ಗ್ರಾ.ಪಂ ಸಿಬ್ಬಂದಿಗೆ ಹೆಚ್ಚುವರಿ ಭಾರ ನೀಡದಂತೆ ಮನವಿ

0
8
loading...

ಹಳಿಯಾಳ:- ಗ್ರಾಮ ಪಂಚಾಯತ ಸಿಬ್ಬಂದಿಗಳಿಗೆ ಬೇರೆ ಇಲಾಖೆಯ ಕೆಲಸಗಳಿಗೆ ನೇಮಿಸದಂತೆ ಹಳಿಯಾಳ ತಾಲೂಕಿನ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಾಲೂಕಾ ಕಾರ್ಯಾಲಯಕ್ಕೆ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿ ಪತ್ರವನ್ನು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ್‌ ಯಕ್ಕುಂಡಿ ಅವರಿಗೆ ಸಲ್ಲಿಸಲಾಯಿತು.
ಗ್ರಾಮ ಪಂಚಾಯತಗಳಲ್ಲಿ ನೌಕರಿ ಮಾಡುತ್ತಿರುವವರಿಗೆ ಈಗಾಗಲೇ ಹತ್ತು-ಹಲವಾರು ಕಾರ್ಯಗಳ ಒತ್ತಡವಿದ್ದು, ಇಂತಹ ಸಂದರ್ಭದಲ್ಲಿ ಬೇರೆ ಇಲಾಖೆಗೆ ಸಂಬಂಧಪಟ್ಟ ಕೆಲಸಗಳಾದ ಮೊಬೈಲ್‌ ಆ್ಯಪ್‌ ಮೂಲಕ ಪಹಣಿ ಪತ್ರಿಕೆಗೆ ಆಧಾರಕಾರ್ಡ್‌ ಜೋಡಣೆ ಹಾಗೂ ಬೆಳೆ ಸಮೀಕ್ಷೆ ಮೊದಲಾದ ಕೆಲಸಗಳಿಗೆ ನೇಮಿಸಿ ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಹೇಳಲಾಗಿದೆ.
ಪಂಚಾಯತಗಳ ಪಿಡಿಓ ಹಾಗೂ ಕಾರ್ಯದರ್ಶಿಗಳಾದ ಸಂತೋಷ ರಾಠೋಡ, ಶಿವಾಜಿ ಮಡಿವಾಳ, ಸಿ.ಎಂ. ಶಹಾ, ಎಂ.ಎಸ್‌. ಸವಣೂರ, ಕವಿತಾ ಶೇರುಗಾರ, ಬಸಪ್ಪಾ ತೇಗ್ನಾಳ, ಯಶ್ವಂತ ಪಾಟೀಲ, ರಾಜಶೇಖರ ಪೂಜಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಬಿಲ್‌ ಸಂಗ್ರಾಹಕರಾದ ಟಿ.ಎಂ. ಗುರುಬಣ್ಣವರ, ಮಹೇಶ ಆನೆನ್ನವರ, ಸಂತೋಷ ಕೊರ್ವೆಕರ ಮೊದಲಾದವರು ಪಾಲ್ಗೊಂಡಿದ್ದರು.

loading...