಚಿಸಲಾಗಿದ್ದು ಮಲ್ಲಪ್ಪ ಅರೆಬೆಂಚಿ ಅವರ ಮನೆ ಪಕ್ಕದಲ್ಲಿ ಬಿದ್ದಿರುವ ಮನೆ ಮಾಲೀಕರಾದ ಪ್ರೇಮಾ ಸಾಲೂಟಗಿ ಅವರಿಗೆ ಸೂಚಿಸಿ, ತಮ್ಮ ಮನೆಯ ಕಲ್ಲು ಮಣ್ಣುಗಳನ್ನು ತೆಗೆಸಿಹಾಕಿ ಸ್ವಚ್ಚವಾಗಿ ಜಾಗೆ ಇಟ್ಟುಕೊಳ್ಳಲು ತಿಳಿಸಲಾಗಿತ್ತು. ಆದರೆ ಪ್ರೇಮಾ ಸಾಲೂಟಗಿ ಅವರು ನಮ್ಮ ಮನೆಯ ಕಲ್ಲು ಮಣ್ಣಿರುವ ಜಾಗೆಯ ಸುತ್ತಲೂ ಕಂಪೌಂಡ ಗೋಡೆ ನಿರ್ಮಿಸಿಕೊಳ್ಳಲು ಸಿದ್ದವೆಂದು ತಿಳಿಸಿದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು ತೀವ್ರವಾಗಿ ಪರಿಹಾರಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಪಿಡಿಒ ಮಾಹಿತಿ ನೀಡಿದ್ದಾರೆ.
15 ಎನ್‍ಆರ್‍ಡಿ-4 ಪೊಟೋ ಶಿರ್ಷಿಕೆ) ನರಗುಂದ ತಾಲೂಕಿನ ಚಿಕ್ಕನರಗುಂದದಲ್ಲಿಯ ಮಲ್ಲಪ್ಪ ಅರೆಬೆಂಚಿ ತಮ್ಮ ಮನೆ ಮುಂದಿದ್ದ ಕಲ್ಲು ಮಣ್ಣು ರಾಶಿ ತೆಗೆಸುವಂತೆ 2014 ರಿಂದ ಮೇಲಾಧಿಕಾರಿಗಳಿಗೆ ವಿನಿಂತಿಸಿಕೊಂಡಿದ್ದರು ಇದುವರೆಗೂ ಸಮಸ್ಯೆ ಪರಿಹಾರ ಕಂಡಿಲ್ಲ.

loading...