ನಿಡಸೋಸಿ ಮಹಾದಾಸೋಹ ಮಹೋತ್ಸವದಲ್ಲಿ ಸಹಸ್ರಾರು ಭಕ್ತಗಣ

0
20
loading...

25 ಕ್ವಿಂಟಾಲ್‍ನಷ್ಟು ಗೋಧಿ ಹುಗ್ಗಿ ಪ್ರಸಾದ
ಸಂಕೇಶ್ವರ 28: ಇಲ್ಲಿಗೆ ಸಮೀಪದ ನಿಡಸೋಸಿಯ ಐತಿಹ್ಯ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಗೋಧಿ ಹುಗ್ಗಿ ಖ್ಯಾತಿಯ ದಾಸೋಹದಲ್ಲಿ 25 ಕ್ವಿಂಟಾಲ್‍ನಷ್ಟು ಗೋಧಿ ಹುಗ್ಗಿ ಪ್ರಸಾದ ವಿತರಿಸುವ ಮಹಾದಾಸೋಹ ಮಹೋತ್ಸವವು ಪರಮಪೂಜ್ಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಿತು.
ರವಿವಾರ ರಾತ್ರಿಯೇ ನಿಡಸೋಸಿಗೆ ಬಂದಿಳಿದಿದ್ದ ಭಕ್ತರ ದಂಡು ಪ್ರತಿವರ್ಷದ ವಾಡಿಕೆಯಂತೆ ತಮ್ಮ ಗ್ರಾಮಗಳಿಗೆ ನೇಮಕಗೊಂಡಿರುವ ಕೆಲಸ ಕಾರ್ಯಗಳತ್ತ ಗಮನಹರಿಸಿದ್ದರು. ರಾತ್ರಿಯಿಡಿ ನಿದ್ರೆಯಿಲ್ಲದೇ ಕೆಲಸ ಮಾಡಿದರೂ ಭಕ್ತರ ಉತ್ಸಾಹದಲ್ಲಿ ಯಾವುದೇ ಬದಲಾವಣೆಯಾಗದಿರುವುದು ಭಕ್ತಿಯ ಮಹಿಮೆ ಎಂದೇ ಬಣ್ಣಿಸಲಾಗುತ್ತದೆ. ಅಡುಗೆ ಮಾಡುವವರು ಒಬ್ಬರಾದರೆ, ಊಟದ ಎಲೆ ನೀಡುವವವರು ಬೇರೆ, ಅಡುಗೆ ಬಡಿಸುವವರು ಬೇರೆ, ಊಟವಾದ ಬಳಿಕ ಎಲೆ ಎತ್ತುವವರು ಬೇರೆ ಹೀಗೆ ಅವರವರ ಭಕ್ತಿಗೆ ಯಾರ ನಿರ್ದೇಶನವೂ ಇಲ್ಲದೇ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಮಹಾದಾಸೋಹದ ನಿಮಿತ್ತ ಕತೃಗದ್ದುಗೆಯನ್ನು ಪುಷ್ಪಾಲಂಕಾರದ ಜೊತೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸೋಮವಾರ ಮುಂಜಾನೆ ದುರದುಂಡೀಶ್ವರ ಉತ್ಸವಮೂರ್ತಿ ಪಲ್ಲಕ್ಕಿ ಮಹೋತ್ಸವವು ಸಕಲ ವಾದ್ಯ-ವೈಭವ-ಬಿರುದಾವಳಿಯೊಂದಿಗೆ ವಿಜೃಂಭಣೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಕತೃಗದ್ದುಗೆಯ ಸುತ್ತಲೂ ವಾದ್ಯ ಮೇಳದವರೊಂದಿಗೆ ಪಲ್ಲಕ್ಕಿಯ ಮೆರವಣಿಗೆ ನಡೆಸಲಾಯಿತು.
ಮಧ್ಯಾಹ್ನ 12 ಗಂಟೆಗೆ ಮಹಾದಾಸೋಹದ ಪ್ರಸಾದ ಪೂಜೆ ನೆರವೇರಿಸುವ ಮೂಲಕ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು, ಚಿಕ್ಕೋಡಿ ಸಂಪಾದನ ಮಹಾಸ್ವಾಮಿಗಳು ಸೇರಿದಂತೆ ಅನೇಕ ಹರಗುರು ಚರಮೂರ್ತಿಗಳು ಮಹಾಪ್ರಸಾದ ಚಾಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೋಡಿಮಠದ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ನಿಡಸೋಸಿಯಲ್ಲಿ ಪ್ರತಿವರ್ಷ ನಡೆಯುವ ಮಹಾದಾಸೋಹ ಮಹೋತ್ಸವದ ಪ್ರಸಾದ ವ್ಯವಸ್ಥೆ ಅಪರೂಪವಾಗಿದೆ. ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ ನಡೆಯುವ ಈ ಪ್ರಕ್ರಿಯೆಯನ್ನು ಭಕ್ತಿಪ್ರಭುತ್ವ ಎಂದು ಕರೆಯಬಹುದು ಎಂದರು.
ಮಾಜಿ ಸಚಿವ ಉಮೇಶ ಕತ್ತಿ ಮಾತನಾಡಿ, ಗಡಿಭಾಗದ ಶಕ್ತಿಪೀಠವಾಗಿರುವ ನಿಡಸೋಸಿ ಶ್ರೀಮಠದಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಜರುಗುವ ದಾಸೋಹ ಉತ್ತರ ಕರ್ನಾಟಕದಲ್ಲಿ ಮಾದರಿ ವ್ಯವಸ್ಥೆಯನ್ನು ಹೊಂದಿದ್ದು, ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನಿಡಸೋಸಿ ಮಠದ ಭಕ್ತರ ಮಾತೃ ಸ್ಥಾನ ತುಂಬಿದ್ದಾರೆ ಎಂದರು.
ಮಹಾದಾಸೋಹ ಮಹೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಉಮೇಶ ಕತ್ತಿ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಬಾಗಲಕೋಟ ಶಾಸಕ ವೀರಣ್ಣ ಚರಂತಿಮಠ, ನಮೋ ಬ್ರಿಗೇಡನ್ ಸೂಲಿಬೆಲೆ ಚಕ್ರವರ್ತಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ರಾಜೇಂದ್ರ ಪಾಟೀಲ, ಅಪ್ಪಾಸಾಹೇಬ ಶಿರಕೋಳಿ, ವಿನಯ ಪಾಟೀಲ, ಬಿ.ಎಲ್. ಖೋತ, ದುಂಡಪ್ಪಾ ಹೆದ್ದೂರಿ, ಪ್ರಕಾಶ ಕಣಗಲಿ, ಈರಣ್ಣ ಹಾಲದೇವರಮಠ, ಪ್ರಶಾಂತ ಪಾಟೀಲ, ಬಸವರಾಜ ಮರಡಿ, ಅಪ್ಪಾಸಾಹೇಬ ಸಂಕಣ್ಣವರ, ಸುರೇಶ ಬೆಲ್ಲದ, ನಿರಂಜನಗೌಡ ಪಾಟೀಲ, ಸಂಜಯ ಪಾಟೀಲ, ಮಲ್ಲಪ್ಪಾ ತನೋಡಿ, ಬಸಪ್ಪಾ ಹೆಗ್ಗಾಯಿ, ಈಶ್ವರ ಗುದಗಿ ಸೇರಿದಂತೆ ಹಲವು ಗಣ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...