ಕಿಷ್ಕಿಂದೆಯಂತಾಗಿರುವ ಬೆಳಗಾವಿ ಹಿಂದಕ್ಕೆ ಸಾಗಲು ಜನಪ್ರತಿನಿಧಿಗಳೇ ಕಾರಣ ! – ಸ್ಮಾರ್ಟ್ ಬೆಳಗಾವಿಯಾಗುವುದು ಬೇಡವೇ – ಇಲ್ಲಿ ಎಲ್ಲಕ್ಕೂ ಅಡ್ಡಗಾಲು

0
718

ಕನ್ನಡಮ್ಮ ವಿಶೇಷ
ಬೆಳಗಾವಿ:19 ಬೆಳಗಾವಿ ಮಹಾನಗರ ಪಾಲಿಕೆ ವಾರದ ಹಿಂದೆ ನಡೆಸಿದ ಭಾರೀ ಕಾರ್ಯಾಚರಣೆ ನಗೆಪಾಟಲಿಗೀಡಾಗಿದೆ. ಬೇಸ್‍ಮೆಂಟ್ ತೆರವು ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಪಾಲಿಕೆಯ ಅಧಿಕಾರಿಗಳು ಆರಂಭ ಶೂರತ್ವ ತೋರಿಸಿರುವುದು ಬೆಳಗಾವಿ ಜನತೆಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಖಡೇಬಜಾರ, ಮಾರುತಿಗಲ್ಲಿ, ಗಣಪತಿಗಲ್ಲಿಯಲ್ಲಿ ಏಕಕಾಲಕ್ಕೆ ವಿವಿಧ ತಂಡಗಳಾಗಿ ಪಾಲಿಕೆ ಕೈಗೊಂಡ ಕಾರ್ಯಾಚರಣೆ ವ್ಯಾಪಾರಿಗಳ ಪಾಲಿಗೆ ನಡುಕ ಹುಟ್ಟಿಸಿತ್ತು. ಆದರೆ ಅಷ್ಟೇ ವೇಗದಲ್ಲಿ ತಾನು ಕೈಗೊಂಡ ಕಾರ್ಯಾಚರಣೆಯಿಂದ ಪಾಲಿಕೆ ಹಿಂದೆ ಸರಿದಿರುವುದು ಬೆಳಗಾವಿ ಪಾಲಿಕೆಯಿಂದ ಯಾವ ಕೆಲಸವೂ ಆಗದು ಎನ್ನುವುದನ್ನು ಮತ್ತೇ ತೋರ್ಪಡಿಸಿದೆ.
ಒಂದೇ ದಿನಕ್ಕೆ ರಾಜಾರೋಷದಲ್ಲಿ ಇಂಥ ಕಾರ್ಯಾಚರಣೆ ನಡೆಸಬೇಕಿತ್ತೆ ಎನ್ನುವುದನ್ನು ನಗರ ಜನತೆಯ ಪ್ರಶ್ನೆಯಾಗಿದೆ. ಇಷ್ಟಕ್ಕೂ ಅಧಿಕಾರಿಗಳು ಸ್ಥಳೀಯ ಶಾಸಕ ಫಿರೋಜ್ ಸೇಠ್ ಬೇದರಿಕೆಗೆ ಮತ್ತೊಮ್ಮೆ ಮಣಿದಿರುವುದು ಸದ್ಯಕ್ಕಂತೂ ಬೆಳಗಾವಿಯಲ್ಲಿ ಯಾವುದೇ ಅಭಿವೃದ್ಧಿ ಪರ ಕೆಲಸಗಳು ನಡೆಯಲಾರದು ಎನ್ನುವುದನ್ನು ತೋರಿಸಿಕೊಟ್ಟಿದೆ.
ರಾಜ್ಯದ ಎರಡನೇ ರಾಜ್ಯಧಾನಿ ಸೇರಿದಂತೆ ಹಲವು ಹಿರಿಮೆಗಳನ್ನು ಹೊಂದಿರುವ ಬೆಳಗಾವಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದಕ್ಕೆ ಅನುಗುಣವಾಗಿ ವಾಹನಗಳ ದಟ್ಟನೆಯಿಂದ ನಗರ ನಲುಗಿದೆ. ವಾಹನಗಳ ಇಂಥ ದಟ್ಟನೆಗೆ ಮುಕ್ತಿ ಹಾಡಲು ಬೇಸಮೆಂಟ್ ತೆರವು ಕಾರ್ಯಾಚರಣೆ ಪರಿಹಾರವಾಗಿತ್ತು. ಆದರೆ ಶಾಸಕರ ಗೊಡ್ಡು ಬೇದರಿಕೆಗೆ ಅಧಿಕಾರಿಗಳು ಮಣಿದಿರುವುದು ಸರಿಯೇ ಎನ್ನುವುದು ಜನರ ಆಕ್ರೋಶದ ಕಿಡಿ ಬೇಸಮೆಂಟ್ ತೆರವು ಕಾರ್ಯಾಚರಣೆ ಈಗೀನದಲ್ಲ ಹತ್ತಾರು ವರ್ಷಗಳಿಂದ ಬೇಸಮೆಂಟ್ ತೆರವುಗೊಳಿಸುವಂತೆ ಪಾಲಿಕೆ ವ್ಯಾಪಾರಿಗಳಿಗೆ ಹಲವು ಸಲ ನೋಟಿಸ್ ಜಾರಿಮಾಡಿದೆ. ಅದೇ ಆದಾರದ ಮೇಲೆ ಈಗ ಕೈಗೊಂಡಿರುವ ಕಾರ್ಯಾಚರಣೆಯನ್ನು ಮುಂದುವರೆಸ ಬಹುದಿತ್ತು. ಆದರೆ ಜನಪ್ರತಿನಿಧಿಗಳ ಬೇದರಿಕೆಗೆ ಅಧಿಕಾರಿಗಳು ಶರಣಾಗಿರುವುದಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಬೆಳಗಾವಿ ಜನತೆಯ ನೈಜ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರು ಸೇರಿದಂತೆ ಇತರೆ ಜನಪ್ರತಿನಿದಿಗಳು ಬೇಸಮೆಂಟ್ ತೆರವು, ಆಟೋರೀಕ್ಷಾಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲು  ಮುಂದಾದಗ ಎಲ್ಲಿದರೂ ಸರಿ ಸ್ಥಳಕ್ಕೆ ಧಾವಿಸಿ ಸರಕಾರದ ಆದೇಶಕ್ಕೆ ಅಡ್ಡಗಾಲು ಹಾಕುತ್ತಾರೆ. ಬೆಳಗಾವಿ ಜನಪ್ರತಿನಿಧಿಗಳ ಇಂಥ ಒಣ ರಾಜಕೀಯಕ್ಕೆ ಜನತೆ ರೋಸಿ ಹೋಗಿದ್ದಾರೆ. ಕೇಂದ್ರ ಸರಕಾರದ ಮಹತ್ವಾ ಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿ ಅಧಿಕಾರಿಗಳ ಪರಿಶ್ರಮದಿಂದ ಮೊದಲ ಹಂತದಲ್ಲಿ ಆಯ್ಕೆಯಾಗಿದ್ದರೂ ಜನಪ್ರತಿನಿಧಿಗಳ ಇಂಥ ಒಲೈಕೆಯ ರಾಜಕಾರಣದಿಂದ ಸ್ಮಾರ್ಟ ಸಿಟಿ ಯೋಜನೆಗೆ ಹಿನ್ನಡೆಯಾಗುತ್ತಿದೆ.
ಸ್ಮಾರ್ಟ್‍ಸಿಟಿಗೆ ಆಯ್ಕೆಯಾಗಿ ಎರಡು ವರ್ಷ ಕಳೆದರೂ ಬೆಳಗಾವಿ ಹಿಂದೆ ಹೇಗಿತ್ತೋ ಹಾಗೇಯೇ ಮುಂದುವರೆದಿದೆ. ಸದ್ಯದ ಜನಪ್ರತಿನಿಧಿಗಳ ರಾಜಕೀಯದಿಂದಾಗಿ ಕೆಲಸ ಮಾಡಲು ಮನಸ್ಸಿದ್ದರು ಕೈಗಟ್ಟಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ ಬಂದೊದಗಿದೆ.
ಒಟ್ಟಾರೆ ಬೆಳಗಾವಿಯಲ್ಲಿ ಸದ್ಯ ನಡೆದಿರುವ ರಾಜಕಾರಣ ಅಭಿವೃದ್ಧಿ ಕುಂಠಿತಗೊಳಿಸುವಂತಾಗಿದೆ. ಬೇಸಮೆಂಟ್ ತೆರವು ಸದ್ಯಕ್ಕಂತೂ ಆಗದು ಎಂದು ವ್ಯಾಪಾರಿಗಳು ಮಾತನಾಡಿಕೊಳ್ಳುತ್ತಿದ್ದು, ಪಾಲಿಕೆ ನಡೆಸಿದ ಕಾರ್ಯಾಚರಣೆ ಹಾಗೇ ಮುಂದುವರೆದಿದ್ದರೇ ಪಾರ್ಕಿಂಗ್ ಸಮಸ್ಯೆಯಿಂದ ನಗರ ಮುಕ್ತಿ ಹೊಂದಬಹುದಾಗಿತ್ತು. ಆದರೆ ಬೆಳಗಾವಿ ಮಾತ್ರ “ಕಿಷ್ಕಿಂದೆ’ಯಂತೆ ಇರುವುದು ಬೇಸರದ ಸಂಗತಿ.
loading...