ಸರ್ಕಾರದ ಸಹಾಯಧನವನ್ನು ಸದ್ಭಳಕೆ ಮಾಡಿಕೊಳ್ಳಿ: ಶಾಸಕ ರಾಮಕೃಷ್ಣ

0
26
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಶೌಚಗೃಹ ನಿರ್ಮಿಸಿಕೊಳ್ಳಲು ಪಟ್ಟಣದ ಹಾಗೂ ಗ್ರಾಮೀಣ ಭಾಗದಲ್ಲಿನ ಜನರಿಗೆ ಸರ್ಕಾರದಿಂದ ಸಿಗುವಂತ ಸಹಾಯಧನ ಕುರಿತು ತಿಳಿಹೇಳಬೇಕು. ಶೌಚಗೃಹ ನಿರ್ಮಿಸಿಕೊಳ್ಳುವುದರ ಜೊತೆಗೆ ಅವುಗಳನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆ.15ರೊಳಗೆ ಗದಗ ಜಿಲ್ಲೆಯನ್ನು ಸಂಪೂರ್ಣವಾಗಿ ಬಯಲು ಶೌಚಮುಕ್ತವನ್ನಾಗಿಸುವಲ್ಲಿ ಎಲ್ಲ ಶಿಕ್ಷಕರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತೆ ಬಗೆಗೆ ಎಲ್ಲರೂ ಎಚ್ಚೆತ್ತುಕೊಂಡಾಗ ಮಾತ್ರ ಸುಂದರ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ. ಸ್ವಚ್ಛತೆ ಇಲ್ಲದಿದ್ದರೇ ದೇವರು ಒಳಿಯುವುದಿಲ್ಲ. ಬಯಲು ಶೌಚದಿಂದ ಪರಿಸರ ಮಲೀನಗೊಳ್ಳುವುದರ ಜೊತೆಗೆ ಹಳ್ಳ, ನದಿಗಳ ನೀರು ಕಲುಷಿತಗೊಳ್ಳುತ್ತದೆ. ಇದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಜಾಗೃತರಾಗಿ ಮನೆಯೊಂದು ಶೌಚಗೃಹವನ್ನು ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿ.ಪಂ.ಸದಸ್ಯೆ ಶೋಭಾ ಮೇಟಿ ಮಾತನಾಡಿ, ಮಕ್ಕಳಿಗೆ ಮಾರ್ಗದರ್ಶನ ನೀಡುವಂತ ಶಿಕ್ಷಕರು ಜನರಿಗೂ ಶೌಚಗೃಹ ನಿರ್ಮಿಸಿಕೊಳ್ಳುವುದರ ಬಗೆಗೆ ತಿಳುವಳಿಕೆ ಹೇಳುವುದು ಅವಶ್ಯವಾಗಿದೆ. ಪ್ರತಿಯೊಂದು ಮಗುವು ತಮ್ಮ ಪಾಲಕರಿಗೆ ಶೌಚಗೃಹ ನಿರ್ಮಿಸುವಂತೆ ಹಠ ಮಾಡಬೇಕು. ಶೌಚಗೃಹ ಬಳಕೆಯಿಂದ ಸುಂದರ ಪ್ರಕೃತಿ ನಿರ್ಮಾಣವಾಗುತ್ತದೆ. ಈ ವಿಷಯ ಕುರಿತು ಮಹಿಳೆಯರು ಜಾಗೃತರಾದರೆ ಸಮಾಜ ಪರಿವರ್ತನೆಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಾ.ಪಂ.ಸದಸ್ಯ ರುದ್ರಗೌಡ ಪಾಟೀಲ ಮಾತನಾಡಿದರು.
ತಾ.ಪಂ.ಸದಸ್ಯ ವೆಂಕಪ್ಪ ಬಳ್ಳಾರಿ, ಪುರಸಭೆ ಸದಸ್ಯ ಸೋಮನಗೌಡ ಗೌಡ್ರ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ.ಧರ್ಮಾಧಿಕಾರಿ, ಜಿ.ಪಂ.ಎಇಇ ಎಂ.ಡಿ.ತೋಗಣಸಿ, ಪಿಡ್ಬ್ಲೂಡಿ ಎಇಇ ನರೇಂದ್ರ, ಸಿಡಿಪಿಓ ಎಸ್.ಎಸ್.ವಾರದ, ಬಸವರಾಜ ಅಂಗಡಿ, ಡಾ.ಬಿ.ಎಸ್.ಮೇಟಿ, ಎಪಿಎಂಸಿ ಕಾರ್ಯದರ್ಶಿ ಜಿ.ಎಸ್.ಬುರುಡಿ, ಅಣ್ಣಿಗೇರಿ, ಸೇರಿದಂತೆ ಉಪಸ್ಥಿತರಿದ್ದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಮುಂಡರಗಿ ಪ್ರಾಸ್ಥವಿಕವಾಗಿ ಮಾತನಾಡಿದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಕಾರ್ಯಕ್ರಮ ನಿರೂಪಿಸಿದರು.

loading...