ಚಾರಣಕ್ಕೆ ತೆರಳಿದ್ದ ಬಾಲಕಿಯರು 24 ಗಂಟೆ ಬಳಿಕ ಸುರಕ್ಷಿತವಾಗಿ ಪತ್ತೆ

0
37
loading...

ಖಾನಾಪುರ: ತಾಲೂಕಿನ ಕಣಕುಂಬಿ ಅರಣ್ಯದಲ್ಲಿ ಸೋಮವಾರ ಮುಂಜಾನೆ ಗೋವಾ ರಾಜಧಾನಿ ಪಣಜಿ ಮೂಲದ ಧಾರ್ಮಿಕ ಸಂಸ್ಥೆಯೊಂದರ ಧರ್ಮಗುರುವಿನ (ಪ್ರಿಸ್ಟ್) ನೇತೃತ್ವದಲ್ಲಿ ಚಾರಣಕ್ಕೆ ತೆರಳಿದ್ದ ಅದೇ ರಾಜ್ಯದ ವಿವಿಧ ಭಾಗಗಳ ಒಟ್ಟು 7 ಬಾಲಕಿಯರು ದಟ್ಟ ಅರಣ್ಯದ ನಡುವೆ ಹಾದಿ ತಪ್ಪಿಸಿಕೊಂಡಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಕರ್ನಾಟಕದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. 24 ಗಂಟೆಗಳ ಕಾಲ ನಿರಂತರ ಶೋಧಕಾರ್ಯದ ಬಳಿಕ ನಾಪತ್ತೆಯಾದವರನ್ನು ಪತ್ತೆ ಮಾಡಿ ರಕ್ಷಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಕರ್ನಾಟಕ ಗೋವಾ ಗಡಿಯ ಚೋರ್ಲಾ ಅರಣ್ಯದ ಬಳಿ ವರದಿಯಾಗಿದೆ.
ಘಟನೆಯ ವಿವರ
ಗೋವಾ ರಾಜ್ಯದ ಪಣಜಿ ಮೂಲದ ಧರ್ಮಗುರು ಮೆಲೋನಿ ಪಿಂಟೋ ಎಂಬಾತ ತನ್ನ ವೃತ್ತಿಯೊಂದಿಗೆ ಹವ್ಯಾಸಿ ಅರಣ್ಯ ಚಾರಣಿಗನಾಗಿದ್ದು, ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳನ್ನು ಹಾಗೂ ಯುವಕ-ಯುವತಿಯನ್ನು ಅರಣ್ಯ ಚಾರಣಕ್ಕೆ ಕರೆದೊಯ್ಯುವ ಪ್ರವೃತ್ತಿಯನ್ನು ಹೊಂದಿದ್ದ. ಈಗಾಗಲೇ ಹಲವು ಸಲ ಗೋವಾ ರಾಜ್ಯದ ಅರಣ್ಯ ಪ್ರದೇಶದಲ್ಲಿ ಚಾರಣಗಳನ್ನು ಯಶಸ್ವಿಯಾಗಿ ಪೂರೈಸಿದ ಮೆಲೋನಿ ಸೋಮವಾರ ಕರ್ನಾಟಕ-ಗೋವಾ ಗಡಿಯ ಚೋರ್ಲಾ ಬಳಿ ಹರಿಯುವ ಜಲಪಾತಕ್ಕೆ ಕರೆದೊಯ್ಯುವುದಾಗಿ ಹೇಳಿ ಗೋವಾ ರಾಜ್ಯದ ವಿವಿಧ ಭಾಗದ 11 ರಿಂದ 14 ವರ್ಷದ 7 ಬಾಲಕಿಯರನ್ನು ಪಣಜಿಯಿಂದ ಟಾಟಾ ಸುಮೋ ವಾಹನದಲ್ಲಿ ಕರೆದುಕೊಂಡು ಬಂದಿದ್ದ.
ಮುಂಜಾನೆ 10 ಗಂಟೆಗೆ ಚೋರ್ಲಾ ಘಟ್ಟ ಪ್ರದೇಶವನ್ನು ತಲುಪಿದ್ದ ಮೇಲೊನಿ ಹಾಗೂ ಆತನ ತಂಡದಲ್ಲಿದ್ದ ಬಾಲಕಿಯರಾದ ಗೋವಾದ ರಾಯಬಂದರ್ ನಿವಾಸಿ ಡೆಬ್ರೋ ಗೊನ್ಸಾಲ್ವಿಸ್ (13), ಸಾಯಿರಾ ಫರ್ನಾಂಡಿಸ್ (13), ಪರ್ಲ್ ಫರ್ನಾಂಡಿಸ್ (14), ಶ್ವೇತಾ ಜೇಮ್ಸ್ (12), ಗ್ರೀನ್ ಹಿಲ್ಲ ಪೇರುಲೀಂ ನಿವಾಸಿ ಸಂಷಾ ಸಂಪಾಯಾ (11) ಸಾಯಿನಾ ಡಿಸೋಜಾ (12) ಮತ್ತು
ಸಿನಾಯಾ ಡಿಸೋಜಾ (13) ಚೋರ್ಲಾ ಗ್ರಾಮಕ್ಕೆ ಸಾಗುವ ಕಚ್ಚಾ ರಸ್ತೆಯ ಬದಿಯಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಅರಣ್ಯವನ್ನು ಪ್ರವೇಶಿಸಿದ್ದರು.
ಚೋರ್ಲಾ ಅರಣ್ಯಕ್ಕೆ ತೆರಳಿದ್ದ ಒಟ್ಟು 8 ಜನ ಸದಸ್ಯರ ತಂಡ ಮಧ್ಯಾಹ್ನದ ನಂತರ ಅರಣ್ಯದಲ್ಲಿ ಹಾದಿ ತಪ್ಪಿಸಿಕೊಂಡು ಮುಖ್ಯ ವಾಹಿನಿಯಿಂದ ಸಂಪರ್ಕ ಕಳೆದುಕೊಂಡಿತ್ತು. ಸಂಜೆಯಾದರೂ ಫಾದರ್ ಮೆಲೋನಿ ಜೊತೆ ತೆರಳಿದ್ದ ತಮ್ಮ ಮಕ್ಕಳು ಮರಳಿ ಬಾರದ್ದರಿಂದ ಆತಂಕಗೊಂಡಿದ್ದ ಮಕ್ಕಳ ಹೆತ್ತವರು ಈ ವಿಷಯವನ್ನು ಗೋವಾ ಪೊಲೀಸರಿಗೆ ಮತ್ತು ಅಲ್ಲಿಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಟ್ಟಿಸಿದ್ದರು. ಮಕ್ಕಳ ಪಾಲಕರಿಂದ ಮಾಹಿತಿ ಪಡೆದ ಗೋವಾ ಪೊಲೀಸರು ಮತ್ತು ಅರಣ್ಯ ಇಲಾಖೆಯವರು ಗೋವಾ ಅರಣ್ಯದಲ್ಲಿ ಶೋಧಕಾರ್ಯ ನಡೆಸಿದ್ದರು. ಶೋಧಕಾರ್ಯ ನಡೆಸುತ್ತಿದ್ದ ತಂಡಕ್ಕೆ ತಡರಾತ್ರಿ ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಟ್ಟದಲ್ಲಿ ನಿಂತಿದ್ದ ಟಾಟಾ ಸುಮೋ ಕಾಣಿಸಿದ ಹಿನ್ನೆಲೆಯಲ್ಲಿ ಚಾರಣಿಗರು ಕಣಕುಂಬಿ ವಲಯದ ಚೋರ್ಲಾ ಅರಣ್ಯವನ್ನು ಪ್ರವೇಶಿಸಿರಬಹುದೆಂಬ ಸುಳಿವು ಪಡೆದು ಧರ್ಮಗುರು ಮತ್ತು ಮಕ್ಕಳ ನಾಪತ್ತೆಯ ಮಾಹಿತಿಯನ್ನು ಬೆಳಗಾವಿಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಟ್ಟಿಸಿದ್ದರು.
ಮಂಗಳವಾರ ಮುಂಜಾನೆ ಬೆಳಗಾವಿ ವಿಭಾಗದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಡಿಎಫ್‍ಒ ಬಿ.ವಿ ಪಾಟೀಲ ಮತ್ತು ಎಸಿಎಫ್ ಸಿ.ಬಿ ಪಾಟೀಲ, ಆರ್.ಎಫ್.ಒ ಗಳಾದ ಕವಿತಾ ಈರನಟ್ಟಿ, ಎಸ್.ಎಸ್ ನಿಂಗಾಣಿ, ಬಸವರಾಜ ವಾಳದ, ರತ್ನಾಕರ ಓಬಣ್ಣವರ ಅವರ ನೇತೃತ್ವದಲ್ಲಿ ಚೋರ್ಲಾ ಅರಣ್ಯಕ್ಕೆ ತೆರಳಿ ಮುಂಜಾನೆ 7 ಗಂಟೆಗೆ ಸ್ಥಳೀಯರ ನೆರವಿನೊಂದಿಗೆ ತಂಡಗಳನ್ನು ರಚಿಸಿ ಸತತ ಹುಡುಕಾಟ ಮತ್ತು ಕುಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಶೋಧನಾ ತಂಡಕ್ಕೆ ಮಾಂಗೇಲಿ ಎಂಬ ದುರ್ಗಮ ಅರಣ್ಯ ಪ್ರದೇಶದ ಬಳಿ ನಾಪತ್ತೆಯಾದ ಬಾಲಕಿಯರು ಮತ್ತು ಫಾದರ್ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯರು ನಿತ್ರಾಣಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಈ ವಿಷಯವನ್ನು ಗೋವಾ ಪೊಲೀಸರಿಗೆ ತಿಳಿಸಿದ್ದರಿಂದ ಮಂಗಳವಾರ ಮಧ್ಯಾಹ್ನ ಕಣಕುಂಬಿ ಆಗಮಿಸಿದ ಗೋವಾ ಪೊಲೀಸರು ಮತ್ತು ಮಕ್ಕಳ ಹೆತ್ತವರು ತಮ್ಮ ಮಕ್ಕಳನ್ನು ವಶಕ್ಕೆ ಪಡೆದಿದ್ದರಿಂದ ದಟ್ಟ ಅರಣ್ಯದಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿತು.
ನಾಗರಗಾಳಿ ಅರಣ್ಯದಲ್ಲಿ ಕಳೆದ ವರ್ಷವೂ ಇಂಥದ್ದೇ ಪ್ರಕರಣ
ಖಾನಾಪುರ: ಕಳೆದ ವರ್ಷದ ಮಳೆಗಾಲದ ಸಮಯದಲ್ಲಿ ಸೆ.18ರಂದು ತಾಲೂಕಿನ ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ದುರ್ಗಮ ಅರಣ್ಯದ ನಡುವೆ ಹರಿಯುವ ಫಾಲ್ಸ್ ವೀಕ್ಷಣೆಗೆಂದು ತೆರಳಿದ್ದ ಧಾರವಾಡ ಮೂಲದ 7 ಯುವಕರ ತಂಡದ ಪೈಕಿ ಮೂವರು ಹಿಂದಿರುಗಿ ಬರದೇ ಅರಣ್ಯದಲ್ಲೇ ಉಳಿದು ಆತಂಕ ಸೃಷ್ಟಿಸಿದ್ದರು. ಅರಣ್ಯ ಇಲಾಖೆ ಮಿಂಚಿನ ಕಾರ್ಯಾಚರಣೆಯನ್ನು ಕೈಗೊಂಡು ನಾಪತ್ತೆಯಾದವರನ್ನು ಹುಡುಕಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ಕಾರಣ ಮತ್ತು ಅರಣ್ಯ ಚಾರಣದಲ್ಲಿ ಎದುರಾಗಬಹುದಾದ ವಿಪತ್ತುಗಳ ಬಗ್ಗೆ ಊಹೆಯಿಲ್ಲದೇ ಸಾರ್ವಜನಿಕರು ಅರಣ್ಯವನ್ನು ಪ್ರವೇಶಿಸುವ ಕಾರಣ ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಖಾನಾಪುರ ಉಪ ವಿಭಾಗದ ಎಸಿಎಫ್ ಸಿ.ಬಿ ಪಾಟೀಲ ಆತಂಕ ವ್ಯಕ್ತಪಡಿಸಿದ್ದಾರೆ.

loading...