2 ಸಾವಿರ ಹೆಕ್ಟರ್ ಅರಣ್ಯ ಒತ್ತುವರಿ ತೆರವುಗೊಳಿಸಿದ್ದು ಸಾಧನೆ: ಬೆನಕಟ್ಟಿ

0
30
loading...

ಖಾನಾಪುರ: ಅರಣ್ಯ ಇಲಾಖೆಯಲ್ಲಿ ತಾವು ಕಳೆದ ಮೂರೂವರೆ ದಶಕದ ಅವಧಿಯಲ್ಲಿ ಸಲ್ಲಿಸಿದ ಸೇವೆಯ ಪೈಕಿ ಬೆಳಗಾವಿ ಸಮೀಪದ ಕಾಕತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 2 ಸಾವಿರ ಹೆಕ್ಟರ್ ಅರಣ್ಯ ಪ್ರದೇಶವನ್ನು ಒತ್ತುವರಿಯಿಂದ ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆದದ್ದು ಐತಿಹಾಸಿಕ ಸಾಧನೆಯಾಗಿದೆ ಎಂದು ಕಾಟಗಾಳಿ ವಲಯದ ವಯೋನಿವೃತ್ತಿ ಹೊಂದಿದ ಉಪ ವಲಯ ಅರಣ್ಯ ಅಧಿಕಾರಿ ಮಲ್ಲೇಶಪ್ಪ ಬೆನಕಟ್ಟಿ ಅಭಿಪ್ರಾಯ ಪಟ್ಟರು.
ಪಟ್ಟಣದ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಸೋಮವಾರ ಇಲಾಖೆಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 1982ರಲ್ಲಿ ತಾವು ಅರಣ್ಯ ರಕ್ಷಕರಾಗಿ ಕೆಲಸಕ್ಕೆ ಹಾಜರಾಗಿ ನಾಗರಗಾಳಿ, ಜಾಂಬೋಟಿ, ಕಾಕತಿ ಮತ್ತು ಖಾನಾಪುರ ವಲಯಗಳಲ್ಲಿ ಸೇವೆ ಸಲ್ಲಿಸಿದ್ದು, 1980ರ ದಶಕದಲ್ಲಿ ಜಾಂಬೋಟಿ ಅರಣ್ಯವನ್ನು ಕಳ್ಳಕಾಕರ ದಾಳಿಯಿಂದ ರಕ್ಷಿಸಿದ ದಿನಗಳು ಅವಿಸ್ಮರಣೀಯ. ಆದರೆ ಕಳೆದ ನಾಲ್ಕಾರು ವರ್ಷಗಳ ಹಿಂದೆ ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದಲ್ಲಿ ಅರಣ್ಯ ಒತ್ತುವರಿದಾರರಿಂದ 400 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸುವಲ್ಲಿ ಇಲಾಖೆಯ ಅಧಿಕಾರಿಗಳ ಸಹಕಾರ ದೊರೆಯದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸಿಎಫ್ ಸಿ.ಬಿ ಪಾಟೀಲ ಹಾಗೂ ಖಾನಾಪುರ ವಲಯದ ಆರ್.ಎಫ್.ಒ ಎಸ್.ಎಸ್ ನಿಂಗಾಣಿ ಮಾತನಾಡಿ, ಬೆನಕಟ್ಟಿ ಅವರ ಜೊತೆಯಲ್ಲಿ ತಾವು ಕಳೆದ ಸೇವಾ ಅವಧಿಯ ದಿನಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಆರ್.ಎಫ್.ಒಗಳಾದ ಬಸವರಾಜ ವಾಳದ, ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ, ರೈತ ಮುಖಂಡ ಮಹಾಂತೇಶ ರಾಹುತ, ಪಿಡಿಒ ಆನಂದ ಬಿಂಗೆ, ನಿವೃತ್ತ ಅರಣ್ಯ ಅಧಿಕಾರಿ ಅನಂತ ಶಿಂಪಿ ಮತ್ತಿತರರು ಮಾತನಾಡಿದರು. ಸ್ಥಳೀಯ ಲಯನ್ಸ್ ಕ್ಲಬ್, ಮಕರಂದ ಸಂಘಟನೆ, ಸಾ ಮಿಲ್ ಮಾಲೀಕರ ಸಂಘ, ಗರ್ಲಗುಂಜಿ ಗ್ರಾಮಸ್ಥರು ಮತ್ತಿತರರು ಬೆನಕಟ್ಟಿ ಅವರನ್ನು ಸತ್ಕರಿಸಿ ನಿವೃತ್ತಿ ಜೀವನಕ್ಕೆ ಶುಭ ಕೋರಿದರು. ಎಚ್.ಎ ಶೇಖ್. ಟಿ.ಎಂ ದೇವಾಡಿಗ ಎಂ.ಬಿ ಮುರಗೋಡ, ಲಕ್ಷ್ಮಣ ವಾಳದ, ಮಹೇಶ ಬ್ಯಾಕೂಡ, ಎಂ.ಜಿ ನಂದೆಪ್ಪಗೋಳ, ಶಿವಾನಂದ ಅವರಾದಿ ಮತ್ತಿತರರು ಇದ್ದರು.

loading...