ಶಾಸಕಾಂಗದಲ್ಲಿ ಮಹಿಳಾ ಮೀಸಲಾತಿ ಅಗತ್ಯ

0
38
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಲ್ಲಿ ನೀಡಿರುವ ಮಹಿಳಾ ಮೀಸಲಾತಿಯಂತೆ ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳಲ್ಲಿಯೂ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ಕಲ್ಪಿಸುವ ಅಗತ್ಯವಿದೆ ಎಂದು ಧಾರವಾಡದ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಹ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಪ್ರತಿಪಾದಿಸಿದರು.
ಅವರು ನಗರದ ಕೆ. ಡಿ. ಓ. ಜೈನ್ ಎಜ್ಯುಕೇಷನ್ ಟ್ರಸ್ಟನ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ತನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಸಕಾಂಗದಲ್ಲಿ ಮಹಿಳಾ ಮೀಸಲಾತಿ ಕಲ್ಪಿಸುವುದು ಭಾರತದ ರಾಜಕೀಯ ಇತಿಹಾಸದಲ್ಲಿ ಲಿಂಗಸಮಾನತೆಯನ್ನು ಎತ್ತಿಹಿಡಿಯುವ ಒಂದು ಕ್ರಾಂತಿಕಾರಿ ಐತಿಹಾಸಿಕ ಉಪಕ್ರಮವಾಗಲಿದೆ. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಇದು ಅನುಷ್ಠಾನಗೊಂಡಲ್ಲಿ ಲೋಕಸಭೆಯ 545 ಸಂಸದರಲ್ಲಿ 179 ಮತ್ತು ರಾಜ್ಯಸಭೆಯ 250 ಸಂಸದರಲ್ಲಿ 82 ಸೇರಿ ಒಟ್ಟು 261 ಮಹಿಳಾ ಸಂಸದರನ್ನು ಕೇಂದ್ರÀ್ರ ಶಾಸಕಾಂಗದ ಉಭಯ ಸದನಗಳಲ್ಲಿ ಕಾಣಬಹುದಾಗಿದೆ. ಇದರಂತೆ ರಾಜ್ಯ ಶಾಸಕಾಂಗದ ವಿಧಾನಸಭೆಯ 224 ಶಾಸಕರಲ್ಲಿ 74 ಹಾಗೂ ವಿಧಾನ ಪರಿಷತ್ತಿನ 75 ಶಾಸಕರಲ್ಲಿ 24 ಸೇರಿ ಒಟ್ಟು 98 ಮಹಿಳಾ ಶಾಸಕರನ್ನು ಕಾಣಬಹುದಾಗಿದೆ ಎಂದವರು ವಿವರಿಸಿದರು.
ಭ್ರಷ್ಟಾಚಾರಮುಕ್ತ ಭಾರತ: ಇಂದಿನ ವಿದ್ಯಾರ್ಥಿಗಳೇ ಮುಂದೆ ದೇಶವನ್ನಾಳುವ ನಾಯಕರಾಗಲಿದ್ದು, ಮೌಲ್ಯಾಧಾರಿತ ರಾಜಕಾರಣದ ಪ್ರಬಲ ಪ್ರತಿಪಾದಕರಾಗುವ ಮೂಲಕ ಭ್ರಷ್ಟಾಚಾರಮುಕ್ತ ಭಾರತದ ನಿರ್ಮಾಣಕ್ಕೆ ಸಮಸ್ತ ವಿದ್ಯಾರ್ಥಿ ಸಮೂಹ ಪಣತೊಡಬೇಕೆಂದೂ ಯರಗಂಬಳಿಮಠ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಗರದ ಬೆಂಡಿಗೇರಿ ಪೋಲೀಸ್ ಠಾಣೆಯ ಮಹಿಳಾ ಸಬ್ ಇನ್ಸಪೆಕ್ಟರ್ ಸಾವಿತ್ರಿ ಕಿತ್ತೂರ ಮಾತನಾಡಿ, ಶಾಲಾ ಸಂಸತ್ತಿನ ಎಲ್ಲ ಚುನಾಯಿತ ಪ್ರತಿನಿಧಿಗಳು ವರ್ಷದುದ್ದಕ್ಕೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಅಗತ್ಯ ಚಿಂತನೆ ನಡೆಸಬೇಕು ಎಂದರು.
ಶಾಲೆಯ ಪ್ರಿನ್ಸಿಪಾಲ್ ಬಿ.ಉಮಾರಾಣಿ ಅಧ್ಯಕ್ಷತೆವಹಿಸಿದ್ದರು. ಕೆ.ಡಿ.ಓ. ಜೈನ್ ಎಜ್ಯುಕೇಷನ್ ಟ್ರಸ್ಟ ಕಾರ್ಯದರ್ಶಿ ಉದ್ಯಮಿ ಚಂದ್ರಕಾಂತ ಪಟೇಲ್, ಟ್ರಸ್ಟ ಸದಸ್ಯ ಉದ್ಯಮಿ ವೀರೇಂದ್ರ ಛಡ್ಡಾ, ಗೋವರ್ಧನ ತಡಕೋಡ, ಅಶೋಕ ಪಾಟೀಲ, ವಿವೇಕ ಶೈಲ್, ಶಾಲಾ ಸಂಸತ್ ಅಧ್ಯಕ್ಷ ಮೋಹಿತ್ ಶರ್ಮಾ, ಪ್ರಧಾನ ಮಂತ್ರಿ ಬ್ರೆಚೆಲ್ ಥಾಟಿಗೇರಿ ಇದ್ದರು. ಮಧು ಶಾಲದಾರ ಸ್ವಾಗತಿಸಿದರು. ಧರೋತಿ ಬಿಲ್ಲಾ ನಿರೂಪಿಸಿದರು. ಯು.ಬಿ. ಅಮಲಾ ವಂದಿಸಿದರು.

loading...