ಪೊಲೀಸ್‌ ದೌರ್ಜನ್ಯ ತಡೆಗಟ್ಟುವಂತೆ ಮನವಿ

0
28
loading...

ಭಟ್ಕಳ: ಪುರಸಭೆಯಲ್ಲಿ ನಡೆದ ಘಟನೆಯಲ್ಲಿ ಮೃತನಾಗಿರುವ ರಾಮಚಂದ್ರ ನಾಯ್ಕ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಧನ ನೀಡಬೇಕು ಹಾಗೂ ಭಟ್ಕಳದಲ್ಲಿ ನಾಮಧಾರಿ ಯುವಕರ ಮೇಲೆ ಪೊಲೀಸ್‌ ದೌರ್ಜನ್ಯವಾಗುತ್ತಿದ್ದು, ಕೂಡಲೇ ದೌರ್ಜನ್ಯವೆಸಗುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಟ್ಕಳ ನಾಮಧಾರಿ ಅಭಿವೃದ್ಧಿ ಸಂಘದ ವತಿಯಿಂದ ಸಹಾಯಕ ಕಮೀಷನರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಭಟ್ಕಳ ಪುರಸಭಾ ಅಂಗಡಿ ಮಳಿಗೆಯ ಹರಾಜಿನಲ್ಲಿ ತನಗೆ ಅನ್ಯಾಯವಾಗಿದೆ ಎಂದು ನಾಮಧಾರಿ ಸಮಾಜದ ರಾಮಚಂದರ ನಾಯ್ಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಸಿದ ಸುದ್ಧಿ ತಿಳಿದ ಕೂಡಲೇ ಸಾರ್ವಜನಿಕರು ಪುರಸಭೆಯ ಮುಂದೆ ಜಮಾಯಿಸಿದ್ದು, ಅದರಲ್ಲಿ ಉದ್ರಿಕ್ತ ಕೆಲವರು ಪುರಸಭಾ ಕಟ್ಟಡಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಇದನ್ನೇ ದೊಡ್ಡದಾಗಿ ಪರಿಗಣಿಸಿದ ಪೊಲೀಸರು ಹಾಗೂ ಜಿಲ್ಲಾಡಳಿತ ನಾಮಧಾರಿ ಸಮಾಜದ ಯುವಕರನ್ನೇ ಗುರಿಯಾಗಿಸಿ ಅವರ ದೊಂಬಿ , ದರೋಡೆಯಂತಹ ಪ್ರಕರಣಗಳನ್ನು ದಾಖಲಿಸಿ, ಸಮಾಜದ ಯುವಕರ ಮನೆಗಳಿಗೆ ಮಧ್ಯರಾತ್ರಿಯಲ್ಲಿ ನುಗ್ಗಿ, ಹೆಂಗಸರು ಮಕ್ಕಳು ಎಂದು ನೋಡದೇ ಬೈದು ಅಮಾನುಷವಾಗಿ ವರ್ತಿಸಿ, ಯುವಕರನ್ನು ಬಂಧಿಸುತ್ತಿದ್ದಾರೆ. ಆದಿನ ಸ್ಥಳದಲ್ಲಿ ಇದ್ದಿದ್ದನ್ನೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸರು ಪರಿಗಣಿಸುತ್ತಿದ್ದು, ಪೊಲೀಸರ ದೌರ್ಜನ್ಯಕ್ಕೆ ಹೆದರಿ ನಮ್ಮ ಸಮಾಜದ 500 ಕ್ಕೂ ಹೆಚ್ಚು ಯುವಕರು ಮನೆ ಬಿಟ್ಟು ಉಳಿಯಬೇಕಾದ ಪರಿಸ್ಥಿತಿ ಬಂದಿದೆ. ಅಂದು ಪುರಸಭೆಯ ಎದುರು ಪ್ರತಿಭಟನೆಯಲ್ಲಿ ಎಲ್ಲಾ ಸಮಾಜದ ಸಾರ್ವಜನಿಕರು, ಅಂಗಡಿಕಾರರು ಭಾಗವಹಿಸಿದ್ದರೂ ಸಹ ಪೊಲೀಸರು ಮತ್ತು ಜಿಲ್ಲಾಡಳಿತ ನಾಮಧಾರಿ ಸಮಾಜದ ಯುವಕರನ್ನೇ ಗುರಿಯಾಗಿಸಿ ಪ್ರಕರಣಗಳನ್ನು ದಾಖಲಿಸಿ ನಮ್ಮ ಸಮಾಜದ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸುತ್ತಿದ್ದು, ಇದು ಕಂಡನೀಯವಾಗಿದೆ. ಆದ್ದರಿಂದ ಪೊಲೀಸರು, ಜಿಲ್ಲಾಡಳಿತ ನಮ್ಮ ಸಮಾಜದ ಯುವಕರ ಮೇಲೆ ಹಾಕಿರುವ ದರೋಡೆಯಂತಹ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದೇ ಇದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮೃತ ರಾಮಚಂದ್ರ ನಾಯ್ಕ ಅವರ ಕುಟುಂಬ ನಿರ್ವಹಯಣೆಗಾಗಿ ಅತೀ ಹೆಚ್ಚಿನ ಪರಿಹಾರ ಧನವನ್ನು ಮಂಜೂರು ಮಾಡಿಸುವ ವ್ಯವಸ್ಥೆ ಆಗಬೇಕು ಎಂದು ರಾಜ್ಯಪಾಲರಿಗೆ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.
ಸಹಾಯಕ ಕಮೀಷನರ್‌ ಅನುಪಸ್ಥಿತಿಯಲ್ಲಿ ಕಚೇರಿ ವ್ಯವಸ್ಥಾಪಕರು ಮನವಿ ಸ್ವೀಕರಿಸಿದರು. ಮನವಿ ನೀಡುವ ಸಂದರ್ಭದಲ್ಲಿ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್‌.ನಾಯ್ಕ, ಉಪಾಧ್ಯಕ್ಷ ಮೋಹನ ನಾಯ್ಕ, ಕಾರ್ಯದರ್ಶಿ ರಾಜೇಸ ನಾಯ್ಕ, ಮುಖಂಡರಾದ ಸತೀಶಕುಮಾರ ನಾಯ್ಕ, ಬಾಬು ಮಾಸ್ಟರ್‌, ಶ್ರೀಧರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

loading...