ಖಾನಾಪುರದಲ್ಲಿ ಆರೋಹಣ ಪಶು ಸುರಕ್ಷಾ ಕೇಂದ್ರ ಉದ್ಘಾಟನೆ

0
36
loading...

ಖಾನಾಪುರ: ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌, ಬೆಳಗಾವಿಯ ಆರೋಹಣ ಕೃಷಿ ಸೌಲಭ್ಯ ಸಂಸ್ಥೆ ಮತ್ತು ಪಶು ಸಂಗೋಪನಾ ಇಲಾಖೆಗಳ ಸಹಯೋಗದಲ್ಲಿ ಪಟ್ಟಣದ ರುಮೇವಾಡಿ ರಸ್ತೆಯಲ್ಲಿ ಆರೋಹಣ ಪಶು ಸುರಕ್ಷಾ ಕೇಂದ್ರವನ್ನು ಈಚೆಗೆ ಉದ್ಘಾಟಿಸಲಾಯಿತು.
ತೋಪಿನಕಟ್ಟಿ ಸಿದ್ಧಾಶ್ರಮದ ಗುರುದೇವ ಜಂಗ್ಲಿ ಬಾಬಾ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ ಮತ್ತು ನಿವೃತ್ತ ಪಶು ಸಂಗೋಪನಾ ಅಧಿಕಾರಿ ಜಿ.ಎನ್‌ ಕುಲಕರ್ಣಿ ನೂತನ ಪಶು ಸುರಕ್ಷಾ ಕೇಂದ್ರವನ್ನು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಆರೋಹಣ ಸಂಸ್ಥೆಯ ಸಂಚಾಲಕ ದೀಪಕ ವಾಳ್ವೆ, ಸಂಸ್ಥೆ ಪಶು ಸಂಗೋಪನೆಯಲ್ಲಿ ನಿರತ ರೈತರಿಗೆ 24*7 ಗಂಟೆಗಳ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದು, ಜಾನುವಾರುಗಳನ್ನು ಹೊಂದಿದ ರೈತ ದಂಪತಿಗೆ ಉಚಿತ ಅಪಘಾತ ವಿಮೆ, ದನದ ಕೊಟ್ಟಿಗೆಯ ವಿಮೆ ಮತ್ತು ದನ-ಕರುಗಳ ಆರೋಗ್ಯ ಮತ್ತು ಅಪಘಾತ ವಿಮೆಯ ಸುರಕ್ಷತೆಯನ್ನು ಒದಗಿಸಲಿದೆ. ಹಾಲಿನ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಳಕ್ಕೆ ವಿಶೇಷ ಪೋಷಕಾಂಶಗಳನ್ನು ನೀಡುವ ಮೂಲಕ ಪಶುಗಳ ಸಂತತಿ ವೃದ್ಧಿಗೆ ಶ್ರಮಿಸಲಿದೆ ಎಂದು ಮಾಹಿತಿ ನೀಡಿದರು.
ಆರೋಹಣ ಸಂಸ್ಥೆಯ ಎಂ.ಡಿ ದೇವಿಪ್ರಸಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲೇ ಮೊದಲ ಬಾರಿ ಉತ್ತರ ಕರ್ನಾಟಕದ ಖಾನಾಪುರ ತಾಲೂಕಿನಲ್ಲಿ ತಮ್ಮ ಸಂಸ್ಥೆ ಪಶು ಸುರಕ್ಷಾ ಕವಚ ಎಂಬ ಯೋಜನೆಯನ್ನು ಪರಿಚಯಿಸುತ್ತಿದ್ದು, ಮೊದಲ ಹಂತದಲ್ಲಿ 500 ಜಾನುವಾರಿಗಳನ್ನು ನೊಂದಣಿ ಮಾಡಿಸಿಕೊಂಡು ತಾಲೂಕಿನ ಹಾಲು ಉತ್ಪಾದಕರಿಗೆ ಲಸಿಕೆ, ರೋಗಪ್ರತಿಬಂಧಕ ಉಪಚಾರ ಹಾಗೂ ಪಶುವೈದ್ಯಕೀಯ ಸೇವೆಯನ್ನು ನೀಡಲಾಗುವುದು. ರೈತರು ತಮ್ಮ ಹೆಸರು ನೊಂದಾಯಿಸಲು ಮತ್ತು ಪಶುವೈದ್ಯಕೀಯ ಚಿಕಿತ್ಸೆ ಪಡೆಯಲು ಮೊ.7022601152 ಸಂಖ್ಯೆಗೆ ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಅರುಣ ಮನೇರಿಕರ, ಅನೀಲ ಬೇಡರೆ ಸೇರಿದಂತೆ ವಿವಿಧ ಗ್ರಾಮಗಳ ರೈತರು, ಆರೋಹಣ ಸಂಸ್ಥೆಯ ಸಿಬ್ಬಂದಿ ಇದ್ದರು. ಅಮೋಲ ಬೇಡರೆ ಸ್ವಾಗತಿಸಿದರು. ಅರುಣಾಪ್ರಸಾದ ವಂದಿಸಿದರು.

loading...