ಬದುಕಿನ ಪದ್ಧತಿ ಅಳವಡಿಸಿಕೊಳ್ಳುವುದೇ ಅನುಷ್ಠಾನ

0
28
loading...

ಬೀಳಗಿ: ಶರಣರು, ಸಂತರು, ಮಹಾಂತರು, ದಾರ್ಶನಿಕರು ಲೌಕಿಕ ಸಂಪತ್ತು ಬಯಸುವದಿಲ್ಲ. ಅವರು ವೈರಾಗ್ಯ ಮೂರ್ತಿಗಳು. ಲೌಕಿಕ ಸಂಪತ್ತು ಶೂನ್ಯವೆಂದು ತಿಳಿದವರು. ಎಲ್ಲರನ್ನೂ ಒಂದುಗೂಡಿಸಿ ಭಾವೈಕ್ಯತೆಯ ಸಂದೇಶ ಸಾರಿದವರು ಎಂದು ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ಮನ್ನಿಕೇರಿ ಗ್ರಾಮದ ದಿಗಂಬರೇಶ್ವರ ಮಠದ 62ನೇ ಜಾತ್ರಾ ಮಹೋತ್ಸವ, ಶ್ರೀಮಠದ ಪೀಠಾಧಿಕಾರಿ ನಿರ್ವಾಣ ಸ್ವಾಮಿಗಳ ಮೌನ ಅನುಷ್ಠಾನ, ಪುರಾಣ ಮಹಾ ಮಂಗಲೋತ್ಸವದ ಸಾನಿಧ್ಯವಹಿಸಿ ಮಾತನಾಡಿ, ಬದುಕಿನ ಪದ್ಧತಿ ಅಳವಡಿಸಿಕೊಳ್ಳುವುದೇ ಅನುಷ್ಠಾನ. ಸಮಾಜದ ಏಳಿಗೆ, ಭಕ್ತರ ಕಲ್ಯಾಣಕ್ಕಾಗಿ ಸ್ವಾಮಿಗಳು ಅನುಷ್ಠಾನ ಮಾಡುತ್ತಾರೆ. ಭಕ್ತರಿಗೆ ಧರ್ಮದ ಗುರಿಯನ್ನು ಕಲಿಸಿ ಕೊಡಲು ನಿರ್ವಾಣ ಸ್ವಾಮೀಜಿ ಅನುಷ್ಠಾನ ಮಾಡಿದ್ದಾರೆಂದು ತಿಳಿಸಿದರು.
ಕೋಲ್ಹಾರದ ಕಲ್ಲಿನಾಥ ದೇವರು ಅಧ್ಯಕ್ಷತೆವಹಿಸಿ ಮಾತನಾಡಿ, ಪಾಲಕರು ಮಕ್ಕಳಿಗೆ ಆಸ್ತಿ, ಅಂತಸ್ತು ಗಳಿಸದೆ ಒಳ್ಳೆಯ ಸಂಸ್ಕಾರಯುತವಾದ ಶಿಕ್ಷಣ ಕೊಡಿಸಬೇಕು. ಮಹಿಳೆಯರು ತಮ್ಮ ಹೆಣ್ಣು ಮಕ್ಕಳಿಗೆ ಅಡುಗೆ, ಉಡುಗೆ ತೊಡುಗೆ ಅರಿವು ಮೂಡಿಸುವುದರ ಜೊತೆಗೆ ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕಿವಿ ಮಾತು ಹೇಳಿದರು.
ಶ್ರೀಮಠದ ನಿರ್ವಾಣ ಸ್ವಾಮಿಗಳು ಅಶ್ವಾರೂಢರಾಗಿ ಬಸವೇಶ್ವರ, ಅಜಾತ ನಾಗಲಿಂಗೇಶ್ವರರ ಭಾವಚಿತ್ರಗಳ ಮೆರವಣಿಗೆ ಭಜನೆ, ಸುಮಂಗಲೆಯರ ಆರತಿ, ಕುಂಭ, ಬಾಗಲಕೋಟೆ ಹಳಪೇಟೆಯ ಮಡುವಿನ ದೈವದ ಮಾಲೆ, ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಗುಂದವಾನದ ಬಾಲತಪಸ್ವಿನಿ ಸಾವಿತ್ರಿದೇವಿ, ಪವಾಡ ಪುರುಷ ನವಲಗುಂದದ `ಅಜಾತ ನಾಗಲಿಂಗೇಶ್ವರ ಮಹಾತ್ಮೆ’ ಪುರಾಣ ಮಹಾ ಮಂಗಲಗೊಳಿಸಿದರು. ಸಂಗಪ್ಪ ಶಿವಪ್ಪ ಮೇಟಿ ಶ್ರೀಮಠದ ನಿರ್ವಾಣ ಸ್ವಾಮಿಗಳಿಗೆ ತುಲಾಭಾರ ನಡೆಸಿ ಕೊಟ್ಟರು.
ಅತಿಥಿಗಳಾಗಿ ಗುಣದಾಳದ ವಿವೇಕಾನಂದ ದೇವರು, ಕಿತ್ತಲಿಯ ಮಂಜುನಾಥ ಸ್ವಾಮಿಗಳು, ಬಳೂತಿಯ ಶಂಕ್ರಯ್ಯಸ್ವಾಮಿ ಚಿಕ್ಕಮಠ, ಚಿಕ್ಕಸಂಗಮದ ಕುಮಾರಸ್ವಾಮಿ ಹಿರೇಮಠ, ಪ್ರವೀಣ ಹಿರೇಮಠ ಆಗಮಿಸಿದ್ದರು.

loading...