ಜಾಂಬೇಗಾಳಿ, ಕಕ್ಕೇರಿ, ಲೋಂಡಾಗಳಲ್ಲಿ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ

0
37
loading...

ಕನ್ನಡಮ್ಮ ಸುದ್ದಿ-ಖಾನಾಪುರ: ತಾಲೂಕಿನ ಜಾಂಬೇಗಾಳಿ, ಕಕ್ಕೇರಿ, ಲೋಂಡಾ ಗ್ರಾಮಗಳಲ್ಲಿ ಭಾನುವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಜರುಗಿತು. ಜಾಂಬೇಗಾಳಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಮತದಾರರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿದಿದ್ದರೂ ಪೆಟ್ರೋಲ್‌ ಬೆಲೆಯನ್ನು ಅಸ್ಥಿರಗೊಳಿಸಿ ಸಾಮಾನ್ಯ ಜನರನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ದೂರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಮುಖಂಡ ನಾಸೀರ ಬಾಗವಾನ ಮಾತನಾಡಿ, ತಾವು ಈಗಾಗಲೇ ಕಳೆದ ಹಲವು ವರ್ಷಗಳಿಂದ ತಾಲ್ಲೂಕಿನ ಜನರ ಸಮಸ್ಯೆಗಳನ್ನು ಬಗೆಹರಿಸುವ ಸಾಮಾಜಿಕ ಕಾರ್ಯವನ್ನು ಕೈಗೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಪಕ್ಷದ ಬಗ್ಗೆ ತಾಲ್ಲೂಕಿನ ಮತದಾರರಲ್ಲಿ ಒಲವು ಹೆಚ್ಚಿದೆ ಎಂದು ಅಭಿಪ್ರಾಯ ಪಟ್ಟರು.
ಸಭೆಯಲ್ಲಿ ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ, ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಕ್ಕೇರಿ ಬಿಷ್ಟಾದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಬಿ ಅಂಬೋಜಿ, ಲಿಯಾಕಲಿ ಬಿಚ್ಚುನವರ, ಸಂತೋಷ ಹಂಜಿ, ಶ್ರೀಕಾಂತ ಬಲ್ಲಾಳ, ಪ್ರಕಾಶ ಬೈಲೂರಕರ ಸೇರಿದಂತೆ ಪಕ್ಷದ ಮುಖಂಡರು, ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಧುರೀಣರು, ಕಾರ್ಯಕರ್ತರು ಇದ್ದರು. ಈ ಸಂದರ್ಭದಲ್ಲಿ ಪಕ್ಷದ ಬೂತ್‌ ಮಟ್ಟದ ಸದಸ್ಯರ ಕೈಪಿಡಿ ಬಿಡುಗಡೆ ಮಾಡಿದ ಪಕ್ಷದ ಮುಖಂಡರು ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸುವ ಹಾಗೂ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಕೈಪಿಡಿಗಳನ್ನು ಉಪಯೋಗಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

loading...