ನರಗುಂದ ರೈತರ ಹೋರಾಟ ಇಂದಿಗೂ ಅವಿಸ್ಮರಣೀಯ

0
38
loading...

ಕನ್ನಡಮ್ಮ ಸುದ್ದಿ-ನರಗುಂದ: ರೈತರ ಬದುಕಿಗಾಗಿ ಸರ್ಕಾರಗಳು ಕಾಯಕಲ್ಪ ಕೊಡುವುದನ್ನು ಮರೆತಿವೆ. ಜಮೀನುಗಳಿಗೆ ನೀರನ ಸೌಲಭ್ಯ ದೊರೆಯದಿದ್ದರೂ ನೀರಿನ ಅಭಿವೃದ್ದಿ ಕರ ಕಡ್ಡಾಯವಾಗಿ ಪಾವತಿಸಬೇಕೆಂಬ ಇದ್ದ ಕಾನೂನು ರದ್ದು ಪಡಿಸುವಂತೆ ಕೋರಿ 1980 ರ ಜುಲೈ 21 ರಂದು ನರಗುಂದ ಪಟ್ಟಣದಲ್ಲಿ ರೈತರ ಬೃಹತ್ ಪ್ರತಿಭಟಣೆ ಸರ್ಕಾರದ ವಿರುದ್ದ ನಡೆಯಿತು. ಅಂದಿನ ಗುಂಡುರಾವ್ ಸರ್ಕಾರಕ್ಕೆ ಇದು ಎಚ್ಚರಿಕೆ ಗಂಟೆಯಾಗಿಯೂ ಪರಿಣಮಿಸಿತ್ತು. ಆ ಹೋರಾಟ ನಡೆದು 37 ವರ್ಷಗಳು ಈದೀಗ ಸಂಧಿವೆ. ರೈತರ ಆ ಹೋರಾಟ ಇಂದಿಗೂ ಹಸಿರಾಗಿ ಉಳಿದುಕೊಂಡಿದೆ.
ನರಗುಂದ ಭಾಗದಲ್ಲಿ ನೀರಾವರಿಗಾಗಿ ಕಾಲುವೆ ನಿರ್ಮಿಸಿ ಅದರ ಮುಖಾಂತರ ನೀರನ್ನು ಜಮೀನುಗಳಿಗೆ ಬಿಡುಗಡೆಮಾಡಲು ಮಹತ್ವದ ಯೋಜನೆ ಕಾರ್ಯರೂಪಗೊಂಡಿತ್ತು. ಆದರೆ ಸಕಾಲಕ್ಕೆ ನೀರು ಈ ಭಾಗದಲ್ಲಿ ದೊರೆಯದ್ದರಿಂದ ರೈತರು ಚಿಂತಾಕ್ರಾಂತರಾಗಿ ಸರ್ಕಾರ ಅಭಿವೃದ್ದಿ ಕರ ರದ್ದುಪಡಿಸಬೇಕೆಂದು ಅಂದು ಹೋರಾಟ ನಡೆಸಿದರು. ರೈತರ ಈ ಹೋರಾಟ ನರಗುಂದ ಹಾಗೂ ನವಲಗುಂದ ತಾಲೂಕುಗಳಲ್ಲಿ ಏಕಕಾಲದಲ್ಲಿ ನಡೆಯಿತು. ನೀರಿನ ಅಭಿವೃದ್ದಿ ಕರ ಸರ್ಕಾರ ರದ್ದುಪಡಿಸಲೇಬೇಕೆಂದು ರೈತರು ಒಕ್ಕೂರಿಲಿನ ಬೇಡಿಕೆ ಸರ್ಕಾರ ಇಟ್ಟು ಹೋರಾಟ ನಡೆಸಿದರು. ಅಂದು ಮೆರವಣಿಗೆ ಮುಖಾಂತರ ತಹಸೀಲ್ದಾರ ಕಚೇರಿಗೆ ತೆರಳಿದ ರೈತರು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುವ ಪೂರ್ವ ಆಗಿನ ತಹಸೀಲ್ದಾರ ಅವರ ಬಳಿ ನೀರಿನ ಅಭಿವೃದ್ದಿ ಕರ ರದ್ದುಪಡಿಸಲು ಧರಣಿ ನಡೆಸಿದರು. ಕಚೇರಿ ಬಂದ್ ಮಾಡಿ ಎಂದು ಆಗ್ರಹಿಸಿದರು. ಆಗಿನ ತಹಸೀಲ್ದಾರ ವರೂರ ಅವರು ನಾನು ಸರ್ಕಾರಿ ನೌಕರ ನೀವು ಹೇಳಿದಂತೆ ಕೇಳಲು ಆಗುವುದಿಲ್ಲ. ಮೇಲಾಧಿಕಾರಿಗಳಿಂದ ಕಚೇರಿ ಬಂದ್‍ಗೊಳಿಸಲು ಯಾವ ಆದೇಶವೂ ಬಂದಿಲ್ಲವೆಂದು ತಿಳಿಸಿದಾಗ ರೈತರು ರೋಷಗೊಂಡು ಪ್ರತಿಭಟಣೆ ಕಾವು ಹೆಚ್ಚಿಸಿದರು.
ಪ್ರತಿಭಟನೆ ತಾರಕಕ್ಕೇರಿ ಕಲ್ಲು ತೂರಾಟವೂ ನಡೆಯಿತು. ಅಲ್ಲಿದ ಪೊಲೀಸರು ಗುಂಡು ಹಾರಿಸಿದ ಸಂದರ್ಭದಲ್ಲಿ ಪ್ರತಿಭಟಣೆಯಲ್ಲಿದ್ದ ತಾಲೂಕಿನ ಚಿಕ್ಕನರಗುಂದದ ರೈತ ವೀರಪ್ಪ ಕಡ್ಲಿಕೊಪ್ಪ ಅವರ ಎದೆಗೆ ತಾಗಿ ಸ್ಥಳದಲ್ಲಿಯೇ ರೈತ ಸಾವನ್ನಪ್ಪಿದ್ದರಿಂದ ರೈತರು ಕೋಪ ವ್ಯಕ್ತಗೊಳಿಸಿ ಪ್ರತಿಭಟಣೆ ಬಿಸಿ ಮುಟ್ಟಿಸಿದರು. ಆಗ ಪೊಲೀಸರು ಗಾಳಿಯಲ್ಲಿ ಆಶ್ರುವಾಯು ಪ್ರಯೋಗಿಸಿದರು. ಇದಕ್ಕೆ ಅಂಜದೇ ರೈತರು ಆ ಅಶ್ರವಾಯುಗಳನ್ನು ಹಿಡಿದು ಪೊಲೀಸರತ್ತ ಎಸೆದರು. ಹೀಗೆ ರೈತರ ಪ್ರತಿಭಟಣೆ ಕಾವು ಜೋರಾಗಿ ರೈತ ಕಡ್ಲಿಕೊಪ್ಪ ಅವರ ಸಾವಿಗೆ ಕಾರಣರಾದವರು ಯಾರು ಅವರಿಗೆ ಗುಂಡು ಹಾರಿಸಿದ್ದು ಯಾರು ಎಂದು ಪೊಲೀಸರನ್ನು ತಡೆದ್ದು ಅವರ ಮೇಲೆ ಬಲಪ್ರಹಾರ ಹಾಗೂ ತಾವು ಪ್ರತಿಭಟಣೆಗೆ ತಂದಿದ್ದ ಮೇಳಿಗಳಿಂದ ಥಳಿಸಲು ಆರಂಭಿಸಿದ್ದರಿಂದ ಕಂಡ ಪೋಲೀಸರ ಮೇಲೆ ಹಲ್ಲೆ ಪ್ರಹಾರ ನಡೆಸಲು ರಯತರು ಆರಂಭಿಸಿದ್ದರಿಂದ ಪೊಲೀಸರು ಬೆದರಿ ತಮ್ಮ ಸಮವಸ್ರ್ತಗಳನ್ನು ಗೌಪ್ಯವಾಗಿ ತೆಗೆದಿರಿಸಿ ಒಳ ಉಡುಪುಗಳ ಮೇಲೆ ಸಂಚಿರಿಸಿದರು. ಒಳ ಉಡುಪಿನ ಮೇಲೆ ಪೊಲೀಸರು ಇದ್ದಾರೆಂದು ಅರಿತ ರೈತರು ಅಂತವರ ಮೇಲೆಯೂ ಕೈಮಾಡಲು ಶುರುಮಾಡಿದರು. ಇದರಿಂದ ಕೆಲ ಪೊಲೀಸರು ಪಲಾಯಾನ ಗೈದರು. ಕೊನೆಗೆ ವೀರಪ್ಪ ಕಡ್ಲಿಕೊಪ್ಪ ಅವರಿಗೆ ಗುಂಡುಹಾರಿಸಲು ಕಾರಣಗೊಂಡ ಪಿಎಸ್‍ಐ ಪಟೇಲ್ ಅವರೆಂದು ತಿಳಿದುಕೊಂಡ ಪೊಲೀಸರು ಅವರ ಹುಡುಕಾಟ ನಡೆಸಿದರು. ಅದಾಗಲೇ ರೈತರ ಪ್ರಹಾರದಿಂದ ಪೆಟ್ಟು ತಿಂದ ಪೊಲೀಸರು ಪಕ್ಕದಲ್ಲಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಅಲ್ಲಿಗೆ ತೆರಳಿದ ರೈತರು ಪಿಎಸ್‍ಐ ಪಟೇಲರ ಹುಡುಕಾಟದಲ್ಲಿ ತೊಡಗಿದರು. ಸರ್ಕಾರಿ ಆಸ್ಪತ್ರೆಯ ಆಗಿನ ವೈದ್ಯ ಪಾಟೀಲ ಅವರನ್ನು ಕೇಳಿದರು. ವೈದ್ಯರು ಇಲ್ಲಿ ಬಂದಿಲ್ಲವೆಂದು ತಿಳಿಸಿದರು. ಕೊನೆಗೆ ಆಸ್ಪತ್ರೆಯಲ್ಲಿಯೇ ಪಿಎಸ್‍ಐ ಪಟೇಲ ಅವರ ದೊರೆತ ನಂತರ ವೈದ್ಯರು ತಮಗೆ ಇಲ್ಲವೆಂದು ಸುಳ್ಳು ಹೇಳಿದ್ದಾರೆಂದು ವೈದ್ಯರ ಮೇಲೆಯೇ ಕೈಮಾಡಿದರು. ಇದರಿಂದ ಅವಮಾನಗೊಂಡ ವೈದ್ಯ ಪಾಟೀಲ ಪೊಲೀಸರಿಗೆ ಚಿಕಿತ್ಸೆ ಕೊಡುವುದನ್ನು ನಿಲ್ಲಿಸಿ ತಮ್ಮ ವಿಶ್ರಾಂತಿ ಗ್ರಹಕ್ಕೆ ತೆರಳಿ ಬಾಗಿಲು ಮುಚ್ಚಿಕೊಂಡರು.
ರೈತರು ಪಿಎಸ್‍ಐ ಪಟೇಲ್ ಅವರ ಮೇಲೆ ಬಲಪ್ರಹಾರ ಮಾಡಿ ಮೇಳಿಗಳಿಂದ ಥಳಿಸಿದರು. ನೋವು ತಡೆಯಲಾರದೇ ಆಸ್ಪತ್ರೆಯಿಂದ ಹೊರಬಂದ ಪಟೇಲ್ ವೈದ್ಯರೆ ನನ್ನನ್ನು ಉಳಿಸಿ ಎಂದು ವೈದ್ಯರಿರುವ ವಿಶ್ರಾಂತಿಗೃಹಕ್ಕೆ ಓಡುತ್ತಸಾಗಿದರು. ವೈದ್ಯರು ಮುಚ್ಚಿದ ಬಾಗಿಲು ತೆರೆಯಲಿಲ್ಲ. ರೈತರ ಥಳಿತದಿಂದ ಪಿಎಸ್‍ಐ ಅಸುನಿಗಿದರು. ಅವರು ಸಾವನ್ನಪ್ಪುವ ಸಂದರ್ಭದಲ್ಲಿ ಕೆಲ ರೈತರು ಅವರಿಗೆ ನೀರು ಕುಡಿಸಲು ಪ್ರಯತ್ನಿಸಿದರು. ಆದರೆ ನಾನು ರೋಜಾ ಇರುವುದಾಗಿ ತಿಳಿಸಿ ನೀರು ಕುಡಿಯದೇ ಸಾವನ್ನಪ್ಪಿದರು. ಈ ಮಧ್ಯೆ ರೈತರ ಪ್ರಹಾರಕ್ಕೆ ಒಳಗಾದ ಸುಮಾರು ನಾಲ್ಕು ಪೊಲೀಸರು ಪಲಾಯಾನ ಮಾಡಿದ್ದರಲ್ಲದೇ ಕುರ್ಲಗೇರಿ, ಬನಹಟ್ಟಿ ಗ್ರಾಮದ ಕೆರೆಯ ಬದುವುಗಳಲ್ಲಿ ಸಾವನ್ನಪ್ಪಿದ್ದು ಒಂದು ವಿಷಾಧದ ನೋವಿನ ಸಂಗತಿಯೂ ಅಲ್ಲಿ ನಡೆದುಹೋಯಿತು. ಅಂದು ನವಲಗುಂದದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿಯೂ ನವಲಗುಂದ ತಾಲೂಕಿನ ಅಳಗವಾಡಿಯ ಬಸಪ್ಪ ಲಕ್ಕುಂಡಿ ಸಾವನ್ನಪ್ಪಿದರು.
ಇದೇ ನರಗುಂದ- ನವಲಗುಂದ ಬಂಡಾಯವಾಗಿ ಇಂದಿಗೂ ಚಿರಸ್ಥಾಯಿಯಾಗಿ ನೆನಪಿನಲ್ಲಿ ಉಳಿದಿದೆ. ಇದು ನಾಡಿನಲ್ಲಿ ಐತಿಹಾಸಿಕವಾದ ಬಂಡಾಯವೂ ಆಗಿತ್ತು ಇದರ ಸ್ಮರಣಾರ್ಥವಾಗಿ ಪ್ರತಿ ವರ್ಷ ಜು. 21 ರಂದು ರೈತ ಹುತಾತ್ಮ ದಿನಾಚರಣೆ ಆಚರಿಸಲ್ಪಡುತ್ತಿದೆ. ಅಂದು ಕಾಲುವೆ ಮುಖಾಂತರ ಸಕಾಲಕ್ಕೆ ನೀರು ದೊರೆಯದಿದ್ದರೂ ಸರ್ಕಾರ ಕಡ್ಡಾಯವಾಗಿ ಬೆಟರ್‍ಮೆಂಟ್ ಲೇವ್ಹಿ ( ನೀರಿನ ಕರ) ಪಾವತಿಸಲೇ ಬೇಕೆಂಬ ಕಾನೂನು ಜಾರಿ ತಂದಿದ್ದನ್ನು ಕೈಬಿಡಲು ರೈತರು ಹೋರಾಟ ನಡೆಸಿದ್ದರು. ಅದು ಒಂದು ಬಂಡಾಯವಾಯಿತು. ಈಗಲೂ ನೀರು ಕೊಡಿ ಎಂದು ಮಹದಾಯಿ ಮಲಪ್ರಭೆ ಜೋಡಣೆಗೆ ಆಗ್ರಹಿಸಿ ನಡೆಸಿದ ರೈತರ ಧರಣೆಗೆ ಎರಡು ವರ್ಷ ಪೂರ್ಣಗೊಂಡಿದೆ. ಇದು ಎರಡನೇಯ ಬಂಡಾಯವೆಂದೇ ಇದನ್ನು ಈ ಭಾಗದಲ್ಲಿ ಕರೆಯಲಾಗುತ್ತಿದೆ. ಅಂದಿನ ಬಂಡಾಯ ಹಾಗೂ ಇಂದಿನ ಬಂಡಾಯ ಎರಡೂ ನೀರಿಗಾಗಿಯೇ ನಡೆದಿವೆ. ಮಹದಾಯಿ ನೀರಿಗಾಗಿ ನಡೆದ ಈಗಿನ ರೈತರ ಧರಣಿಯಲ್ಲಿ ಪಾಲ್ಗೊಂಡಿದ್ದ ನರಗುಂದ ತಾಲೂಕಿನ ಯಾವಗಲ್ ಗ್ರಾಮದ ಧರ್ಮಣ್ಣ ತಹಸೀಲ್ದಾರ ಹಾಗೂ ಶಿವಯ್ಯ ಪೂಜಾರ ಹಾಗೂ ನವಲಗುಂದ ತಾಲೂಕಿನ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಸರ್ಕಾರಗಳು ಎರಡನೇಯ ಈ ರೈತ ಬಂಡಾಯವನ್ನು ಸಲಿಸಾಗಿ ಕಾಣದೇ ರೈತರ ಬೇಡಿಕೆಯನ್ನು ಪುರಸ್ಕರಿಸಬೇಕಾದ ಅಗತ್ಯತೆ ಇದೆ ಎನ್ನುವುದು ನಾಡಿನ ಸಮಸ್ತ ರೈತರ ಕೂಗು ಕೇಳಿ ಬರುತ್ತಲಿದೆ.

loading...