ಕೈಕೊಟ್ಟ ಮುಂಗಾರು ಮಳೆ: ದಿಕ್ಕು ತೋಚದೆ ಕೈಕಟ್ಟಿ ಕುಳಿತ ರೈತ

0
35
loading...

ತಾಲೂಕಿನಲ್ಲಿ ಶೇ. 10 ರಷ್ಟು ಮಾತ್ರ ಬಿತ್ತನೆ | ಮೊಳಕೆ ಒಡೆಯುವ ಮುನ್ನ ಕಮರಿದ ಬೆಳೆ
|ಚಂದ್ರಶೇಖರ ಸೋಮಣ್ಣವರ
ಶಿರಹಟ್ಟಿ: ಮಳೆಗಾಲ ಮುಗಿಯುತ್ತ ಬಂದರೂ ಸಹ ತಾಲೂಕಿನಲ್ಲಿ ಶೇ. 10 ರಷ್ಟು ಬಿತ್ತನೆ ಮಾಡಿದ ಬೆಳೆ ವರುಣ ಮುನಿಸಿಕೊಂಡಿದ್ದರಿಂದ ಕಮರಿ ಹೋಗುತ್ತಿದ್ದು ರೈತ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
ನಿರೀಕ್ಷೆಯಂತೆ ಜೂನ್ ಹಾಗೂ ಜೂಲೈನಲ್ಲಿ ಆಗಬೇಕಾದ ಮಳೆಯ ಕೊರತೆಯಿಂದಾಗಿ ಬಿತ್ತನೆಯಾಗಿದ್ದ ಕೆಲವು ಬೆಳೆಗಳು ಸಹ ಒಣಗಲಾರಂಭಿಸಿವೆ. ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಕೈಕೊಟ್ಟಿರುವ ಮಳೆರಾಯ ಈ ಭಾರಿಯಾದರು ಮುಂಗಾರು ಚುರುಕಾಗಬಹುದು ಎಂಬ ರೈತರ ನೀರೀಕ್ಷೆ ಹಾಗೂ ಭರವಸೆಗಳು ಸುಳ್ಳಾಗಿ ರೈತರ ಪರಸ್ಥಿತಿ ದುಸ್ಥರವಾಗಿದೆ.
ತಾಲೂಕಿನಲ್ಲಿ ಮುಂಗಾರು ಮಳೆಯು ಸಂಪೂರ್ಣವಾಗಿ ಕುಸಿದಿರುವುದರಿಂದ ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೂ ಸಹ ರೈತರು ಬಿತ್ತನೆಯ ಚಟುವಟಿಕೆ ಮಾಡುತ್ತಿಲ್ಲ. ಕೆಲವೊಬ್ಬ ರೈತರು ಬಿತ್ತನೆ ಮಾಡಿದ್ದ ಹೆಸರು, ಮೆಕ್ಕೆಜೋಳ ಹಾಗೂ ಶೇಂಗಾ ಇತ್ಯಾದಿ ಬೆಳೆಗಳು ಮಳೆ ಇಲ್ಲದ್ದರಿಂದ ಈಗಾಗಲೇ ಒಣಗಲಾರಂಭಿಸಿವೆ.
ವಾಡಿಕೆಯಂತೆ ಜೂನ್ ಪ್ರಾರಂಭದಿಂದ ಜೂಲೈ ಅಂತ್ಯದವರೆಗೆ ಸಾಕಷ್ಷು ಪ್ರಮಾಣದಲ್ಲಿ ಮಳೆಯಾಗಬೇಕಿತ್ತು ಆದರೆ, ಸಂಪೂರ್ಣವಾಗಿ ಮಳೆ ಕುಸಿತವಾಗಿದ್ದರಿಂದ ರೈತರು ಬಹಳಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ. ರೈತರಿಗೆ ಒಂದು ಕಡೆ ಮಳೆರಾಯನ ಮುನಿಸು ಹಾಗೂ ಇನ್ನೊಂದು ಕಡೆ ರೈತರ ಬಗ್ಗೆ ಕಾಳಜಿಯಿಲ್ಲದ ಆಡಳಿತ ಅಧಿಕಾರಿಗಳ ವಿಫಲತೆಯಿಂದಾಗಿ ಕೃಷಿಯನ್ನು ನಂಬಿದ ರೈತರ ಬದುಕು ದಿಕ್ಕುತೋಚದಂತಾಗಿದೆ.
ಭಾರತ ಇಂದಿಗೂ ಸಹ ಕೃಷಿ ಪ್ರಧಾನ ದೇಶವಾಗಿಯೇ ಇದೆ. ದೇಶದ ಜನಸಂಖ್ಯೆಯಲ್ಲಿ ಶೇ. 70 ಕ್ಕೂ ಹೆಚ್ಚು ಜನರು ಒಕ್ಕಲುತನವನ್ನೇ ಅವಲಂಭಿಸಿದ್ದು ರೈತರೇ ಈ ದೇಶದ ಬೆನ್ನೆಲುಬಾಗಿದ್ದರೂ ಸಹ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳು ಕಳೆಯುತ್ತ ಬಂದರೂ ಸಹ ಕೃಷಿ ಸಾಲ, ವೈಜ್ಞಾನಿಕ ಬೆಲೆ, ನೀರಾವರಿ ಯೋಜನೆಗಳು ಸೇರಿದಂತೆ ಒಂದು ನಿರ್ಧಿಷ್ಟವಾದ ರಾಷ್ಟ್ರೀಯ ಕೃಷಿ ನೀತಿಯನ್ನು ಜಾರಿಗೆ ತರಲು ನಮ್ಮ ಆಡಳಿತ ಅಧಿಕಾರಿಗಳು ವಿಫಲರಾಗಿದ್ದಾರೆ.
ಹೀಗಾಗಿ ಭಾರತದ ರೈತರು ಸಾಲದಲ್ಲಿಯೇ ಹುಟ್ಟಿ ಸಾಲದಲ್ಲಿಯೇ ಬೆಳೆದು ಸಾಲವನ್ನೇ ತಮ್ಮ ಮಕ್ಕಳಿಗೆ ಬಳುವಳಿಯನ್ನಾಗಿ ನೀಡಿ ತಮ್ಮ ಕೊನೆಯುಸಿರೆಳೆಯುವ ಸ್ಥಿತಿ ಬಂದೊದಗಿದೆ. ಕೇಂದ್ರ ಮತ್ತು ರಾಜ್ಯ ಸರರ್ಕಾಗಳು ಆಧುನಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಹಾಗೂ ತೋಟಗಾರಿಕೆಯ ಬೆಳೆ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆಯಾದರೂ ಸಹ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುವಲ್ಲಿ ಈ ವರೆಗೂ ಸಹ ಚಿಂತನೆಯನ್ನು ನಡೆಸದಿರುವುದು ವಿಷಾದದ ಸಂಗತಿಯಾಗಿದೆ.
ಕೃಷಿ ಪಂಪಸೆಟ್ಟಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಕೃಷಿ ವಲಯದಲ್ಲಿರುವ ಎಲ್ಲಾ ರೀತಿಯ ಮಧ್ಯವರ್ತಿಗಳನ್ನು ನಿವಾರಣೆ ಮಾಡುವುದು, ಅತೀವೃಷ್ಟಿ-ಅನಾವೃಷ್ಟಿ ಮತ್ತಿತರ ನೈಸರ್ಗಿಕ ವಿಕೋಪಗಳಿಂದ ಬೆಳೆಹಾನಿಯಾದಲ್ಲಿ ವೈಜ್ಞಾನಿಕವಾಗಿ ಪರಿಹಾರ ನೀಡುವುದು ಹಾಗೂ ಸಮರ್ಪಕವಾದ ಕೃಷಿ ಸಾಲದ ನೀತಿಯನ್ನು ಜಾರಿಗೆ ತರುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ.
ರೈತರಿಗೆ ಸಾಲ ಮನ್ನಾದಂತಹ ಯೋಜನೆಗಳ ಅಗತ್ಯವೇ ಇರುವುದಿಲ್ಲ. ಸರಕಾರ ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ವಿಜ್ಞಾನಿಗಳು, ಆರ್ಥಿಕ ತಜ್ಞರು ಹಾಗೂ ರೈತ ಮುಖಂಡರೊಂದಿಗೆ ಸಮಗ್ರವಾಗಿ ಚರ್ಚಿಸಿ ದೇಶಕ್ಕೆ ಮಾದರಿಯಾದ ಒಂದು ಕೃಷಿ ನೀತಿಯನ್ನು ಜಾರಿಗೆ ತರುವುದು ಸೂಕ್ತವಾಗಿದೆ.
ಸರ್ಕಾರ ಯಾವುದೇ ಒಂದು ಯೋಜನೆಯನ್ನು ಪ್ರಕಟಿಸುವುದಕ್ಕಿಂತ ಮೊದಲು ಅದರ ಸಾಧಕ-ಬಾಧಕ ಮತ್ತು ದಿರ್ಘಾವಧಿಯ ಪರಿಣಾಮಗಳ ಕುರಿತು ಯೋಚಿಸಬೇಕು. ತೆರಿಗೆಯ ಮೂಲಕ ಬರುವ ಸಾರ್ವಜನಿಕರ ಹಣವನ್ನು ಯಾವುದೇ ಯೋಜನೆಗೆ ಬಳಸಿದರೂ ಸಹ ಅದು ಫಲಪ್ರದವಾಗಿರಬೇಕು.
ಅಲ್ಲದೆ ಸರ್ಕಾರ ಘೋಷಣೆ ಮಾಡುವ ಕಾರ್ಯಕ್ರಮಗಳು ಪ್ರಗತಿಪರವಾಗಿರಬೇಕೆ ಹೊರತು ಅಗ್ಗದ ಪ್ರಚಾರ ಪ್ರೀಯವಾಗಿರಬಾರದು.
ಬಾಕ್ಸ್:
ಎರಡೂವರಿ ತಿಂಗಳ ಹೊತ್ತ ಆಯ್ತಿತ್ರಿ ಸರ್ ಆ ಮಳೆದೇವನ ದಾರಿ ನೋಡಲಿಕ್ಕೆ ಹತ್ತಿ ಮಳಿನೇ ಆಗವಲ್ಲದು ನಮ್ಮ ರೈತರ ಪರಸ್ಥಿತಿಯನ್ನಾದರೂ ನೋಡಿ ಆ ಭಗವಂತ ಮಳೆ ಸುರಿಸಬೇಕು.
-ಮಂಜುನಾಥ ಶಿರಹಟ್ಟಿ, ಸ್ಥಳೀಯ ರೈತ ಸುಗನಹಳ್ಳಿ
ಬಾಕ್ಸ್:
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇದು ಭೀಕರ ಬರಗಾಲವಾಗಿದ್ದು ಇಲ್ಲಿಯವರೆಗೂ ಸಹ ಮಳೆಯಾಗದೆ ಇರುವುದರಿಂದ ರೈತರಿಗೆ ಬಿತ್ತನೆಗೆ ಅವಕಾಶವೇ ಸಿಕ್ಕಿಲ್ಲ. ಕೆಲವು ರೈತರು ಬಿತ್ತಿದ ಹೆಸರು ಬೆಳೆಯನ್ನು ಸಹ ಹರಗಿದ್ದು ರೈತರು ತೊಂದರೆ ಅನುಭವಿಸುತ್ತಿದ್ದಾರೆ.
-ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ, ಶಿರಹಟ್ಟಿ

loading...