ಖಾನಾಪುರದಲ್ಲಿ ವನ್ಯಜೀವಿ ಕೊಂಬು ಮತ್ತು ಚರ್ಮ ಮಾರಾಟಗಾರನ ಬಂಧನ

0
26
loading...

ಖಾನಾಪುರ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಬಾಳುವ ಕೃಷ್ಣಮೃಗ, ಜಿಂಕೆ, ಕಾಡುಕುರಿಯ ಚರ್ಮ ಮತ್ತು ಕಾಡುಕೋಣದ ಕೋಡುಗಳನ್ನು (ಕೊಂಬುಗಳನ್ನು) ಅಕ್ರಮವಾಗಿ ಸಾಗಿಸುತ್ತಿದ್ದ ಮಾರಾಟಗಾರನನ್ನು ಪತ್ತೆ ಹಚ್ಚಿದ ಸಿಐಡಿ ಪೊಲೀಸರು ಮತ್ತು ಅರಣ್ಯ ಸಂಚಾರಿ ಘಟಕದ ತಂಡ ಆತನನ್ನು ಮಾಲುಸಮೇತ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆಯನ್ನು ಕೈಗೊಂಡ ಬೆಂಗಳೂರಿನ ಸಿಐಡಿ ಪೊಲೀಸರು, ದಾಂಡೇಲಿ ಮತ್ತು ಬೆಳಗಾವಿ ಘಟಕಗಳ ಅರಣ್ಯ ಸಂಚಾರಿದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಪಟ್ಟಣದ ವರ್ದೇ ಪೆಟ್ರೊಲ್‌ ಬಂಕ್‌ ಬಳಿ ವನ್ಯಜೀವಿಗಳ ಚರ್ಮ ಮತ್ತು ಕೋಡು (ಕೊಂಬು) ಸಾಗಿಸುತ್ತಿದ್ದ ಪಟ್ಟಣದ ಮೇದಾರ ಗಲ್ಲಿಯ ನಿವಾಸಿ ಶ್ರೀಧರ ಅಂಕಲಗಿ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿಗಳ ಅಕ್ರಮ ಬೇಟೆ ಮತ್ತು ಮಾರಾಟ ಯತ್ನದ ದೂರು ದಾಖಲಿಸಲಾಗಿದ್ದು, ಕಾರ್ಯಾಚರಣೆಯ ವೇಳೆ ವಶಕ್ಕೆ ಪಡೆದ ವಸ್ತುಗಳನ್ನು ಖಾನಾಪುರ ಉಪವಲಯದ ಎಸಿಎಫ್‌ ಸಿ.ಬಿ ಪಾಟೀಲ ಅವರ ವಶಕ್ಕೆ ಒಪ್ಪಿಸಲಾಗಿದೆ.
ಸಿಐಡಿ ಪೊಲೀಸ್‌ ಅರಣ್ಯ ಸಂಚಾರಿ ಘಟಕದ ಡಿಎಸ್‌ಪಿ ಬಲರಾಮೇಗೌಡ, ಇನ್ಸಪೆಕ್ಟರ್‌ ಪ್ರಮೋದಕುಮಾರ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಪಿಎಸ್‌ಐ ರಾಮಮೂರ್ತಿ ಸಿಬ್ಬಂದಿ ಬಿ.ಎಫ್‌ ದೋಡ್ಡಿ, ಎಲ್‌.ಎಂ ಸಾರಾಪುರಿ, ಎಂ.ಬಿ ಅಕ್ಕೋಳೆ, ಆರ್‌.ಬಿ ಯರನಾಳ ಮತ್ತಿತರರು ಇದ್ದರು.

loading...