ಸತ್ತಿರುವ ವಿಧ್ಯಾರ್ಥಿ: ಬದುಕಿದ್ದಾನೆಂದು ವದಂತಿ

0
35
loading...

ಕನ್ನಡಮ್ಮ ಸುದ್ದಿ-ಕುಮಟಾ: ಅಂಕೋಲಾದ ಹನಿ ಬೀಚ್‍ನಲ್ಲಿ ಸಮುದ್ರ ಪಾಲಾದ ಎಂದು ಹೇಳಲಾದ ಇಲ್ಲಿನ ಡಾ ಎ.ವಿ ಬಾಳಿಗಾ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಗುರುದರ್ಶನ ನಾಗೇಶ ಶೇಟ್ ಬದುಕಿದ್ದಾನೆಂದು ಸುಳ್ಳು ವದಂತಿ ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬಿರುವುದು ಪಾಲಕರ ನಿದ್ದೆ ಗೆಡಿಸಿದೆ.
ಬಗ್ಗೋಣ ನಿವಾಸಿ ಗುರುದರ್ಶನ ನಾಗೇಶ ಶೇಟ್ ಎಂಬುವವರು ಸ್ನೇಹಿತರಾದ ಗುಡಿಗಾರಗಲ್ಲಿಯ ರಾಹುಲ್ ರತ್ನಾಕರ ಶೇಟ್, ಮೂರುಕಟ್ಟೆಯ ಅಕ್ಷಯ ವಿನಾಯಕ ಬಾಳೇರಿ, ಹೊನ್ಮಾಂವದ ಪ್ರಶಾಂತ ನಾಗೇಶ ಗಾವಡಿ ಜತೆಗೆ ಜೂನ್ 4 ರಂದು ಹನಿ ಬೀಚ್‍ಗೆ ತೆರಳಿದ್ದರು. ಆದರೆ ಈ ನಾಲ್ವರಲ್ಲಿ ಗುರುದರ್ಶನ ಹನಿ ಬೀಚಿನಲ್ಲಿ ಬಂಡೆ ಮೇಲೆ ನಿಂತು ಫೋಟೋ ತೆಗೆಯುತ್ತಿರುವ ಸಂದರ್ಭದಲ್ಲಿ ಸಮುದ್ರದ ಭಾರೀ ಅಲೆಗೆ ಸಿಲುಕಿ ಕಾಲು ಜಾರಿ ಬಿದ್ದು ಸಮುದ್ರ ಪಾಲಾಗಿದ್ದ ಎನ್ನಲಾಗಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲೆಡೆ ಶೋಧಿಸಿದರೂ ಶವ ಪತ್ತೆಯಾಗಿಲ್ಲ. ಬಹುಶಃ ಶವ ಸಮುದ್ರ ಜೀವಿಗಳ ಆಹಾರವಾಗಿರಬಹುದೆಂದು ಉಹಿಸಲಾಗಿತ್ತು. ಆದರೆ ಇತ್ತೀಚಿನ ಕೆಲ ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಗುರುದರ್ಶನ ಜೀವಂತ ಇರುವ ಬಗ್ಗೆ ವದಂತಿ ಹರಡಿದೆ. ಗುರುದರ್ಶನ ಪ್ರೇಯಸಿ ಜೊತೆಗೆ ಮದುವೆಯಾಗಿ ಗೋವಾದಲ್ಲಿ ಇದ್ದಾನೆ. ಅವನ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ಡ್ರಾ ಮಾಡಿರುವುದು ಕಂಡುಬಂದಿದೆ. ಅಲ್ಲದೆ ಜುಲೈ 22ರಂದು ಮನೆಗೆ ಬಂದಿದ್ದಾನೆಂದು ಊರೆಲ್ಲ ಸುದ್ದಿ ಹಬ್ಬಿತ್ತು. ಈ ನಿಮಿತ್ತ ಕೆಲವರು ಗುರುದರ್ಶನನ್ನು ಕಾಣಲು ಅವರ ಮನೆಗೆ ಭೇಟಿ ನೀಡಿದ ಘಟನೆ ಕೂಡ ನಡೆದಿದ್ದೆ. ಇದರಿಂದ ಅವರ ಪಾಲಕರು ಮಗನನ್ನು ನೆನಪಿಸಿಕೊಂಡು ಪುನಃ ದುಃಖ ಪಡುವಂತಾಗಿದೆ. ಜನರು ಹೇಳಿದಂತೆ ಬಾರದ ಲೋಕಕ್ಕೆ ತೆರಳಿದ್ದ ತಮ್ಮ ಮಗ ಮತ್ತೆ ಬರುವನೆಂಬ ಆಸೆ ಚಿಗುರಿದಂತಾಗಿದೆ.
ಈ ಕುರಿತು “ಕನ್ನಡಮ್ಮಕ್ಕ” ಪ್ರತಿಕ್ರಿಯಿಸಿದ ಗುರುದರ್ಶನ ತಂದೆ ನಾಗೇಶ ಶೇಟ್ ಅವರು, ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ವದಂತಿ ಹಬ್ಬಿಸುವ ಮೂಲಕ ನಮ್ಮ ದುಃಖವನ್ನು ಹೆಚ್ಚಿಸಿದ್ದಾರೆಂದು ಅವಲತ್ತು ಕೊಂಡಿದ್ದಾರೆ. ಒಟ್ಟಾರೆ ಇತ್ತೀಚೆಗೆ ಈ ಸಾಮಾಜಿಕ ಜಾಲ ತಾಣಗಳು ಕೆಲ ವಿಷಯಗಳನ್ನು ಮನಸೋಇಚ್ಚೆ ತಿರುಚಿ ಜನರನ್ನು ಹಾದಿ ತಪ್ಪಿಸುತ್ತಿರುವುದು ಕಂಡುಬಂದಿದೆ. ಹಾಗಾಗಿ ಸಾಮಾಜಿಕ ಜಾಲ ತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ತನಿಖೆ ನಡೆಸುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕೆಂವ ಒತ್ತಾಯ ಪ್ರಜ್ಞಾವಂತ ನಾಗರಿಕರಿಂದ ಕೇಳಿಬಂದಿದೆ.

loading...