ಸಮಾಜಮುಖಿ ಶೈಕ್ಷಣಿಕ ಕೋರ್ಸುಗಳಿಗೆ ಆದ್ಯತೆ ಇರಲಿ: ಸೋಮಶೇಖರ

0
27
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ: ಸಮಾಜಕ್ಕೆ ಅನುಕೂಲಕರವಾಗುವ ಶೈಕ್ಷಣಿಕ ಕೋರ್ಸುಗಳನ್ನು ಉಳಿಸಿಕೊಳ್ಳಬೇಕು. ಅಪ್ರಸ್ತುತ ಕೋರ್ಸುಗಳನ್ನು ಮರುಪರಿಷ್ಕರಿಸಬೇಕು ಎಂದು ಹಿರಿಯ ಜಾನಪದ ವಿದ್ವಾಂಸ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರೊ. ಸೋಮಶೇಖರ ಇಮ್ರಾಪುರ ಸಲಹೆ ನೀಡಿದರು. ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ ಒಂದು ದಿದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಜಗತ್ತಿಗೆ ಅನುಗುಣವಾದ ಅಧ್ಯಯನಕ್ಕೆ ಮತ್ತು ಸಂಶೋಧನೆ ಅವಕಾಶ ನೀಡುವ ಮೂಲಕ ವಿಶ್ವವಿದ್ಯಾಲಯ ಸಮಾಜಕ್ಕೆ ತೆರೆದುಕೊಳ್ಳಬೇಕಾಗಿದೆ ಎಂದು ಹೇಳಿದರು. ಶಿಶು ಅವಸ್ಥೆಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಲವಾರು ಅಡೆತಡೆಗಳ ನಡುವೆಯೂ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ವಿಶ್ವವಿದ್ಯಾಲಯವು ತನ್ನದೇ ಆದ ಕಾನೂನನ್ನು ರೂಪಿಸಿಕೊಂಡು ಕಾರ್ಯ ನಿರ್ವಹಿಸುವ ಸಮಯದಲ್ಲಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ, ಅನುದಾನ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ(ಪ್ರ) ಪ್ರೊ. ಡಿ.ಬಿ. ನಾಯಕ ಮಾತನಾಡಿ, ಜ್ಞಾನ ಅಪಾರವಾದದ್ದು, ಅದನ್ನು ಕ್ರಮಿಸುವುದು ಕಷ್ಟ. ಅಜ್ಞಾನ ಮೌಖಿಕವಾಗಿ, ಲಿಖಿತವಾಗಿ ಇರುವುದನ್ನು ಕಾಣಬಹುದು. ಮೌಖಿಕವಾಗಿರುವುದೇ ಜಾನಪದ ಜ್ಞಾನವಾಗಿದೆ. ಪಾರಂಪರಿಕ ಜ್ಞಾನವನ್ನು ಮೂದಲಿಸುವ ದಿನ ಇದ್ದು, ಮುಂದಿನ ದಿನಗಳಲ್ಲಿ ಪಾರಂಪರಿಕ ಜ್ಞಾನ ಸಂಪತ್ತಿನ ಸುವರ್ಣ ಕಾಲ ಬರಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಭಾರತ ಜಾನಪದ ಶಿಸ್ತಿನ ತೊಟ್ಟಲಾಗಿದೆ. ಇದನ್ನು ಉಪಯೋಗಿಸಿಕೊಂಡ ವಿದೇಶಿ ವಿದ್ವಾಂಸರು ನಮ್ಮ ಜಾನಪದವನ್ನು ಅಧ್ಯಯನ ನಡೆಸಿ ಸಿದ್ಧಾಂತಗಳನ್ನು ನೀಡಿದ್ದಾರೆ. ಜಾನಪದ ಜ್ಞಾನವು ಶ್ರೇಷ್ಠವಾದ ವಿಜ್ಞಾನವಾಗಿದೆ. ಅನುಭವದ ಹಿನ್ನೆಲೆಯಲ್ಲಿ ಬಂದ ವಸ್ತು, ಜ್ಞಾನ, ನಂಬಿಕೆ, ಆಚರಣೆ ಇವುಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಪ್ರಮುಖ ಆದ್ಯತೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹೊಂದಿದೆ ಎಂದರು. ಸಕಾಲಿಕ ವಿಷಯಗಳ ಕುರಿತು ಅಧ್ಯಯನಕ್ಕೆ ವಿಶ್ವವಿದ್ಯಾಲಯದಲ್ಲಿ ವಿಫುಲ ಅವಕಾಶಗಳಿದ್ದು, ಸಾಮಾನ್ಯರ ಕುರಿತು ಅಧ್ಯಯನ ಮಾಡುವ ಕಾರ್ಯ ಆಗಬೇಕಾಗಿದೆ. ಅದಕ್ಕೆ ಪೂರಕವಾಗಿ ಗ್ರಾಮ ಚರಿತ್ರೆಕೋಶ ಎಂಬ ಸಂಶೋಧನಾ ಕಾರ್ಯ ನಡೆಯುತ್ತಿದ್ದು, ಜನಪದ ಕಲಾವಿದರ ಚರಿತ್ರೆಯೂ ಸೃಷ್ಠಿಯಾಗುವ ಅವಶ್ಯಕತೆ ಇದೆ ಎಂದು ಅಭಿಲಾಷೆ ವ್ಯಕ್ತಪಡಿಸಿದರು.ತವರುತನವೇ ಜಾನಪದ: ಜಾನಪದ ಅಂತರ್‍ಶಿಸ್ತೀಯ ಅಧ್ಯಯನ ವಿಷಯವಾಗಿ ವಿಚಾರ ಮಂಡಿಸಿದ ಖ್ಯಾತ ಜಾನಪದ ವಿದ್ವಾಂಸರಾದ ಪ್ರೊ. ಹಿ. ಶಿ. ರಾಮಚಂದ್ರೇಗೌಡ ಅವರು ಮಾತನಾಡಿ, ಸ್ಥಳೀಯವಾದ ಜ್ಞಾನ ಸಂಪತ್ತನ್ನು ಜಾನಪದ ಎಂದು ಕರೆಯಲಾಗಿದ್ದು, ಜಾನಪದ ಅಖಂಡವಾದದ್ದು. ಪಾಶ್ಚಾತ್ಯರ ಸಿದ್ಧಾಂತದಿಂದಾಗಿ ಶೈಕ್ಷಣಿಕ ಜ್ಞಾನ ವಿಭಾಗೀಯ ಪದ್ಧತಿಯನ್ನು ರೂಢಿಸಿಕೊಂಡಿದೆ. ಇದರಿಂದಾಗಿ ನೆಲಮೂಲದ ಜಾನಪದ ಜ್ಞಾನ ಶೈಕ್ಷಣಿಕ ಶಿಸ್ತಾಗಿ ದೃಢವಾಗಿ ಬೆಳೆಯಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬುಡಕಟ್ಟುಗಳ ಸಂಸ್ಕøತಿಯೇ ಧರ್ಮ: ಬುಡಕಟ್ಟು ಸಂಸ್ಕøತಿಗಳ ಅನನ್ಯತೆ ಮತ್ತು ಮಹತ್ವ ವಿಷಯವಾಗಿ ಮಾತನಾಡಿದ ಖ್ಯಾತ ವಿದ್ವಾಂಸರೂ ಹಾಗೂ ಕಜಾವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ. ಸಣ್ಣರಾಮ ಅವರು ಮಾತನಾಡಿ ನಾಗರೀಕ ಸಮಾಜದಿಂದ ದೂರ ಇರುವ ಬುಡಕಟ್ಟು ಸಮುದಾಯಗಳ ಸಂಸ್ಕøತಿಯೇ ಅವುಗಳ ಧರ್ಮವಾಗಿದೆ. ಜಗತ್ತಿನಲ್ಲಿ 6300 ಬುಡಕಟ್ಟು ಸಮುದಾಯಗಳಿದ್ದು, ಅದರಂತೆ ಒಟ್ಟು 6300 ಸಂಸ್ಕøತಿಗಳನ್ನು ಕಾಣಬಹುದಾಗಿದೆ. ದಕ್ಷಿಣ ಆಫ್ರಿಕಾದ ಅಮೇಜಾನ್ ಕಾಡುಗಳಲ್ಲಿನ ಬುಡಕಟ್ಟುಗಳನ್ನು ಹೊರತುಪಡಿಸಿ, ಇನ್ನುಳಿದ ಬುಡಕಟ್ಟುಗಳು ನಾಗರೀಕತೆಯ ಹೊಡೆತಕ್ಕೆ ಬಲಿಯಾಗಿ ತಮ್ಮ ಮೂಲ ಸಂಸ್ಕøತಿಯನ್ನು ಕಳೆದುಕೊಂಡಿವೆ ಎಂದು ಕಳವಳ ವ್ಯಕ್ತಿಪಡಿಸಿದರು.ಜಾನಪದ ಮತ್ತು ಮಾನವಶಾಸ್ತ್ರ ಎಂಬ ವಿಷಯವಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಸಿ.ಎ. ಸೋಮಶೇಖರಪ್ಪ ಅವರು ಮಾತನಾಡಿದರು. ಗ್ರಾಮೀಣ ಆರ್ಥಿಕ ರಚನೆ ಹಾಗೂ ನಿರ್ವಹಣೆ ಎಂಬ ವಿಷಯವಾಗಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಸಾಯಬಣ್ಣ ತಳವಾರ ಮಾತನಾಡಿದರು. ಗ್ರಾಮೀಣ ಆರ್ಥಿಕ ಅಭಿವೃದ್ಧಿ ಹಾಗೂ ಮಹಿಳಾ ಕೌಶಲ್ಯ ಎಂಬ ವಿಷಯವಾಗಿ ತುಮಕೂರು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಅಣ್ಣಮ್ಮ ಅವರು ವಿಷಯ ಮಂಡಿಸಿದರು.ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಡಾ. ಕೆ. ಪ್ರೇಮಕುಮಾರ, ರಂಭಾಪುರಿ ಕಾಲೇಜಿನ ಜನಪದ ಕಲಿಕಾ ಕೇಂದ್ರದ ಗೌರವ ಸಂಯೋಜಕರಾದ ಡಾ. ಶ್ರೀಶೈಲ ಹುದ್ದಾರ ಉಪಸ್ಥಿತರಿದ್ದರು. ಮೌಲ್ಯಮಾಪನ ಕುಲಸಚಿವರಾದ ಪ್ರೊ. ಚಂದ್ರಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿಶ್ವವಿದ್ಯಾಲಯದ ಕಲಾವಿದರಾದ ಶ್ರೀ ಮೋಹನ್ ಕುಮಾರ್ ಪ್ರಾರ್ಥಿಸಿದರು. ಯೋಜನಾ ಸಹಾಯಕರಾದ ಡಾ. ಮೇಘನಾಥ ಎ.ಕೆ.ಎನ್ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಕುಲಸಚಿವರಾದ ಶ್ರೀ ಶಹಜಹಾನ್ ಎಚ್. ಮುದಕವಿ ವಂದಿಸಿದರು.

loading...