ಮಹದಾಯಿ ಅನುಷ್ಟಾನಗೊಳಿಸುವಲ್ಲಿ ಸರ್ಕಾರ ವಿಫಲ

0
30
loading...

ಕನ್ನಡಮ್ಮ ಸುದ್ದಿ-ನರಗುಂದ: ಮಹದಾಯಿ ನದಿ ನೀರನ್ನು ಮಲಪ್ರಭೆ ಸೇರಿಸುವ ಜವಾಬ್ದಾರಿಯನ್ನು ಸರ್ಕಾರಗಳು ಯಾವಾಗಲೋ ಹೊತ್ತುಕೊಂಡು ಅನುಷ್ಟಾನಕ್ಕೆ ತರಬೇಕಾಗಿತ್ತು. ಆದರೆ ಇಷ್ಟು ದಿನಗಳವರೆಗೆ ಮಹದಾಯಿ ಅನುಷ್ಟಾನಕ್ಕಾಗಿ ಸರ್ಕಾರಗಳು ವಿಫಲಗೊಂಡ ಹಿನ್ನಲೆಯಲ್ಲಿ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶಸ್ವಾಮಿ ಸೊಬರದಮಠ ಅವರು ಜು. 16 ರಿಂದ ಇದೇ ವೇದಿಕೆಯಲ್ಲಿ ಆಮರಣ ಉಪವಾಸ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಕೆ.ಎಸ್. ಪುಟ್ಟಣಯ್ಯ ತಿಳಿಸಿದರು.
ಮಹದಾಯಿ ಮಲಪ್ರಭೆಗೆ ಸೇರಿಸಲು ಆಗ್ರಹಿಸಿ ನರಗುಂದ ಪಟ್ಟಣದಲ್ಲಿ ರೈತರಿಂದ ನಡೆದ 732 ನೇ ದಿನ ರವಿವಾರ ಎರಡು ವರ್ಷ ಧರಣಿ ಪೂಣೆಗೊಳಿಸಿದ ಹಿನ್ನಲೆಯಲ್ಲಿ ರೈತರ ಧರಣಿಯಲ್ಲಿ ಮಾತನಾಡಿದ ಅವರು, ರಾಜ್ಯ ರೈತ ಸಂಘದಿಂದ ತಾಲೂಕಿನ ಎಲ್ಲ ಪದಾಧಿಕಾರಿಗಳನ್ನು ಜು. 17 ರಂದು ಬೆಂಗಳೂರಿನಲ್ಲಿ ಸಭೆ ಕರೆದು ತೀರ್ಮಾಣಿಸಿ ಈ ಉಪವಾಸ ಸತ್ಯಾಗ್ರಹಕ್ಕೆ ಪೂರ್ಣ ಬೆಂಬಲ ನೀಡಿ, ರೈತರನ್ನು ಈ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಲಾಗುವುದೆಂದು ತಿಳಿಸಿದರು. ರೈತರು ಸಿಡಿದೆದ್ದರೆ ಸರ್ಕಾರಗಳು ಉಳಿಯುವುದಿಲ್ಲವೆಂಬುದಕ್ಕೆ ದಕ್ಷಿಣ ಆಪ್ರೀಕಾದಲ್ಲಿ ಕರಿಯರ ಮತ್ತು ಬಿಳಿಯರ ನಡುವೆ ನಡೆದ ಬಹುದೊಡ್ಡ ಹೋರಾಟದಿಂದ ಅಲ್ಲಿಯ ಸರ್ಕಾರ ಪಾಠ ಕಲಿತುಕೊಂಡಿತು. ಕರ್ನಾಟಕಕ್ಕೆ ಮಹದಾಯಿಯಿಂದ ಬರುವ 47 ಟಿಎಂಸಿ ನೀರನ್ನು ನೀಡಲು ಇಂದಿಗೂ ಇಲ್ಲಿಯ ಸರ್ಕಾರಗಳು ಸಿದ್ದವಿಲ್ಲ. ಚೀನಾದಲ್ಲಿ 10 ಲಕ್ಷ ವಿಸ್ತಾರವಾದ ಜಾಗೆಯಲ್ಲಿ ಆಣೆಕಟ್ಟು ಕೇವಲ 15 ತಿಂಗಳಲ್ಲಿ ನಿರ್ಮಿಸಿ ಅಲ್ಲಿಯ ರೈತರಿಗೆ ಅಲ್ಲಿಯ ಸರ್ಕಾರ ನೆರವು ನೀಡುತ್ತಿದ್ದರೆ ಇಲ್ಲಿಯ ಸರ್ಕಾರಗಳು ನೀರಿಗಾಗಿ ಭವಣೆ ಪಡುತ್ತಿರುವ ಉತ್ತರ ಕರ್ನಾಟಕದ ಜನತೆ ಬಗ್ಗೆ ನಿರ್ಲಕ್ಷಮಾಡುತ್ತಿವೆ. ಕೇಂದ್ರ ಜಲ ಆಯೋಗ ಮಹದಾಯಿ ತಿರುವ ಯೋಜನೆಗಳಲ್ಲಿ ಕಳಸಾ ಬಂಡೂರಿ ಕಿರುಹಳ್ಳಗಳನ್ನು ಸೇರಿಸಿ ಅದರಲ್ಲಿ 7,5 ಟಿಎಂಸಿ ನೀರು ಕರ್ನಾಟಕಕ್ಕೆ ಒದಗಿಸಬೇಕೆನ್ನುವ ಮಹತ್ವದ ನಿರ್ಣಯ ತೆಗೆದುಕೊಂಡು ಕಾನೂನಿನಡಿಯಲ್ಲಿ ಅವಕಾಶ ಕಲ್ಪಸಿದ್ದರೂ ಕೂಡಾ ಇದನ್ನು ಸರ್ಕಾರಗಳು ಅನುಷ್ಟಾನಕ್ಕೆ ತರದೇ ನಿರ್ಲಕ್ಷಮಾಡಿವೆ ಎಂದು ಟೀಕೆ ಮಾಡಿದರು.
ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶಸ್ವಾಮಿ ಸೊಬರದಮಠ ಅವರು ಮಾತನಾಡಿ, ಈ ದೇಶದಲ್ಲಿಯ ರೈತರಿಗೆ ಸರ್ಕಾರ ಯಾವುದೇ ಚಿಕ್ಕಾಸಿನ ಕಿಮತ್ತು ನೀಡಿಲ್ಲ. ಮಹದಾಯಿಗಾಗಿ ಇಷ್ಟು ದಿನಗಳ ಕಾಲ ಹೋರಾಟ ನಡೆಸಿದ್ದರೂ ಯಾವುದೇ ಸರಿಯಾದ ಉತ್ತರ ಸರ್ಕಾರಗಳು ನೀಡಿಲ್ಲ. ಈ ಕಾರಣಕ್ಕಾಗಿ ಸರ್ಕಾರದ ಕಣ್ಣು ತೆರೆಸಲು ಜು. 16 ರಿಂದ ಆಮರಣ ಉಪವಾಸ ಆರಂಭಗೊಳಿಸುವುದಾಗಿ ನಿರ್ಧರಿಸಿದ್ದೇನೆ. ನಾನು ಮಹದಾಯಿ ನದಿ ನೀರು ಮಲಪ್ರಭೆಗೆ ಸೇರಿಸಲು ಸರ್ಕಾರ ಸ್ಪಷ್ಟವಾದ ಅಭಿಪ್ರಾಯ ನೀಡಿ ಅದನ್ನು ಅನುಷ್ಟಾನವಾಗುವವರೆಗೆ ಮುಂದುವರೆಸುತ್ತೇನೆ. ಮಹದಾಯಿ ನದಿ ನೀರು ಕೂಡದೇ ಹೋದಲ್ಲಿ ನಾನು ಮರಣಹೊಂದುವವರೆಗೂ ಆಮರಣ ಉಪವಾಸದಿಂದ ಹಿಂದೆ ಸರಿಯುವುದಿಲ್ಲ. ಸಭೆಯಲ್ಲಿ ಎಲ್ಲ ರೈತರ ಅಭಿಪ್ರಾಯ ಪಡೆದೇ ಈ ನಿರ್ಣಯ ತೆಗೆದುಕೊಂಡಿರುವುದಾಗಿ ತಿಳಿಸಿದರು. ಕೇಂದ್ರದಲ್ಲಿಯ ಸಂಬಂಧಿüಸಿದ ಸಚಿವರನ್ನು ಹಾಗೂ ಪ್ರಧಾನಿಗಳನ್ನು ಮಹದಾಯಿ ನದಿ ಜೋಡಣೆ ಅನುಷ್ಟಾನಗೊಳಿಸಬೇಕೆಂದು ಶಾಸಕ ಯಾವಗಲ್ ಹಾಗೂ ಮಾಜಿ ಸಚಿವ ಪಾಟೀಲ ಅವರು ಈ ಭಾಗದ ಸಂಸದರಲ್ಲಿ ಒತ್ತಾಯಿಸಬೇಕು ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಮಾತನಾಡಿ, ರೈತರು ನೀರಿನ ಭವಣೆಯಿಂದ ಬಳಲುತ್ತಿದ್ದರೂ ಕೂಡಾ ಮಹದಾಯಿ ನೀರನ್ನು ಮಲಪ್ರಭೆಗೆ ಕೂಡಿಸಲು ಸರ್ಕಾರಗಳು ನಿರ್ಲಕ್ಷಮಾಡಿದೆ. ಪ್ರಧಾನಿ ಮೋದಿ ದೇಶ ಸುತ್ತುವುದನ್ನು ರೂಡಿಸಿಕೊಂಡಿದ್ದಾರೆಯೇ ಹೊರತು ಇಲ್ಲಿಯ ರೈತರ ಬಗ್ಗೆ ಕಾಳಜೀ ಇಲ್ಲ. ಅವರು ನಿರ್ಲಜ್ಯರಾಗಿ ಕಾರ್ಯನಿರ್ವಹಿಸುತ್ತಿರುವುದು ಈ ನಾಡಿನ ರೈತರಿಗೆ ಖೇಧ ತರುವ ವಿಷಯವೆಂದು ಸರ್ಕಾರದ ನೀತಿ ಟೀಕೆಮಾಡಿದರು.
ಬಾಗಲಕೋಟಿ ಜಿಪಂ ಉಪಾಧ್ಯಕ್ಷ ಮುತ್ತಪ್ಪ ತೋಮಲ, ರೈತ ಸೇನಾ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಶಂಕರಪ್ಪ ಅಂಬಲಿ. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ. ಶಾಂತಸ್ವಾಮಿಮಠ ಮಾತನಾಡಿದರು.
ದರಣಿಯಲ್ಲಿ ಬಿ.ಡಿ. ಸಾಬಳೆ, ಚನ್ನು ನಂದಿ, ರಾಘವೇಂದ್ರ ಗುಜಮಾಗಡಿ, ಮಹದಾಯಿ ಮಲಪ್ರಭೆ ನದಿ ಜೋಡಣೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ರಮೇಶ ನಾಯ್ಕರ್, ಮುತ್ತಪ್ಪ ತೀರ್ಲಾಪೂರ, ವಿಠಲ ಜಾಧವ, ಮಹದೇವಗೌಡ ಪಾಟೀಲ, ಅಂದಾನಿಗೌಡ ಪಾಟೀಲ, ಎಂ.ಎಸ್. ಪಾಟೀಲ, ಶಂಕರಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಶ್ರೀಶೈಲ ಮೇಟಿ, ಮದಸೂದನ ತಿವಾರಿ ಹಾಗೂ ಮಹಿಳಾ ರೈತರು ಮತ್ತು ಬಾಗಲಕೋಟಿ, ಹಾವೇರಿ ಹಾಗೂ ಮುಂಡರಗಿ. ರೋಣ ಶಿರಹಟ್ಟಿ, ನವಲಗುಂದ, ಸವದತ್ತಿ, ರಾಮದುರ್ಗ, ಬದಾಮಿ ತಾಲೂಕುಗಳಿಂದ ಬಂದ ರೈತರು ಪಾಲ್ಗೊಂಡಿದ್ದರು. ಸುಮಾರು 3 ಸಾವಿರ ರೈತರು ಧರಣಿಯಲ್ಲಿ ಭಾಗವಹಿಸಿದ್ದರು.

 

loading...