ಬರಪೀಡಿತ ಪ್ರದೇಶ ಎಂದು ಘೋಷಿಸಲು ಆಗ್ರಹ

0
24
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪ್ರಸಕ್ತ ಸಾಲಿನ ಮಳೆಗಾಲದ ಸಂದರ್ಭದಲ್ಲಿಯೂ ಸೂಕ್ತ ಮಳೆಯಾಗದ ಕಾರಣ ಫಸಲಿನ ಭವಿಷ್ಯದ ಸ್ಥಿತಿ ಸರಿಯಿಲ್ಲ. ಕೆರೆಗಳಲ್ಲಿ, ಹಳ್ಳದಲ್ಲಿ ನೀರಿಲ್ಲ. ಈ ಹಿನ್ನೆಲೆಯಲ್ಲಿ ಹಳಿಯಾಳ ಹಾಗೂ ಜೋಯಿಡಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮಾಜಿ ಶಾಸಕ ಸುನೀಲ ಹೆಗಡೆ ಆಗ್ರಹಿಸಿದ್ದಾರೆ.
ಭಾಜಪ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಎಸ್.ಎ. ಶೆಟವಣ್ಣವರ, ತಾಲೂಕಾ ಘಟಕದ ಅಧ್ಯಕ್ಷ ಸಾತುರಿ ಗೋಡಿಮನಿ, ಯುವ ಮೋರ್ಚಾ ತಾಲೂಕಾಧ್ಯಕ್ಷ ನಾಗರಾಜ ಗೌಡಾ ಮೊದಲಾದವರ ಉಪಸ್ಥಿತಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿ ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿ ಈ ಕುರಿತು ಮಾತನಾಡಿದರು.
ಸರ್ಕಾರಿ ಬೆಂಬಲ ಬೆಲೆಯ ಗೋವಿನಜೋಳ ಖರೀದಿ ಕೇಂದ್ರವನ್ನು ಸೆಪ್ಟೆಂಬರ್ 1 ರಿಂದಲೇ ಆರಂಭಹೊಳಿಸಬೇಕು. ದಲ್ಲಾಲಿಗಳ ಶೋಷಣೆಯನ್ನು ತಡೆಗಟ್ಟಲು ಗೋವಿನಜೋಳ ಉತ್ಪನ್ನಗಳ ಕೈಗಾರಿಕೆಗಳು ಎಪಿಎಂಸಿಗೆ ಬಂದು ನೇರವಾಗಿ ರೈತರಿಂದ ಫಸಲು ಖರೀದಿಸುವಂತಾಗಬೇಕು.
ಬರುವ ನುರಿಸುವ ಹಂಗಾಮಿಗೆ ಅನ್ವಯವಾಗುವಂತೆ ಕಬ್ಬಿನ ಬೆಲೆ ನಿಗದಿಯಾಗಬೇಕು. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಯವರು ನೀಡಬೇಕಾದ ಕಳೆದೆರಡು ವರ್ಷಗಳ ಬಾಕಿಯನ್ನು ಶೀಘ್ರ ಅವರವರ ಖಾತೆಗೆ ಜಮಾಗೊಳಿಸಬೇಕು. ಸ್ಥಳೀಯ ಟ್ರ್ಯಾಕ್ಟರ್‍ಗಳಿಗೆ, ಕಬ್ಬು ಕಟಾವು ಮಾಡುವ ಸ್ಥಳೀಯರಿಗೆ ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡಲು ಸ್ಥಳೀಯರಿಗೆ ನಿರಂತರ ಉದ್ಯೋಗಾವಕಾಶ ದೊರಕಿಸಿಕೊಡಬೇಕು. ಈ ಬಗ್ಗೆ ಸ್ಥಳೀಯ ಆಡಳಿತ, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಬ್ಬು ಬೆಳೆಗಾರರ ನಡುವೆ ಒಡಂಬಡಿಕೆ ಉಂಟಾಗಬೇಕು.
ಕ್ಷೇತ್ರದಲ್ಲಿ 3ನೇ ವರ್ಷವೂ ಸಹ ಬರಗಾಲದ ಕರಿಛಾಯೆ ಆವರಿಸಿದ್ದು ಸಚಿವರಾಗಿರುವ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆಯವರು ಈ ಬರಗಾಲದ ಪರಿಸ್ಥಿತಿಯಲ್ಲಿ ಕುಡಿಯುವ ನೀರು, ಉದ್ಯೋಗಾವಕಾಶ, ದನಕರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇವುಗಳನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
ಕಾಡುಪ್ರಾಣಿಗಳಿಂದ ಸಮಸ್ಯೆ ಅನುಭವಿಸುತ್ತಿರುವ ಜನರಿಗೆ ಪರಿಹಾರ, ಸೂಕ್ತ ಚಿಕಿತ್ಸೆ, ಒದಗಿಸಲು ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಳ್ಳಬೇಕು.
ತಾಲೂಕಾ ಕೇಂದ್ರ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಕಾಯಿಲೆಗಳಿಗೆ ಸಾಮಾನ್ಯ ಗುಳಿಗೆ, ಚುಚ್ಚುಮದ್ದು ಮೊದಲಾದ ಔಷಧೋಪಚಾರ ಹೊರತುಪಡಿಸಿ ಇತರೆ ಹೆಚ್ಚಿನ ಚಿಕಿತ್ಸೆ ದೊರಕುವಂತಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭಾಜಪ ಸ್ಥಳೀಯ ಪ್ರಮುಖರಾದ ಗಣಪತಿ ಕರಂಜೇಕರ, ಸೋನಪ್ಪಾ ಸುಣಕಾರ, ಅನಿಲ ಮುತ್ನಾಳೆ, ವಾಸುದೇವ ಪೂಜಾರಿ, ನಾರಾಯಣ ಕೆಸರೇಕರ, ನಾಗೇಂದ್ರ ಗೌಡಪ್ಪನವರ, ವಿ.ಎಂ. ಪಾಟೀಲ, ಚನ್ನಬಸವೇಶ್ವರ (ಅಪ್ಪು) ಚರಂತಿಮಠ, ಯಲ್ಲಪ್ಪಾ ಸಾಣಿಕೊಪ್ಪ, ಹನುಮಂತ ತಳವಾರ, ಇಲಿಯಾಸ ಬಳಗಾರ, ರಾಘವೇಂದ್ರ ಚಲವಾದಿ ಮೊದಲಾದವರಿದ್ದರು.

loading...