ಅರಣ್ಯ ಇಲಾಖೆಯ ನೌಕರರಿಗೆ ಸೌಲಭ್ಯಗಳ ಕೊರತೆ

0
31
loading...

ಖಾನಾಪುರ: ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಪ್ರಾಣಿಗಳ ಬೇಟೆ, ಮರಗಳ್ಳತನ ಪ್ರಕರಣಗಳನ್ನು ತಡೆಯಲು ಪ್ರಾಣ ಪಣವಿಟ್ಟು ಹೋರಾಡುವ ಪ್ರಸಂಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ಇಲಾಖೆಯಲ್ಲಿರುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸದಿರುವುದು ಕಳವಳಕಾರಿ ಸಂಗತಿ ಎಂದು ಖಾನಾಪುರ ಉಪ ವಲಯದ ಎಸಿಎಫ್ ಸಿ.ಬಿ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಅರಣ್ಯ ಇಲಾಖೆಯ ಕಚೇರಿಗಳ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು, ಜೀವದ ಹಂಗು ತೊರೆದು ಅಕ್ರಮಗಳ ವಿರುದ್ಧ ಹೋರಾಡುವ ಇಲಾಖೆಯವರಿಗೆ ಅತ್ಯಾಧುನಿಕ ಸೌಲಭ್ಯಗಳ ಕೊರತೆ ಎದುರಾಗಿದೆ. ಖಾನಾಪುರ ಅರಣ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ 24 ಅಕ್ರಮ ಕಳ್ಳಬೇಟೆ ನಿಯಂತ್ರಣ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಅರಣ್ಯ ಇಲಾಖೆಯ ಒಂದು ಉಪ ವಲಯ ವ್ಯಾಪ್ತಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಳ್ಳಬೇಟೆ ತಡೆ ತಾಣಗಳನ್ನು ನಿರ್ಮಿಸಿರುವುದು ಇಡೀ ರಾಜ್ಯದಲ್ಲೇ ಇದೇ ಮೊದಲಾಗಿದ್ದು ನಿಯಂತ್ರಣ ಕೇಂದ್ರಗಳ ನಿರ್ಮಾಣದಿಂದ ಅಕ್ರಮ ಅರಣ್ಯ ಪ್ರವೇಶ, ಅಕ್ರಮ ಗಣಿಗಾರಿಕೆ, ಮರಗಳ್ಳತನ, ಕಾಡು ಪ್ರಾಣಿಗಳ ಬೇಟೆ ಮತ್ತಿತರ ವನ್ಯ ಸಂಪತ್ತು ಹಾಗೂ ವನ್ಯಜೀವಿಗಳಿಗೆ ತೊಂದರೆಯಾಗುವ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಂತಾಗಿದೆ. ಅತೀ ಹೆಚ್ಚು ಕಳ್ಳಬೇಟೆ ತಾಣಗಳನ್ನು ಹೊಂದಿರುವ ಕಾರಣದಿಂದ ಖಾನಾಪುರ ಅರಣ್ಯದಲ್ಲಿನ ಅಕ್ರಮಗಳು ಒಂದು ಹಂತದಲ್ಲಿನ ಹತೋಟಿಗೆ ಬಂದಿದ್ದು, ಇವುಗಳ ಬಗ್ಗೆ ಅಧ್ಯಯನ ನಡೆಸಲು ದೇಶದ ವಿವಿಧ ಭಾಗಗಳ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡುತ್ತಿರುವುದು ತಾಲೂಕಿನ ಪಾಲಿಗೆ ಹೆಮ್ಮೆಯ ವಿಷಯ ಎಂದರು.
ಹುತಾತ್ಮ ದಿನಾಚರಣೆಯ ಅಂಗವಾಗಿ ಉಪ ವಿಭಾಗದಲ್ಲಿ ಸೇವೆ ಸಲ್ಲಿಸುವಾಗಲೇ ಮೃತಪಟ್ಟ ಗೋಲಿಹಳ್ಳಿ ಆರ್.ಎಫ್.ಒ ರಂಗನಗೌಡ, ಅರಣ್ಯ ರಕ್ಷಕರಾದ ಎಸ್ ಐ ಬಸರಿಕಟ್ಟಿ ಮತ್ತು ಶೀಮಾವ್ ರುಜಾರಿಯೋ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಲೋಂಡಾ ಆರ್.ಎಫ್.ಒ ಬಸವರಾಜ ವಾಳದ, ನಿವೃತ್ತ ಅಧಿಕಾರಿಗಳಾದ ಎಂ.ಜಿ ಬೆನಕಟ್ಟಿ, ಅನಂತ ಶಿಂಪಿ, ದಾಲ್ಮೇತ ಸೇರಿದಂತೆ ಖಾನಾಪುರ, ಕಣಕುಂಬಿ, ಲೋಂಡಾ ಮತ್ತು ಭೀಮಗಡ ವಲಯಗಳ ಅರಣ್ಯ ಅಧಿಕಾರಿಗಳು, ಉಪ ವಲಯ ಅರಣ್ಯ ಅಧಿಕಾರಿಗಳು, ಅರಣ್ಯ ರಕ್ಷಕರು, ವೀಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

 

loading...