ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಂದ ವಿವಿಧ ಕಾಮಗಾರಿಗಳ ಪರಿಶೀಲನೆ

0
28
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಸೋಮವಾರದಂದು ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರು ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿಪಡೆದುಕೊಂಡರು.ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ತಳಕಲ್ ಬಳಿ ನಿರ್ಮಾಣವಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಟ್ಟಡ, ವರ್ಕ್‍ಶಾಪ್, ಬಾಲಕಿಯರ ವಸತಿ ನಿಲಯ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಕಟ್ಟಡ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದರು. ನಿರ್ಮಾಣ ಸಂದರ್ಭದಲ್ಲಿ ಅಳವಡಿಸಲಾದ ಶಿಸ್ತು, ತಾಂತ್ರಿಕತೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ವಿಚಾರಣೆ ನಡೆಸಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಿ.ವೈ. ಬಂಡಿವಡ್ಡರ್ ಅವರು ಯೋಜನೆಯ ಸಮಗ್ರ ವಿವರಣೆಯನು ನೀಡಿದರು. ಯಲಬುರ್ಗಾ ಎಇಇ ಉಮಾಪತಿ ಶೆಟ್ಟರ್ ಹಾಗೂ ಮೆ: ಬಿ.ಜಿ. ಸಿರ್ಕೆ ಕಂಪನಿಯ ಯೋಜನಾ ಅಭಿಯಂತರ ಜೆ.ಎಸ್. ಪಾಟೀಲ್ ಉಪಸ್ಥಿತರಿದ್ದು, ಪೂರಕ ಮಾಹಿತಿಯನ್ನು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರಿಗೆ ನೀಡಿದರು.
ತಳಕಲ್‍ನ ಸಿ.ಸಿ. ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ವೀಕ್ಷಿಸಿದ ಹರ್ಷಗುಪ್ತಾ ಅವರು ರಸ್ತೆ ಬದಿಯಲ್ಲಿ ಸರ್ವಿಸ್ ಲೇನ್‍ಗಳಿಗೆ ಅಳವಡಿಸಲಾದ ಪೇವೇರ್‍ಗಳನ್ನು ಪರಿಶೀಲಿಸಿದರು. ನಂತರ ಭಾನಾಪುರದ ಸಿಸಿ ರಸ್ತೆಗಳಿಗೆ ಎರಡೂ ಬದಿಯಲ್ಲಿ ನಿರ್ಮಿಸಿದ ಚರಂಡಿಗಳನ್ನು ಗಮನಿಸಿದ ಅವರು, ಸಾರ್ವಜನಿಕ ಕುಂದುಕೊರತೆ ವಿಚಾರಿಸಿದರು.
ಕೊಪ್ಪಳ ನಗರದಲ್ಲಿ ನಿರ್ಮಿಸಲಾಗುತ್ತಿರುವ ರಂಗ ಮಂದಿರದ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ ಅನುದಾನದ ಕುರಿತು ವಿವರಣೆ ಪಡೆದುಕೊಂಡರು. ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ನೂತನವಾಗಿ ಪ್ರಾರಂಭಿಸಲಾದ ಈಜುಕೊಳ, ಸ್ಟೇಡಿಯಂ ಪ್ರೇಕ್ಷಕರ ಗ್ಯಾಲರಿ ಕಾಮಗಾರಿ ವೀಕ್ಷಿಸದರು.
ಕೊಪ್ಪಳ ಶಾಸಕರ ಕೋರಿಕೆಯಂತೆ ಬರುವ ದಿನಗಳಲ್ಲಿ ಕೈಗೊಳ್ಳಲಾಗುವ ಹಸನ್ ರಸ್ತೆ, ಗಡಿಯಾರ ಕಂಬದಿಂದ ಮುದ್ದಾಬಳ್ಳಿ ಕ್ರಾಸ್‍ವರೆಗಿನ ರಸ್ತೆ ಅಭಿವೃದ್ಧಿಗೊಳಿಸುವ ಕಾಮಗಾರಿ ಕುರಿತಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ನಿರ್ಮಿತಿ ಕೇಂದ್ರದ ಅಧಿಕಾರಿ ಶಶಿಧರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

loading...