ದೇಶ ಮುನ್ನಡೆಸುವಲ್ಲಿ ಯುವಕರ ಪಾತ್ರ ಮುಖ್ಯ: ಮೋಹನಕುಮಾರಿ

0
51
loading...

ಕನ್ನಡಮ್ಮ ಸುದ್ದಿ-ಕುಮಟಾ: ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯವನ್ನು ಕ್ರಿಯಾತ್ಮಕ ಕೆಲಸಗಳಿಗಾಗಿ ತೊಡಗಿಸಿಕೊಳ್ಳಬೇಕು. ಇಂದು ದೇಶಕಟ್ಟುವ ಜವಾಬ್ದಾರಿ ನಮ್ಮ ಯುವಕರ ಮೇಲಿದೆ. ಆದರೆ ಬೇಸರದ ಸಂಗತಿಯೆಂದರೆ ನಮ್ಮ ಕೆಲವು ಯುವಜನ ಮಾದಕ ದೃವ್ಯಗಳ ವ್ಯಸನಿಯಾಗುತ್ತಿದ್ದಾರೆ. ಇಂತಹವರಿಗೆ ಕೆಲವು ಸಮಾಜಘಾತುಕ ಶಕ್ತಿಗಳು ಇಂತಹ ಕೆಲಸದಲ್ಲಿತೊಡಗಿಕೊಳ್ಳುವಂತೆ ಪ್ರೇರಣೆ ನೀಡುತ್ತಿದ್ದಾರೆ. ಅಲ್ಲದೇ ಕಾಲೇಜುಗಳಲ್ಲಿ ರ್ಯಾಗಿಂಗ್ ಅಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವದು ಅಕ್ಷೇಪಣೀಯ ಎಂದು ಕುಮಟಾ ನ್ಯಾಯಾಲಯದ ಹೆಚ್ಚುವರಿ ನ್ಯಾಯಾದೀಶರು ಮತ್ತು ಪ್ರ ದ ನ್ಯಾ ದಂಡಾಧಿಕಾರಿ ಮೋಹನಕುಮಾರಿ ಎನ್ ಬಿ ಅಭಿಪ್ರಾಯಪಟ್ಟರು.
ಅವರು ಗುರುವಾರ ಕುಮಟಾ ತಾಲೂಕು ಕಾನೂನು ಸಮಿತಿ ನ್ಯಾಯವಾದಿಗಳ ಸಂಘ ಅಭಿಯೋಜನಾ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಾದಕದೃವ್ಯ ವ್ಯಸನ ಮತ್ತು ರ್ಯಾಗಿಂಗ್ ತಡೆಗಟ್ಟುವಿಕೆಯ ಕುರಿತು ಜಾಗೃತಿ ಮೂಡಿಸುವ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದುರ್ಜನರ ಸಹವಾಸದಿಂದ ಮಾದಕದೃವ್ಯ ವ್ಯಸನಗಳನ್ನು ಯುವಜನರು ಕಲಿಯುತ್ತಾರೆ. ಇದು ಅವರ ಮುಂದಿನ ಜೀವನದ ಭವಿಷ್ಯವನ್ನು ಹಾಳುಗೆಡವುತ್ತದೆ. ಹಾಗಾಗಿ ಇಂತಹ ವ್ಯಸನಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಒಂದಾಗಿ ವಿದ್ಯಾಭ್ಯಾಸವನ್ನು ಮಾಡಬೇಕು. ಸ್ನೇಹದಿಂದ ದೂರ ಮಾಡಿ ಭಯವನ್ನು ಹುಟ್ಟಿಸುವಂತಹ ರ್ಯಾಗಿಂಗ್ ನಂತಹ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು. ಅದಕ್ಕೆ ಕಾನೂನು ಸಂಪೂರ್ಣವಾಗಿ ಬೆಂಬಲ ನೀಡುತ್ತದೆ. ಹಾಗೇನಾದರೂ ಒಂದು ವೇಳೆ ಇಂತಹ ವಿಷಯಗಳು ನಿಮ್ಮ ಗಮನಕ್ಕೆ ಬಂದರೆ ರ್ಯಾಗಿಂಗ್ ನಿಷೇದ ದಳಕ್ಕೆ ತಿಳಿಸಿ ಸಹಾಯ ಪಡೆಯಿರಿ ಎಂದರು.
ಡಾ ಆಜ್ಞಾ ನಾಯಕ ಅವರು ಮಾದಕ ದ್ರವ್ಯ ವ್ಯಸನದ ಪರಿಣಾಮದ ಬಗ್ಗೆ ಉಪನ್ಯಾಸ ನೀಡಿ, ಮಾದಕದ್ರವ್ಯವು ಮದ ಮತ್ತು ಮುದ ನೀಡುವ ಭ್ರಮೆಯನ್ನು ಹುಟ್ಟಿಸಿ ಕೊನೆಗೆ ಸಾವಿನ ಅಂಚಿಗೆ ತೆಗೆದುಕೊಂಡು ಹೋಗುತ್ತದೆ. ವೈದ್ಯಕೀಯ ವಿಜ್ಞಾನದಲ್ಲಿ ಉಪಚಾರಕ್ಕಾಗಿ ಬಳಸುವ ಕೆಲವು ಔಷಧಿಗಳನ್ನು ಕೆಲವು ಸಮಾಜಘಾತುಕ ಶಕ್ತಿಗಳು ದುರುಪಯೋಗ ಪಡಿಸಿಕೊಂಡು ಯುವಜನರಿಗೆ ಭ್ರಮಾಲೋಕದಲ್ಲಿ ತೇಲಿಸುವ ಕನಸುಗಳಿಗೆ ಬಲಿಪಡಿಸಿ ಮೃತ್ಯುಲೋಕಕ್ಕೆ ತಳ್ಳುತ್ತಿದ್ದಾರೆ. ಒಮ್ಮೆ ಇಂತಹ ಚಟಗಳಿಗೆ ಬಲಿಯಾದವನು ಮತ್ತೆ ತಿರುಗಿ ಸಾಮಾನ್ಯ ಜೀವನಕ್ಕೆ ಕಾಲಿಡುವದು ತುಂಬಾ ಕಷ್ಟಸಾಧ್ಯ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಇಂತಹ ವ್ಯಸನಗಳಿಗೆ ಬಲಿಯಾಗಬೇಡಿ ಎಂದರು.
ಇನ್ನೊರ್ವ ಉಪನ್ಯಾಸಕಿ ನ್ಯಾಯವಾದಿ ಮಮತಾ ನಾಯ್ಕ ಮಾತನಾಡಿ, ವಿಕೃತ ಮನಸ್ಸಿನ ಕೆಲ ಯುವಜನರು ಇನ್ನೊಬ್ಬರ ದುಖಃವನ್ನು ನೋಡಿ ಸುಖಪಡುತ್ತಾರೆ. ಇಂತವರು ರ್ಯಾಗಿಂಗನಂತಹ ಹೀನಕೃತ್ಯಗಳನ್ನು ಎಸಗುತ್ತಾರೆ. ಇಂತಹ ದುಷ್ಕøತ್ಯಕ್ಕೆ ಬಲಿಯಾದ ಅಮಾಯಕ ಯುವ ಜನರು ಖಿನ್ನತೆಗೆತುತ್ತಾಗಿ ಮಾದಕ ದ್ರವ್ಯಗಳಂತಹ ವ್ಯಸನಕ್ಕೆ ಬಲಿಯಾಗುತ್ತಾರೆ. ಇಂದು ನಮ್ಮ ಯುವಜನರು ನಮ್ಮ ದೇಶವನ್ನು ಕಟ್ಟುವ ಜವಾಬ್ದಾರಿ ಹೊತ್ತಿದ್ದಾರೆ ಹಾಗಾಗಿ ರ್ಯಾಗಿಂಗನಂತಹ ಅನಿಷ್ಟಗಳು ನಮ್ಮ ಕನಸುಗಳನ್ನು ನುಚ್ಚುನೂರು ಮಾಡಬಹುದು. ಇಂತಹ ಅನಿಷ್ಟಗಳನ್ನು ದೂರಮಾಡಲು ನಮ್ಮ ಕಾನೂನು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ಪೊಲೀಸ ಇನ್ಸಪೆಕ್ಟರ ಮಂಜುನಾಥ ಭೋರ್ಕರ ಉಪಸ್ಥಿತರಿದ್ದರು. ಕುಮಟಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಐ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನವೀನ ನಾಯ್ಕ ಸ್ವಾಗತಿಸಿದರು. ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ಪ್ರೋ ಗೌಡಾ ರಾಮ ಮಹಾದೇವ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಭಟ್ ನಿರೂಪಿಸಿದರು. ನ್ಯಾಯವಾದಿ ನಾಗರಾಜ ಹೆಗಡೆ ವಂದಿಸಿದರು.

loading...