ಪತ್ರಕರ್ತರು ಸಾಮಾಜಿಕ ಧೀಕ್ಷೆ ಪಡೆಯಬೇಕು ; ಕಾಮತ

0
49
loading...

 

ಶಿರಸಿ: ಪತ್ರಕರ್ತ ಮೌಲ್ಯದ ಮಾರ್ಗದಿಂದ ಪಲ್ಲಟವಾದರೆ ಸಮಾಜ ಅಪಮೌಲ್ಯದತ್ತ ಸಾಗುತ್ತದೆ. ಹೀಗಾಗಿ ಪತ್ರಕರ್ತರು ಸಾಮಾಜಿಕ ಧೀಕ್ಷೆ ಪಡೆಯಬೇಕಾದ ಅನಿವಾರ್ಯತೆಯಿದೆ ಎಂದು ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿ ಮಹಾ ಪ್ರಬಂಧಕ ವಿಠ್ಠಲದಾಸ ಕಾಮತ ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ ಕೆ. ಶ್ಯಾಮರಾವ್ ಪ್ರಶಸ್ತಿಯನ್ನು ಪತ್ರಿಕಾ ದಿನಾಚರಣೆಯಂದು ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಅವರಿಗೆ ವಿತರಿಸಿ ಅವರು ವಿಶೇಷ ಉಪನ್ಯಾಸ ನೀಡಿದರು. ಯುವ ಪತ್ರಕರ್ತರು ಇಂದು ದೋಷಗ್ರಾಹಿ ಆಗುತ್ತಿದ್ದಾರೆ ವಿನಃ ಗುಣಗ್ರಾಹಿತನದಿಂದ ದೂರವಾಗುತ್ತಿದ್ದಾರೆ. ಜಾತಿ, ಧರ್ಮ, ರಾಜಕಾರಣದ ವ್ಯಾಪ್ತಿಯಲ್ಲಿ ಪತ್ರಿಕಾ ಧರ್ಮ ಮರೆಯಾಗುತ್ತಿದೆ. ಮೌಲ್ಯಗಳ ಬದಲು ಹಣಕೇಂದ್ರಿತ ಪತ್ರಿಕೋದ್ಯಮ ಬೆಳೆಯುತ್ತಿದೆ. ಪತ್ರಕರ್ತ ಇಡೀ ಸಮಾಜಕ್ಕೆ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಪತ್ರಕರ್ತ ಪ್ರತ್ಯೇಕತೆ ಬಯಸದೆ ಸಾರ್ವಜನಿಕರ ಮಧ್ಯದಲ್ಲಿದ್ದು, ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಸಮಾಜವನ್ನು ಎತ್ತಿ ಹಿಡಿಯುವ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಇಂದು ಅಸ್ಥಿರತೆಯಲ್ಲಿವೆ. ನಾಲ್ಕನೇ ಅಂಗವಾದ ಪತ್ರಿಕಾರಂಗವೂ ತಳಮಟ್ಟಕ್ಕೆ ತಲುಪಿದರೆ ಜನರಿಗೆ ನ್ಯಾಯ ದೊರಕುವುದಿಲ್ಲ. ಇಂದು ಎಲ್ಲಿಯೂ ಸಲ್ಲದವರು ಪತ್ರಿಕೋದ್ಯಮಕ್ಕೆ ಸಲ್ಲುವರು ಎಂಬ ಭಾವನೆಯಿದೆ. ಹೊಟ್ಟೆಪಾಡಿಗಾಗಿ ಪತ್ರಿಕೋದ್ಯಮಕ್ಕೆ ಯಾರೂ ಬರಬೇಕಾದ ಅಗತ್ಯತೆಯಿಲ್ಲ ಎಂದ ಅವರು, ತನ್ನ ಬರಹ, ಸಾಧನೆ ಮೂಲಕ ಸಮಾಜದಲ್ಲಿ ಪತ್ರಕರ್ತ ಸ್ಥಿರವಾಗಿರಬೇಕು ಹಾಗೂ ಗೌರವಕ್ಕೆ ಭಾಜನರಾಗಬೇಕು ಎಂದರು.
ಪತ್ರಕರ್ತ ಋಣಾತ್ಮಕ ಅಂಶಗಳನ್ನು ಹೆಚ್ಚಾಗಿ ಬಯಸದೇ ಧನಾತ್ಮಕ ಅಂಶಗಳನ್ನು ಜನರಿಗೆ ತಲುಪಿಸಬೇಕು. ಪತ್ರಿಕೆಯ ಪುಟದಲ್ಲಿ ಜಿವಂತಿಕೆಯನ್ನು ತುಂಬಬೇಕು. ಜೊತೆಗೆ ಸಮಾಜದ ನೋವನ್ನು ಪ್ರತಿಬಿಂಬಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ಮೌಲ್ಯ ಪ್ರತಿಪಾದನೆ ಮತ್ತು ಮೌಲ್ಯ ಸ್ಥಾಪನೆಯತ್ತ ಪರ್ತಕರ್ತರು ಮುಂದಾಗಬೇಕು. ಭವಿಷ್ಯದ ಪತ್ರಕರ್ತರಾಗುವ ವಿದ್ಯಾರ್ಥಿಗಳಿಗೆ ಸಾಮಾಜಿಕ ಧೀಕ್ಷೆ ಕೊಡುವ ಕೆಲಸ ಪತ್ರಿಕೋಧ್ಯಮ ಕಾಲೇಜುಗಳಿಂದ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ, ರಾಜಕೀಯ, ಧರ್ಮ ಬಿಟ್ಟು ಜೀವನವಿಲ್ಲ. ಆದರೆ ಪತ್ರಕರ್ತ ಇವೆರಡನ್ನು ಹೊರತುಪಡಿಸಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಪತ್ರಿಕೆ ಓದುವುದರಿಂದಲೇ ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಆದ್ದರಿಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಧಾವಂತಕ್ಕೊಳಗಾಗದೆ ಸತ್ಯಕ್ಕೆ ಸಮೀಪವಾದ, ವಸ್ತುನಿಷ್ಟವಾದ ಮಾಹಿತಿಯನ್ನು ಸಾಮಾನ್ಯ ಓದುಗನಿಗೂ ಸುಲಭವಾಗಿ ಅರ್ಥವಾಗುವಂತೆ ಮಾಹಿತಿಯನ್ನು ಕೊಡಬೇಕು. ಪತ್ರಿಕೆಯಲ್ಲಿನ ಪ್ರತಿ ವಿಷಯದಲ್ಲಿಯೂ ಅಧಿಕೃತತೆ ಇರುವುದರಿಂದ ಅಲ್ಲಿನ ವಿಷಯಗಳು ಸಮಕಾಲಿನ ಇತಿಹಾಸ ಅಧ್ಯಯನ ಮಾಡುವವರಿಗೆ ದಾಖಲಿಕರಣವಾಗಿರುತ್ತವೆ. ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಆದ್ದರಿಂದ ಪ್ರತಿ ಶಬ್ದವನ್ನು ಬರೆಯುವಾಗಲೂ ಅತ್ಯಂತ ಜಾಗರೂಕರಾಗಿ ಬರೆಯಬೇಕು ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಸುಭ್ರಾಯ ಭಟ್ಟ ಬಕ್ಕಳ, ಮಾಜಿ ಅಧ್ಯಕ್ಷರಾದ ಮಂಜುನಾಥ ಭಟ್ಟ, ಕೃಷ್ಣಮುರ್ತಿ ಹೆಬ್ಬಾರ, ಆಶಿವಾನಂದ ಕಳವೆ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಖಜಾಂಚಿ ಸಂಧ್ಯಾ ಹೆಗಡೆ ಆಲ್ಮನೆ ಪರಿಚಯಿಸಿದರು. ಸಂಘದ ಪದಾಧಿಕಾರಿ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ನರಸಿಂಹ ಅಡಿ ವಂದಿಸಿದರು.

ಪತ್ರಿಕೋದ್ಯಮ ಶಿಕ್ಷಣ ಅಧ್ಯಯನ ಮಾಡುವ ವಿಧ್ಯಾರ್ಥಿಗಳಿಗೆ ಪಠ್ಯ ಪುಸ್ತಕದಲ್ಲಿನ ವಿಷಯಗಳನ್ನು ಬೋಧಿಸಿದರೆ ಮಾತ್ರ ಹೆಚ್ಚಿನ ಜ್ಞಾನವನ್ನು ಗಳಿಸಲು ಸಾಧ್ಯವಿಲ್ಲ. ಜೊತೆಗೆ ನುರಿತ ಹಿರಿಯ ಪತ್ರಕರ್ತರನ್ನು ಶಾಲಾ ಕಾಲೇಜುಗಳಿಗೆ ಆಹ್ವಾನಿಸಿ ಅವರ ವೃತ್ತಿ ಅನುಭವವದ ಪಾಠವನ್ನು ಕಲಿಸಬೇಕು.
-ಶಿವಾನಂದ ಕಳವೆ- ಪರಿಸರ ಬರಹಗಬರಹಗಾರ.

 

loading...