ನಿಡಗುಂದಿ ತಾಂಡಾದಲ್ಲಿ ಅಬಕಾರಿ ಗ್ರಾಮಸಭೆ

0
63
loading...

ನಿಡಗುಂದಿ: ನಿಡಗುಂದಿ ತಾಂಡಾದಲ್ಲಿ ಶುಕ್ರವಾರ ಅಬಕಾರಿ ಇಲಾಖೆ ವತಿಯಿಂದ ಉಪ ಅೀಕ್ಷಕ ಜಗದೀಶ ಇನಾಮಾದಾರ ನೇತೃತ್ವದಲ್ಲಿ ಅಬಕಾರಿ ಗ್ರಾಮಸಭೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಇನಾಮದಾರ, ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುವುದು, ಮಾರಾಟ ಮಾಡುವುದು, ಸಂಗ್ರಹಣೆ ಮಾಡುವುದು ಶಿಕ್ಷಾರ್ಹ ಅಪರಾಧ. ಇಂತಹ ಅಕ್ರಮಗಳು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡುವುದು ನಾಗರಿಕರ ಜವಾಬ್ದಾರಿ ಎಂದರು.
ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಆರೋಗ್ಯ ಮತ್ತು ಕುಟುಂಬದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸ್ಥಳದಲ್ಲಿದ್ದ ಜನರಿಗೆ ಮನಮುಟ್ಟುವಂತೆ ತಿಳಿಸಿದರು. ತಾಂಡಾ ಅಭಿವೃದ್ಧಿ ನಿಗಮ ಮತ್ತು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಪಡೆದುಕೊಂಡು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.
ಬಸವನಬಾಗೇವಾಡಿ ಅಬಕಾರಿ ನಿರೀಕ್ಷಕ ರಾಜು ಗೊಂಡೆ ಮಾತನಾಡಿ, ಅಬಕಾರಿ ಅಕ್ರಮಗಳು ಸಾಮಾಜಿಕ ಪಿಡುಗುಗಳಾಗಿದ್ದು ಇವುಗಳನ್ನು ತಡೆಯಲು ಮತ್ತು ಮಟ್ಟ ಹಾಕಲು ಇಲಾಖೆಯಿಂದ ನಿರಂತರ ಗ್ರಾಮಸಭೆಗಳನ್ನು ಏರ್ಪಡಿಸುವುದರ ಮೂಲಕ ತಿಳುವಳಿಕೆ ನೀಡಲಾಗುತ್ತಿದೆ. ಇಂತಹ ಅಕ್ರಮಗಳಲ್ಲಿ ತೊಡಗಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹೈನುಗಾರಿಕೆ, ಸ್ವಯಂ ಉದ್ಯೋಗ ಮಾಡಬಯಸುವವರಿಗೆ ಇಲಾಖೆಯಿಂದ ಸರಕಾರಕ್ಕೆ ಮಾಹಿತಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯ ನಾನಾ ವಲಯಗಳ ಅಬಕಾರಿ ನಿರೀಕ್ಷಕರಾದ ಆರ್.ಜಿ.ಹಿರೇಮಠ, ಜಿ.ಎಸ್.ಪಾಟೀಲ, ಎಸ್.ಎಸ್.ಹಂದ್ರಾಳ, ಪಿ.ಎಸ್.ಪೀಡಕರ್, ಎಂ.ಡಿ.ಕಬಾಡೆ, ಬಿ.ಎಸ್.ಕಿತ್ತೂರ, ಎಂ.ಬಿ.ಹೊಸಮನಿ, ಸಿಬ್ಬಂದಿ, ಹಾಗೂ ತಾಂಡಾ ನಿವಾಸಿಗಳು ಇದ್ದರು.

loading...