ಡಿಜಿಟಲ್ ವ್ಯವಸ್ಥೆ ಅನುಸರಿಸುವುದು ಅಗತ್ಯ

0
29
loading...

ರಾಮದುರ್ಗ: ಭಾರತ ಆರ್ಥಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದು, ಎಲ್ಲ ಕ್ಷೇತ್ರದಲ್ಲಿ ಡಿಜಿಟಲೀಕರಣದತ್ತ ಸಾಗುತ್ತಿದೆ. ಹಾಗಾಗಿ ಎಲ್ಲರು ಇಂದಿನ ಡಿಜಿಟಲ್ ವ್ಯವಸ್ಥೆಯನ್ನು ಅನುಸರಿಸುವುದು ತೀರಾ ಅಗತ್ಯವಿದೆ ಎಂದು ನಬಾರ್ಡ ಎಲ್.ಜಿ.ಎಂ ಆದಿತ್ಯಾ ಮಾವಿನಕುರವೆ ಹೇಳಿದರು.
ತಾಲೂಕಿನ ಚಂದರಗಿ ಕ್ರೀಡಾ ವಸತಿ ಶಾಲೆಯಲ್ಲಿ ನಬಾರ್ಡ, ಸಿಂಡಿಕೇಟ ಬ್ಯಾಂಕ್, ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತೆ ಕೇಂದ್ರ ಹಾಗೂ ಸ್ಪೋಕೊ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ಗೋಯಿಂಗ್ ಡಿಜಿಟಲ್ ಆರ್ಥಿಕ ಸಾಕ್ಷರತೆ ಕಾರ್ಯಾಗಾರದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆಯಾಗುತ್ತಿದೆ. ಎಲ್ಲವೂ ಡಿಜಿಟಲೀಕರಣಗೊಳ್ಳುತ್ತಿದೆ. ಇದರಿಂದ ತ್ವರಿತವಾಗಿ ಸೇವೆ ಪಡೆದುಕೊಳ್ಳಲು ಸಾಧ್ಯವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇದು ತೀರಾ ಅಗತ್ಯವಿದೆ. ವಿದೇಶಿ ಕಂಪನಿಗಳನ್ನು ಕೈಬಿಟ್ಟು ದೇಶಿಯ ಕಂಪನಿಗಳನ್ನು ಉದ್ದರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಗಮನ ಹರಿಸುತ್ತಿದ್ದಾರೆಂದು ಅವರು ತಿಳಿಸಿದರು.
ಸಿಂಡಿಕೇಟ ಬ್ಯಾಂಕಿನ ಮುಖ್ಯ ಪ್ರಬಂಧಕ ಕುಲಶ್ರೇಷ್ಠ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಬ್ಯಾಂಕುಗಳು ಶಿಕ್ಷಣ ಸಾಲ ನೀಡಲು ಬ್ಯಾಂಕುಗಳು ಸನ್ನದ್ಧವಾಗಿವೆ. ಇದರ ಸದುಪಯೋಗ ಪಡೆಸಿಕೊಂಡು ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕೆಂದು ಕರೆ ನೀಡಿದರು.
ಆರ್ಥಿಕ ಸಾಕ್ಷರತೆ ಕೇಂದ್ರದ ಹಿರಿಯ ಸಮಾಲೋಚಕ ಬಿ.ಬಿ.ವಾಲಿ ಮಾತನಾಡಿ, ಗೋಯಿಂಗ್ ಡಿಜಿಟಲ್ ಪರಿಕಲ್ಪನೆ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರಲ್ಲದೆ, ನಗದು ರಹಿತ ವ್ಯವಹಾರ, ಮೊಬೈಲ್ ಬ್ಯಾಂಕಿಂಗ ವ್ಯವಸ್ಥೆ, ಇಂಟರ್ ನೆಟ್ ಬ್ಯಾಂಕಿಂಗ್, ಮೈಕ್ರೋ ಎಟಿಎಂ ಬಳಕೆ ಕುರಿತು ಮಾಹಿತಿ ನೀಡಿದರು
ಸ್ಪೋಕೋ ಸಂಸ್ಥೆಯ ಅಧ್ಯಕ್ಷ ಆರ್.ಎ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತೆ ಕೇಂದ್ರದ ಕಿರಿಯ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ಸ್ಪೋಕೋ ಸಂಸ್ಥೆಯ ನಿರ್ದೇಶಕ ಶಿವಣ್ಣ ನವರಕ್ಕಿ, ಪ್ರಾಚಾರ್ಯ ಎ.ಎನ.ಮೋದಗಿ ಉಪಸ್ಥಿತರಿದ್ದರು. ಎಸ್.ಎ.ಹಿರೇಮಠ ಸ್ವಾಗತಿಸಿದರು. ಗೀತಾ ಖಾನಪೇಟ ವಂದಿಸಿದರು.

loading...