ಶುದ್ಧ ಕುಡಿಯುವ ನೀರು ಪೂರೈಸುವಂತೆ ಮನವಿ

0
30
loading...

ರಾಮದುರ್ಗ: ನದಿಪಾತ್ರದ ಕಲುಷಿತ ನೀರು ಕುಡಿದು ಮಕ್ಕಳು ಹಾಗೂ ಜನತೆ ಅನೇಕ ರೋಗಳಿಗೆ ತುತ್ತಾಗುತ್ತಿದ್ದು, ಒಂದು ವರ್ಷದಿಂದ ಶುದ್ಧ ನೀರು ಪೂರೈಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಸ್ಪಂದಿಸಿದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಮಂಗಳವಾರ ಸಂಜೆ ತಾಲೂಕಿನ ಹಿರೇತಡಿಸಿ ಗ್ರಾಮಸ್ಥರು ಗ್ರಾಮದ ರಸ್ತೆಯ ಮೇಲೆ ಖಾಲಿ ಕೊಡಗಳನಿಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಈಗಾಗಲೇ ತಾಲೂಕಿನ ಬೆನ್ನೂರ ಗ್ರಾಮದ ಹತ್ತಿರದ ಮಲಪ್ರಭಾ ನದಿಯಲ್ಲಿ ಕೊರೆಯಲಾದ ಭಾವಿಯಿಂದ ನೀರು ಪೂರೈಸಲಾಗುತ್ತಿದೆ. ಆದರೆ ನದಿಯಲ್ಲಿ ನೀರು ಕಲುಷಿತಗೊಂಡಿದ್ದು, ಆ ನೀರು ಕುಡಿದ ಗ್ರಾಮಸ್ಥರು ಹೊಟ್ಟೆನೋವು, ಬಾಂತಿ-ಭೇದಿ, ಕಾಲರಾ, ಸಂದಿನೋವುಗಳಿಂದ ಬಳಲುವಂತಾಗಿದೆ. ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಕೊನೆ ಗ್ರಾಮದ ನಿರ್ಲಕ್ಷ್ಯ:
ಹೊಸಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿರೇತಡಸಿ ಗ್ರಾಮವು ತಾಲೂಕಿನ ಕೊನೆಯ ಗ್ರಾಮವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗ್ರಾಮದ ಅಭಿವೃದ್ಧಿಯ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ದೂರವಾಣಿ ಮೂಲಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಶೀಘ್ರ ಬೋರ್‍ವೆಲ್ ನೀರು ಪೂರೈಕೆ ಮಾಡುವವರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಇನ್ನೇರಡು ದಿನಗಳಲ್ಲಿ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ. ಗ್ರಾಮಸ್ಥರೊಂದಿಗೆ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯ ಸೇರಿದಂತೆ ತಾಲೂಕಾ ಪಂಚಾಯತ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ನಿಲ್ಲಿಸಿದರು.
ಐ.ಎಸ್.ಹರನಟ್ಟಿ, ಗೂಳಪ್ಪ ಹರನಟ್ಟಿ, ಕಲ್ಲನಗೌಡ ಪಾಟೀಲ, ಸುಭಾಸ ಹಳ್ಳಿ, ರಾಮಣ್ಣ ಜಾಧವ, ವಿಠ್ಠಪ್ಪ ಜಾಧವ, ಮಹಾಂತಗೌಡ ಪಾಟೀಲ, ತಿಪ್ಪನಗೌಡ ಪಾಟೀಲ, ಬಸನಗೌಡ ಪಾಟೀಲ ಸೇರಿದಂತೆ ಗ್ರಾಮದ ಮಹಿಳೆಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...