ರಸ್ತೆಗಳಲ್ಲಿ ಬಿಡಾಡಿ ದನಗಳದ್ದೇ ದರ್ಬಾರ್

0
33
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪಟ್ಟಣದಲ್ಲಿ ಕೆಲ ಅವಧಿಯ ಹಿಂದೆ ನಿವಾರಣೆಯಾಗಿದ್ದ ಬಿಡಾಡಿ ದನಗಳ ಸಮಸ್ಯೆ ಮತ್ತೆ ಉದ್ಭವವಾಗಿದೆ.
ಡಜನ್‍ಗಟ್ಟಲೆ ಸಂಖ್ಯೆಯಲ್ಲಿರುವ ಬಿಡಾಡಿ ದನಗಳು ಆಯಕಟ್ಟಿನ ಹೆದ್ದಾರಿಯ ಮೇಲೆ ಅಲ್ಲಲ್ಲಿ ಕುಳಿತು ಹಾಗೂ ಆರಾಮವಾಗಿ ಸಂಚರಿಸುತ್ತಾ ಇದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡುತ್ತಿವೆ. ಮಾತ್ರವಲ್ಲದೇ ಪ್ರತಿ ರವಿವಾರಕ್ಕೊಮ್ಮೆ ನಡೆಯುವ ತರಕಾರಿ ಸಂತೆಯಲ್ಲಿ ನುಗ್ಗಿ ಸಂತೆಗೆ ಬರುವ ಮಹಿಳೆಯರು ಹಾಗೂ ಉಳಿದವರಿಗೆ ತೊಂದರೆ ತಾಪತ್ರಯ ನೀಡುತ್ತಿವೆ.
ಕೆಲ ತಿಂಗಳ ಹಿಂದೆ ಈ ಬಿಡಾಡಿ ದನಗಳನ್ನು ಹಿಡಿದು ಅವುಗಳ ಮಾಲೀಕರಿಗೆ ದಂಡ ಹಾಕುವ ಶಿಸ್ತಿನ ಕ್ರಮ ಕೈಗೊಂಡ ಪುರಸಭೆಗೆ ಒಟ್ಟು 10 ಸಾವಿರ ರೂ. ದಂಡ ಸಂಗ್ರಹವಾಗಿತ್ತು. ಆದರೆ ಬಿಡಾಡಿ ದನಗಳ ಮಾಲೀಕರು ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಈ ಬಾರಿ ಕೊನೆಯ ಎಚ್ಚರಿಕೆ ನೀಡಿ ಬಿಡಾಡಿ ದನಗಳನ್ನು ದೂರದ ಗೋಶಾಲೆಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

loading...