ವರುಣನ ಕೃಪೆಗಾಗಿ ಗುರ್ಜಿಪೂಜೆ, ಕತ್ತೆ ಮೆರವಣಿಗೆ

0
42
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ರೈತರು ಮಳೆರಾಯನ ಕೃಪೆಗಾಗಿ ಗುರ್ಜಿ ಗುರ್ಜಿ ಎಲ್ಲಾಡಿಬಂದೆ ಹಳ್ಳ-ಕೊಳ್ಳ ತಿರಗ್ಯಾಡಿಬಂದೆ ಕಾರ ಮಳೆಯೋ ಕಪ್ಪತ ಮಳೆಯೋ ಸುರಿಯೋ ಸುರಿ0ಯೋ ಮಳೆರಾಯವೆಂದು ಗುರ್ಜಿ ಆಟದೊಂದಿಗೆ ಕತ್ತೆಯ ಮೆರವಣಿಗೆ ಆಚರಣೆ ನಡೆಯಿತು.
ಗ್ರಾಮೀಣ ಪ್ರದೇಶದಲ್ಲಿ ಶತ ಶತಮಾನದಿಂದಲೂ ಆಚರಣೆಯಲ್ಲಿರುವ ಗುರ್ಜಿ ಪೂಜೆ ಬಹಳಷ್ಟು ವಿಶಿಷ್ಟವಾದ ಸಂಪ್ರದಾಯವೆನ್ನಬಹುದು. ಗ್ರಾಮದ ರೈತ ಬಸವರಾಜ ರಾಹುತ ಈತನ ತಲೆ ಮೇಲೆ ತೆವಿ ಇಟ್ಟು ಅದರ ಮೇಲೆ ಆಕಳ ಸಗಣಿಯಿಂದ ತಯಾರಿಸಿದ ಗುರ್ಜಿ ಹೊರಿಸಲಾಗಿತ್ತು.
ಗುರ್ಜಿ ಹೊತ್ತವನ ಹಿಂದೆ ರೈತರೆಲ್ಲರೂ ಗುರ್ಜಿ ಹಾಡು ಹೇಳುತ್ತ ಕತ್ತೆಯ ಮೆರವಣಿಗೆಯೊಂದಿಗೆ ಮೂರು ದಿನಗಳವರೆಗೆ ಗ್ರಾಮದ ಎಲ್ಲಾ ಕಡೆಗೆ ಸಂಚರಿಸಿ ಗುರ್ಜಿ ಹೊತ್ತ ರೈತನ ತಲೆ ಮೇಲೆ ನೀರು ಸುರಿದು ಪ್ರತಿಯೊಬ್ಬರು ಗುರ್ಜಿ ಪೂಜೆ ಮಾಡುವುದರೊಂದಿಗೆ ಮನೆಯಿಂದ ಜೋಳ ರೊಟ್ಟಿಪಲ್ಲೆ ದವಸದಾನ್ಯಗಳು ಹಾಗೂ ಹಣವನ್ನು ನೀಡಿದರು.
ಹೀಗೆ ಸಂಗ್ರಹವಾದ ದವಸದಾನ್ಯ ಹಾಗೂ ಹಣದಿಂದ ಗ್ರಾಮದ ಆಲದಮ್ಮದೇವಿ ದೇವಸ್ಥಾನದ ಬಳಿ ಅನ್ನಸಂತರ್ಪಣೆ ಮಾಡುವುದರ ಮೂಲಕ ಮೇಘ ರಾಜನ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿದ್ದನಗೌಡ್ರ ಪಾಟೀಲ, ವೀರಪ್ಪ ಸೋಮಣ್ಣವರ, ಫಕ್ಕೀರೇಶ ಜಕ್ಕಲಿ, ವೀರಪ್ಪ ಪ್ಯಾಟಿ, ಹನಮಂತ ಕಲ್ಲೂರ, ಬಸವರಾಜ ರಾಹುತ, ಮಹಾದೇವಗೌಡ ಪಾಟೀಲ, ಮಹಾಂತೇಶಗೌಡ ಪಾಟೀಲ, ದಾನಪ್ಪ ಬಡ್ನಿ, ಹಾಲಪ್ಪ ಕಂಬಳಿ, ನಾಗರಾಜ ಕತ್ತೇಬೆನ್ನೂರ, ನಿಂಗಪ್ಪ ಜಕ್ಕಲಿ, ಕೃಷ್ಣಗೌಡ ಪಾಟೀಲ, ಶೃವಣಕುಮಾರ ಬಳ್ಳಾರಿ, ಗುಡದಪ್ಪ ಆಡೀನ, ಮಹಾಂತೇಶ ಹರಿಜನ ಸೇರಿದಂತೆ ರೈತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

loading...