ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಪರಿಶ್ರಮ ಅಗತ್ಯ: ಜೀವೋತ್ತಮ

0
23
loading...

ಕನ್ನಡಮ್ಮ ಸುದ್ದಿ-ಮುರ್ಡೆಶ್ವರ: ವಿದ್ಯಾರ್ಥಿಗಳು ಈ ಸುಂದರವಾದ, ಪವಿತ್ರ ಕ್ಷೇತ್ರ ವಾದ ಮುರ್ಡೇಶ್ವರದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಬಂದಿರುವಿರಿ, ಪರಿಶ್ರಮದಿಂದ ಓದಿ, ಜೀವನದಲ್ಲಿ ಯಶಸ್ಸನ್ನು ಗಳಿಸಿ, ಈ ಸಂಸ್ಥೆಗೆ ಮತ್ತು ತಮ್ಮ ಪಾಲಕರಿಗೆ ಹೆಸರು ತರುವಂತರಾಗಿ ಎಂದು ಉದ್ಯಮಿ, ಜೀವೋತ್ತಮ ನಾಯಕ ಹೇಳಿದರು.
ಆರ್. ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್‍ನಲ್ಲಿ ಡಿಪ್ಲೋಮಾ ಮೊದಲನೆ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಪ್ರಾರಂಭೋತ್ಸವವನ್ನು ವಿದ್ಯಾರ್ಥಿ ಮತ್ತು ಪಾಲಕರ ಸಮ್ಮುಖದಲ್ಲಿ ಇತ್ತೀಚಿಗೆ ಪಾಲಿಟೆಕ್ನಿಕ್ ಅಡಿಟೋರಿಯಮ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಸಂತೋಷ ಆರ್.ಎ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ಬೆಳೆದು ಬಂದ ಬಗ್ಗೆ, ಸಂಸ್ಥೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ, ಪಾಲಕರು ಮತ್ತು ವಿದ್ಯಾರ್ಥಿಗಳ ಕರ್ತವ್ಯದ ಬಗ್ಗೆ ವಿವರವಾಗಿ ತಿಳಿಸಿದರು.
ಪಾಲಿಟೆಕ್ನಿಕ್ ಉಪ ಪ್ರಾಚಾರ್ಯ ಕೆ. ಮರಿಸ್ವಾಮಿ ಮಾತನಾಡಿ, ಪಾಲಕರು ವಿದ್ಯಾರ್ಥಿಗಳು ಕೇಳಿದ್ದಷ್ಟು ಹಣ, ಬೇಡಿದ ಮೊಬೈಲು, ಬೈಕು ನೀಡಿದರೆ ವಿದ್ಯಾರ್ಥಿ ಜೀವನ ಬಂಗಾರ ಮಯವಾಗದೇ ತುಕ್ಕು ಹಿಡಿದ ಕಬ್ಬಿಣವಾಗಲು ಪಾಲಕರೆ ಕಾರಣವಾಗುತ್ತಾರೆ. ಪಾಲಕರು ತಮ್ಮ ವಿದ್ಯಾರ್ಥಿಗಳನ್ನು ನಮ್ಮ ಸಂಸ್ಥೆಗೆ ಸೇರಿಸಿಬಿಟ್ಟರೆ ತಮ್ಮ ಕರ್ತವ್ಯ ಮುಗಿಯುವುದಿಲ್ಲ. ದಯವಿಟ್ಟು ಪಾಲಕರು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಭಾಗ ಮುಖ್ಯಸ್ಥರನ್ನು, ಉಪನ್ಯಾಸಕರನ್ನು ಆಗಾಗ ಬಂದು ಬೇಟಿಯಾಗಿ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮ ಹುಡುಗ /ಹುಡುಗಿಯರ ಪ್ರಗತಿಯ ಬಗ್ಗೆ ಗಮನವಿಟ್ಟಾಗ, ವಿದ್ಯಾರ್ಥಿ ಹಾದಿ ತಪ್ಪದೇ ಯಶಸ್ವಿಯಾಗಿ ಗುರಿ ತಲುಪಲು ಸಾಧ್ಯ ಎಂದು ತಿಳಿಸಿದರು.
ಆರ್. ಎನ್.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ವಿ.ಹೆಗಡೆ ಮಾತನಾಡಿ, ಡಿಪ್ಲೋಮಾ ವಿದ್ಯಾರ್ಥಿಗಳು ಇಲ್ಲಿ 3 ವರ್ಷ ಕಷ್ಟ ಪಟ್ಟರೆ 30 ವರ್ಷಗಳ ಕಾಲ ಸುಖ ಜೀವನ ಅನುಭವಿಸುವಿರಿ, ಒಂದು ವೇಳೆ 3 ವರ್ಷ ಹಾಯಾಗಿದ್ದರೆ 30 ವರ್ಷ ಕಷ್ಟಪಡಬೇಕಾಗುತ್ತದೆ. ಶ್ರಮಪಟ್ಟು ವಿದ್ಯಾರ್ಥಿಗಳು ಓದಬೇಕೆಂದು ತಿಳಿಸಿದರು. ಎಲೆಕ್ಟ್ರೀಕಲ್ ವಿಭಾಗ ಮುಖ್ಯಸ್ಥರಾದ ಸಾಹಿದತ್ತ ಸ್ವಾಗತಿಸಿದರು, ಕೊನೆಯಲ್ಲಿ ದಿನೇಶ ಆಚಾರ್ಯ ವಂದಿಸಿದರು.

loading...