ಅ.7 ರಂದು ಬೆಂಗಳೂರಲ್ಲಿ ಸ್ಮಾರ್ಟ್ ಸಿಟಿ ಸಭೆ

0
19
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:4 ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದಲ್ಲಿ ಬೆಳಗಾವಿ ಮಹಾನಗರ ಆಯ್ಕೆಯಾದರೂ ಕಾಲಮಿತಿಯಲ್ಲಿ ಕಾಮಗಾರಿಗಳು ಪ್ರಾರಂಭವಾಗುತ್ತಿಲ್ಲ ಎಂದು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಈ ಕುರಿತು ತನಿಖೆ ನಡೆಸುವಂತೆ ಪತ್ರ ಬರೆದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿಗೆ ಪತ್ರ ಬರೆದು ಅಕ್ಟೋಬರ 7 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಭೆಗೆ ಆಗಮಿಸುವಂತೆ ತಿಳಿಸಿದ್ದಾರೆ.
ಕಳೆದ ಫೆ. 2016ರಲ್ಲಿ ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದಲ್ಲಿ ಬೆಳಗಾವಿ ಮಹಾನಗರ ಆಯ್ಕೆಯಾಗಿತ್ತು. ತದನಂತರ 25 ಜೂನ್ 2016ರಲ್ಲಿ ಅಧಿಕೃತವಾಗಿ ಸ್ಮಾರ್ಟ್ ಸಿಟಿ ಕಚೇರಿ ಪ್ರಾರಂಭವಾದರೂ ಕಾಲಮಿತಿಯಲ್ಲಿ ಕಾಮಗಾರಿಗಳು ಪ್ರಾರಂಭವಾಗದೆ ಇರುವುದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಸ್ಮಾರ್ಟ್ ಸಿಟಿ ಆಯ್ಕೆಯಾಗುವ ಮುನ್ನ ಸಾರ್ವಜನಿಕರ ಸಲಹೆಗಳನ್ನು ಪಡೆದ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ನಂತರ ಸಾರ್ವಜನಿಕರನ್ನು ಕಡೆಗಣಿಸುತ್ತ ಬಂದಿತ್ತು. ಸಾರ್ವಜನಿಕರ ಸಲಹೆ ಪಡೆಯದೆ ತಮಗೆ ಬೇಕಾದ ರೀತಿಯಲ್ಲಿ ಯೋಜನೆಯ ರೂಪರೇಷೆಗಳನ್ನು ಮಾಡಿಕೊಂಡು ಹೊರಟಿದ್ದಾರೆ. ಪಿಎಮ್‍ಸಿ ಕಂಪನಿಯ ಸಿಬ್ಬಂದಿಗಳಿಗೆ ಸ್ಮಾರ್ಟ್ ಸಿಟಿ ಕುರಿತು ಜ್ಞಾನವಿಲ್ಲದೆ ಕಾಮಗಾರಿಗಳನ್ನು ರೂಪಿಸುತ್ತಿದ್ದಾರೆ ಎಂದು ದೂರಿದ್ದರು.
ಬೆಳಗಾವಿ ಸ್ಮಾರ್ಟ್ ಸಿಟಿಯ ಕಚೇರಿಯಿಂದ ಪ್ರಥಮ ನೂರು ಕಾಮಗಾರಿಗಳ ರೂಪರೇಷೆಗಳಾದ ಬೆಳಗಾವಿ ಕೋಟೆ, ಹೆರಟೇಜ್ ಪಾರ್ಕ ಹಾಗೂ ಸ್ಮಾರ್ಟ್ ರಸ್ತೆಯ ಬಗ್ಗೆ ಪ್ರೊಫೆಶನಲ್ಸ್ ಫೋರಂನ ಸದಸ್ಯರೊಂದಿಗೆ ನಡೆಸಿದ ಮೊದಲ ಸಲಹೆ ಪಡೆಯುವ ಕಾರ್ಯಾಗಾರದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಪಿಎಮ್‍ಸಿ ಕಂಪನಿಯ ಸಿಬ್ಬಂದಿಗಳು ಬೆಳಗಾವಿ ಕೋಟೆ ಮತ್ತು ಬೆಳಗಾವಿ ನಗರದ ಇತಿಹಾಸ, ಕಲೆ ಮತ್ತು ಸಂಸ್ಕøತಿ ಅಧ್ಯಯನ ನಡೆಸದೆ ರೂಪರೇಷೆ ನಿರ್ಮಾಣ ಮಾಡಿದ್ದರು. ಇದಕ್ಕೆ ಟೋಪಣ್ಣವರ ವಿರೋಧ ವ್ಯಕ್ತಪಡೆಸಿದ್ದರು.
ಇದೆ ಕಾರಣವನ್ನು ಮುಂದೆ ಇಟ್ಟುಕೊಂಡು ಕಮಾಡೆಂಟ್ ಕಂಟ್ರೊಲ್ ಸೆಂಟರ್ ಟೆಂಡರ್ ಕರೆಯುವ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಸಾರ್ವಜನಿಕರ ಸಲಹೆ ಕೇಳದೆ ಟೆಂಡರ್ ಕರೆದಿದ್ದಾರೆ ಎಂದು ಟೋಪಣ್ಣವರ ಪತ್ರದಲ್ಲಿ ದೂರಿದ್ದರು.
ಈ ಕುರಿತು ಸ್ಮಾರ್ಟ್ ಸಿಟಿಯ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಸಾರ್ವಜನಿಕರಿಗೆ ಅಷ್ಟೊಂದು ತಾಂತ್ರಿಕ ಜ್ಞಾನವಿಲ್ಲವೆಂದು ಸಾರ್ವಜನಿಕರಿಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದ್ದರು. ಇದಕ್ಕೆ ಉತ್ತರಿಸಿದ ಬೆಳಗಾವಿ ಸ್ಮಾರ್ಟ್ ಸಿಟಿ ಎಂ.ಡಿ. ಎಲ್ಲವು ಸರಿಯಿದೆ ಎಂದು ಹೇಳಿದ್ದರು. ಸದ್ಯ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ ಹಾಗೂ ಬೆಳಗಾವಿ ಸ್ಮಾರ್ಟ್ ಸಿಟಿ ಎಂ.ಡಿ ಮತ್ತು ಸ್ಮಾರ್ಟ್ ಸಿಟಿಯ ಹಿರಿಯ ಅಧಿಕಾರಿ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯ ಎಂಡಿ ಅವರೊಂದಿಗೆ ಅಕ್ಟೋಬರ 7 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಮಹತ್ವದ ಸಭೆ ಕರೆದಿದ್ದಾರೆ.

loading...