ಅತಿಕ್ರಮಣ ಕಟ್ಟಡ ನಿರ್ಮಾಣವಾದರೂ ಕ್ರಮಕೈಗೊಳ್ಳದ ನಗರ ಸಭೆ

0
21
loading...

ದಾಂಡೇಲಿ:- ನಗರದ ಬಹುತೇಕ ಕಡೆಗಳಲ್ಲಿ ಅತಿಕ್ರಮಣ ಜಾಗ ಹಾಗೂ ಅತಿಕ್ರಮಣ ಕಟ್ಟಡ ನಿರ್ಮಾಣವಾದರೂ ಕಣ್ಮುಚ್ಚಿ ಕುಳಿತಿರುವ ನಗರ ಸಭೆ ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ನಗರದ ಜೆ.ಎನ್‌.ರಸ್ತೆಯ ಅಕ್ಷಯ ಬಾರ್‌ ಎದುರಿಗೆ ಪುಟ್‌ ಪಾತಿನಲ್ಲಿ ಇಟ್ಟಿದ್ದ ಗಿರೀಶ ಎಂಬ ಬಡ ಯುವಕನ ತಳ್ಳುವ ಪಾಸ್ಟ್‌ ಪುಡ್‌ ಗಾಡಿಯನ್ನು ತೆಗೆಯುವಂತೆ ಬಲವಂತ ಮಾಡಿದ ಹಿನ್ನಲೆಯಲ್ಲಿ ತಳ್ಳುವ ಗಾಡಿಯನ್ನು ಅನಿವಾರ್ಯವಾಗಿ ತೆರವುಗೊಳಿಸಿ ಬೆವರಿಳಿಸಿ ದುಡಿಯುವ ಕಾಯಕಕ್ಕೆ ಸಂಕಷ್ಟ ತಂದೊಡ್ಡಿದೆ.
ನಗರದ ಬಹುತೇಕ ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಅತಿಕ್ರಮಣ ಹಾಗೂ ಅತಿಕ್ರಮಣ ಕಟ್ಟಡ ನಿರ್ಮಾಣವಾಗುತ್ತಿದ್ದರೂ, ಯಾವುದೇ ರೀತಿಯ ಕ್ರಮ ಕೈಗೊಳ್ಳದ ನಗರ ಸಬೆ ಆಗೊಮ್ಮೆ, ಈಗೊಮ್ಮೆ ಎಂಬಂತೆ ಅತಿಕ್ರಮಿತ ಜಾಗ ಮತ್ತು ಅತಿಕ್ರಮಿತ ಕಟ್ಟಡದ ಕಡೆ ಭೇಟಿ ನೀಡಿ ತಕ್ಕಮಟ್ಟಿಗೆ ಅತಿಕ್ರಮಣವನ್ನು ತೆರವುಗೊಳಿಸಿ ನಗರ ಜನತೆಗೆ ಮಂಕುಬೂದಿ ಎರಚಿದ್ದು ಮಾತ್ರ ಸುಳ್ಳಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ನಡೆದಿರುವ ಅತಿಕ್ರಮಣವನ್ನು ತಡೆಯಲಾಗದ ನಗರ ಸಭೆಗೆ ತಳ್ಳುವ ಗಾಡಿಯನ್ನು ತೆರವುಗೊಳಿಸಲು ಮುಂದಾಗಿರುವುದ ಮರ್ಮವೇನು ಎಂಬ ಚರ್ಚೆ ನಾಗರೀಕರದ್ದಾಗಿದೆ.
ಒಟ್ಟಿನಲ್ಲಿ ಈ ಬಾರಿಯ ನಗರ ಸಭೆಯ ಆಡಳಿತದ ಎಡರನೇ ಅವಧಿಯಲ್ಲಿ ಆಗಿರುವ ಮತ್ತು ಆಗುತ್ತಿರುವ ಅತಿಕ್ರಮಣ ಕಟ್ಟಡಗಳ ನಿರ್ಮಾಣ ಕಾರ್ಯ ನಗರಾಡಳಿತದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನು ಎಂಬಂತೆ ವರ್ತಿಸುತ್ತಿರುವ ನಗರ ಸಭೆಯ ಆಡಳಿತ ವೈಖರಿಯಿಂದ ನಗರದ ಜನತೆ ರೋಸಿ ಹೋಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಆಗಮಿಸುವ ಸಂದರ್ಭ ನಗರಾಡಳಿತದ ಆಡಳಿಯ ವೈಫಲ್ಯದ ಬಗ್ಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸಿ ದೂರು ನೀಡುವ ಚಿಂತನೆ ಸದ್ಯ ನಡೆಯುತ್ತಿದೆ. ಒಟ್ಟಿನಲ್ಲಿ ಉಪ್ಪು ತಿಂದವ ನೀರು ಕುಡಿಯಲೆಬೇಕೆಂಬ ಮಾತು ಸದ್ಯಕ್ಕೆ ನಗರದಲ್ಲಿ ಪ್ರಚಲಿತದಲ್ಲಿದೆ.

loading...