ಬೆಳೆವಿಮೆ ರೈತರ ಖಾತೆಗೆ ಜಮಾಗೊಳಿಸಲು ಆಗ್ರಹ

0
69
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಮಂಜೂರಾಗಿರುವ ಬೆಳೆವಿಮೆಯನ್ನು ಶೀಘ್ರವಾಗಿ ಆಯಾ ರೈತರ ಖಾತೆಗಳಿಗೆ ಜಮಾಗೊಳ್ಳುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಪಕ್ಕದ ಜಿಲ್ಲೆಗಳಲ್ಲಿ ಈಗಾಗಲೇ ಬೆಳೆವಿಮಾ ಮೊತ್ತ ಅಲ್ಲಿನ ರೈತರ ಖಾತೆಗಳಿಗೆ ಮಂಜೂರಾಗಿದೆ ಎಂದು ತಿಳಿದುಬಂದಿದೆ. ಅದೇ ರೀತಿ ನಮ್ಮ ಜಿಲ್ಲೆಯ ರೈತರ ಖಾತೆಗಳಿಗೂ ಸಹ ಶೀಘ್ರ ವಿಮಾಮೊತ್ತ ಜಮಾಗೊಳ್ಳುವಂತಾಗಬೇಕು ಎಂದು ಒತ್ತಾಯಿಸಿದರು.
ಬೆಳೆವಿಮೆ ಮೊತ್ತವು ನೇರವಾಗಿ ಆಯಾ ರೈತರ ಖಾತೆಗಳಿಗೆ ಜಮಾಗೊಳ್ಳುತ್ತದೆ. ಆದರೆ ಈ ವಿಷಯದ ಬಗ್ಗೆ ಮಾಜಿ ಶಾಸಕ ಸುನೀಲ ಹೆಗಡೆ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದು ಬೆಳೆವಿಮೆಯು ಕೆಡಿಸಿಸಿ ಬ್ಯಾಂಕ್‍ಗೆ ಜಮಾಗೊಂಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದಾನುವೇಳೆ ಬೆಳೆವಿಮೆ ಹಣವು ಕೆಡಿಸಿಸಿ ಬ್ಯಾಂಕ್‍ಗೆ ಜಮಾಗೊಂಡರೆ ನನ್ನ ಎಂಎಲ್‍ಸಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಘೋಷಿಸಿದರು.
ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತವು ಸಕ್ಕರೆ ಕಾರ್ಖಾನೆಯಿಂದ ದೊರೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳಿಂದ ಇಳುವರಿ ಹಾಗೂ ಉಪಉತ್ಪನ್ನಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಹೀಗಾಗಿ ಬಾಕಿ ಮೊತ್ತದ ಬಗ್ಗೆ ಇನ್ನೂ ಇತ್ಯರ್ಥಗೊಳ್ಳದೇ ಇರುವುದರಿಂದ ಈ ಮೊತ್ತವು ರೈತರಿಗೆ ನೀಡಲಾಗಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಬಾಕಿ ಮೊತ್ತ ಪಡೆಯಲು ಸಕ್ಕರೆ ಕಾರ್ಖಾನೆಗೆ ಸ್ವಲ್ಪ ದಿವಸ ಕಾಲಾವಕಾಶ ನೀಡುವುದು ಒಳಿತು. ಒಂದಾನುವೇಳೆ ನಿಜವಾಗಿಯೂ ರೈತರಿಗೆ ಅನ್ಯಾಯವಾದರೆ ನಾನು ಸಹ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

loading...