ಅರಣ್ಯವಾಸಿಗಳಿಂದ ದಾಖಲೆಗಳನ್ನು ಪೂರೈಸಲು ತೆಗೆದುಕೊಂಡ ಕ್ರಮ ಹಿಂಪಡೆಯುವಂತೆ ಮನವಿ

0
25
loading...

ಕನ್ನಡಮ್ಮ ಸುದ್ದಿ-ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಉಪ ವಿಭಾಗ ಮಟ್ಟದ ಸಭೆಯಲ್ಲಿ ಕಾನೂನಿನ ವ್ಯಾಖ್ಯಾನಕ್ಕೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳಿಂದ ದಾಖಲೆಗಳನ್ನು ಪೂರೈಸಲು ತೆಗೆದುಕೊಂಡ ಕ್ರಮವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಪ್ರಮುಖರು ಒತ್ತಾಯಿಸಿದ್ದಾರೆ.
ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ನೇತೃತ್ವದಲ್ಲಿ ನಿಯೋಗವು ಶನಿವಾರ ಪಾರಂಪರಿಕ ಅರಣ್ಯವಾಸಿಗಳ ಭೂಮಿ ಮಂಜೂರಿಗೆ ಕಾನೂನು ಅನುಷ್ಠಾನದ ನೋಡಲ್ ಎಜೆನ್ಸಿಯಾಗಿರುವ ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಬರೆದ ಮನವಿಯನ್ನು ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನೀಡಿ ಒತ್ತಾಯಿಸಿತು. ಉಪವಿಭಾಗ ಮಟ್ಟದಲ್ಲಿ 76 ವರ್ಷ ವಯಸ್ಸಿನ ಹಿರಿಯರ ಹೇಳಿಕೆಯನ್ನು ಅಫಿಡಾವಿಟ್‍ನಲ್ಲಿ ಸಲ್ಲಿಸಬೇಕೆಂದು ಸಮಿತಿಯ ಸಭೆಯಲ್ಲಿ ನಿರ್ಣಯಿಸುತ್ತಿರುವುದು ಕಾನೂನಿಗೆ ವ್ಯತಿರಿಕ್ತವಾಗಿದೆ. ಈ ಹಿಂದೆಯೇ ಜಿಲ್ಲಾಧಿಕಾರಿಯಾಗಿರುವ ಇಂಕಾಂಗ್ಲೋ ಜಮೀರ್ ಅವರು ಹಿರಿಯರ ಹೇಳಿಕೆಯನ್ನು ಅಫಿಡಾವಿಟ್‍ನಲ್ಲಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಹಾಗೂ ಅತಿಕ್ರಮಿತ ಜಮೀನಿನ ವಾಸ್ತವ್ಯದ ಮನೆಯ ಭಾವಚಿತ್ರ ಲಗತ್ತಿಸುವ ಅವಶ್ಯಕತೆ ಇಲ್ಲವೆಂದು ಆದೇಶಿಸಿದ್ದಾಗ್ಯೂ ಕಾನೂನು ಬಾಹಿರವಾಗಿ ಉಪವಿಭಾಗ ಮಟ್ಟದ ಸಭೆಗಳಲ್ಲಿ ಇಂಥ ದಾಖಲೆಗೆ ಒತ್ತಾಯಿಸಿ ನಿರ್ಣಯಿಸಿರುವುದು ಸಮಂಜಸವಲ್ಲ. ಅಲ್ಲದೇ ಕಾನೂನಿನಗೆ ವ್ಯತಿರಿಕ್ತವಾದ ನಿರ್ಣಯವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಅತಿಕ್ರಮಣದಾರರ ಕುಟುಂಬದ ವಂಶಾವಳಿ ಮತ್ತು ಹಿಡುವಳಿ ನೇರವಾಗಿ ಅರಣ್ಯ ಹಕ್ಕು ಸಮಿತಿಯ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಂದ ಅರಣ್ಯವಾಸಿಗಳ ದಾಖಲೆಗಳನ್ನು ಪಡೆದುಕೊಳ್ಳಬೇಕೆಂದು ಈ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜುಲೈ 7 ರಂದು ನಡೆದ ಸಭೆಯಲ್ಲಿ ನಿರ್ಣಯಿಸಿದಾಗ್ಯೂ ವಂಶಾವಳಿ ಮತ್ತು ಹಿಡುವಳಿ ದಾಖಲೆಗಾಗಿ ಅತಿಕ್ರಮಣದಾರರ ಕುಟುಂಬವು ಹಣ ಮತ್ತು ವೇಳೆ ವೆಚ್ಚ ಮಾಡಿ ಅಲೆದಾಡುವಂಥ ಈ ಉಪವಿಭಾಗ ಮಟ್ಟದ ಸಭೆಯ ನಿರ್ಣಯದಿಂದ ಉಂಟಾಗಿದೆ. ವಂಶಾವಳಿ ಮತ್ತು ಹಿಡುವಳಿ ನಿರ್ಧರಿಸುವ ಪರಿಮಾಣವು ಗ್ರಾಮ ಅರಣ್ಯ ಹಕ್ಕು ಸಮಿತಿಯ ವ್ಯಾಪ್ತಿಯಲ್ಲಿ ಬರುವಂಥದ್ದಾಗಿದೆ ಎಂದು ಹೇಳಲಾಗಿದೆ. ಅರ್ಜಿದಾರರು 3 ತಲೆಮಾರಿನಿಂದ ಅರಣ್ಯ ಜಮೀನನ್ನು ಜೀವನೋಪಾಯಕ್ಕಾಗಿ ಅವಲಂಭಿಸಿ ಸಾಗುವಳಿ ಮಾಡಿಕೊಂಡು ಬಂದಿರುವ ಬಗ್ಗೆ ಲಭ್ಯವಿರುವ ಯಾವುದೇ ದಾಖಲೆಗೆ ಒತ್ತಾಯಿಸಿರುವುದು, ಕೇಂದ್ರ ಬುಡಕಟ್ಟು ಮಂತ್ರಾಲಯವು ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯಲ್ಲಿ 3 ತಲೆಮಾರಿನಿಂದ ಸಾಗುವಳಿಯ ಮತ್ತು ವಾಸ್ತವ್ಯದ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂದು ಹೇಳಿರುವುದು, ಆ ಪ್ರದೇಶದಲ್ಲಿ ಜನವಸತಿಯ ಪ್ರದೇಶ ಎಂಬ ಆಧಾರದ ಮೇಲೆ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕನ್ನು ನಿರ್ಧರಿಸಬೇಕೆಂಬ ಮಾನದಂಡವನ್ನು ನಿರ್ಲಕ್ಷಿಸಿರುವುದನ್ನು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಾ ಬುಡಕಟ್ಟು ಮಂತ್ರಾಲಯದ ಆದೇಶದಂತೆ ಪಾರಂಪರಿಕ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ ಲಕಮಾಪುರ, ಎನ್.ಜಿ. ಹೆಗಡೆ, ಉದಯ ನಾಯ್ಕ, ಇಬ್ರಾಹಿಂ ನಬೀ ಸಾಬ, ತಿಮ್ಮಾ ಮರಾಠಿ ಮುಂತಾದವರು ಉಪಸ್ಥಿತರಿದ್ದರು.

**
ಅತಿಕ್ರಮಣದಾರರಿಗೆ ಹಿಂಸೆ
ಸಾಗುವಳಿ ಹಕ್ಕು ಕೊಡುವ ದಿಸೆಯಲ್ಲಿ ಅಧಿಕಾರಿಗಳು ಬದಲಾದಂತೆ ಮಾನದಂಡಗಳೂ ಬದಲಾಗುತ್ತಿರುವುದರಿಂದ ಪದೇ ಪದೇ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವು ಅತಿಕ್ರಮಣದಾರರಿಗೆ ಹಿಂಸೆ ಆಗುತ್ತಿದೆ. ನಿಯಮಾವಳಿ ಅನುಷ್ಠಾನವಾಗಿ 8 ವರ್ಷವಾದರೂ ನಿರ್ದಿಷ್ಟವಾದ ಮಾನದಂಡವನ್ನೇ ಸಮಿತಿಗಳು ನಿರ್ಧರಿಸದೇ ಇರುವುದು ಅತಿಕ್ರಮಣದಾರರ ಸಾಗುವಳಿ ಹಕ್ಕು ಪಡೆದುಕೊಳ್ಳುವಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ.
ಎ.ರವೀಂದ್ರ ನಾಯ್ಕ- ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ

loading...