ಜಾನಪದ ಆಚಾರ ಬದುಕಿಗೆ ದಾರಿದೀಪ

0
28
loading...

ವಿಜಯಪುರ: ಭಾರತದ ಜಾನಪದ ಪರಂಪರೆಗೆ ವಿಶ್ವ ಮನ್ನಣೆ ಇದ್ದು, ಅದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅಭಿಪ್ರಾಯಪಟ್ಟರು.ವಿಜಯಪುರ ತಾಲೂಕಿನ ಚಿಕ್ಕಗಲಗಲಿ ಗ್ರಾಮದಲ್ಲಿ ಗುರುವಾರ ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಘಟಕ ಹಾಗೂ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ವತಿಯಿಂದ ನಡೆದ ಕೃಷ್ಣೆಗೆ ಬಾಗಿನ ಅರ್ಪಣೆ, ಜಾನಪದ ಕಲಾವಿದೆಯರಿಗೆ ಉಡಿತುಂಬವುದು ಹಾಗೂ ನೀರು ಮತ್ತು ಬದುಕು ಚಿಂತನ ಮಂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹಿಂದಿನ ಕಾಲದ ಜಾನಪದ ಆಚಾರ-ವಿಚಾರಗಳು ಇಂದಿನ ಬದುಕಿಗೆ ದಾರಿದೀಪವಾಗಿವೆ. ಜಾನಪದ ಸಂಸ್ಕೃತಿಯು ಮನೆ ಮನಗಳಲ್ಲಿ ಗಟ್ಟಿಯಾಗಿ ನೆಲೆಗೊಳ್ಳಬೇಕು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಕಜಾಪ ರಾಜ್ಯ ಕಾರ್ಯಾಧ್ಯಕ್ಷ  ಡಾ. ಎಸ್‌. ಬಾಲಾಜಿ, ಸರ್ಕಾರ ಜಾನಪದ ಕಲಾವಿದರನ್ನು ತಾತ್ಸಾಕತೆಯಿಂದ ನೋಡುತ್ತಿದೆ. ಶಿಷ್ಟ ಕಲಾವಿದರಿಗೆ ಗೌರವ ತೋರಿಸಲು ಆಗ ಜಾನಪದ ಪರಂಪರೆ ಬೆಳೆಯುತ್ತದೆ ಎಂದರು. ನೀರು ನಮ್ಮ ಬದುಕು ಕುರಿತು ಉಪನ್ಯಾಸ ನೀಡಿದ್ದ ಕೃಷ್ಣಾಕಾಡಾ ಮಾಜಿ ಅಧ್ಯಕ್ಷ  ಬಸವರಾಜ ಕುಂಬಾರ ಅವರು, ನೀರಿನ ಸದ್ಭಳಕೆ ಸರಿಯಾಗಿ ಆಗುತ್ತಿಲ್ಲ. ನೀರಿಗಾಗಿ ಮುಂದಿನ ದಿನಮಾನದಲ್ಲಿ ಯುದ್ಧ ನಡೆದರೆ ಅಚ್ಚರಿ ಆಗದು ನೀರು ಮಣ್ಣು ಹಾಳಾದರೆ ಬದುಕು ಅಂತ್ಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಸದಸ್ಯ ಕಲ್ಲಪ್ಪ ಕೊಡಬಾಗಿ ಮಾತನಾಡಿ, ಬಾಗಿನ ಅರ್ಪಣೆ ಮತ್ತು ಉಡಿ ತುಂಬುವುದು ಉಪಕಾರ ಸ್ಮರಣೆಯ ಪ್ರತೀಕ ಜಾನಪದ ಪರಿಷತ್ತಿನ ಇಂತಹ ಕಾರ್ಯ ನಿರಂತರವಾಗಿ ನಡೆಯಲಿ ಎಂದರು. ಜಂಬಗಿ ಹಿರೇಮಠದ ಅಡವಿಸಿದ್ದೇಶ್ವರ ಶಿವಾಚಾರ್ಯರು ಚಿಕ್ಕಗಲಗಲಿಯ ಜನಾರ್ಧನ ಸ್ವಾಮಿಗಳು ಆಶೀರ್ವಚನ ನೀಡಿದರು. ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಕೊಡಬಾಗಿ, ಅನುಷಾ ಪಾಟೀಲ ನೇತೃತ್ವದಲ್ಲಿ 51 ಜನ ಮುತೈದಿಯರಿಗೆ ಉಡಿ ತುಂಬಲಾಯಿತು.ಡಿಸಿಸಿ ಬ್ಯಾಂಕ ನಿರ್ದೇಶಕ ಶಿವನಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ರಂಗಮ್ಮ ಗದ್ದನಕೇರಿ, ವೆಂಕನಗೌಡ ಪಾಟೀಲ, ಚಿಕ್ಕಗಲಗಲಿ, ಕಣಬೂರ, ಶಿರಬೂರ, ಹೊಸೂರ, ಜಂಬಗಿ, ಉಪ್ಪಲದಿನ್ನಿ, ಮಮದಾಪೂರ, ಜೈನಾಪುರ, ಸುತಗುಂಡಿ, ಶೇಗುಣಸಿ ಯಡಹಳ್ಳಿ ಗಲಗಲಿ ಗ್ರಾಮಸ್ಥರು ಭಾಗವಹಿಸಿದ್ದರು. ಕೆ.ಪಿ. ಶಿರಬೂರ ರಮೇಶ ಬಡಿಗೇರ, ಮೌಲಾಸಾಬ ಜಹಾಗೀರದಾರ, ಶ್ರೀಕಾಂತ ನಾಟೀಕಾರ ನೇತೃತ್ವದಲ್ಲಿ ಚೌಡಕಿ ಭಜನೆ, ಹೆಜ್ಜೆಮೇಳ, ಡೊಳ್ಳು ಕುಣಿತ, ಹಲಗೆವಾದನ, ಕೊಂಬು ಸೋಬಾನಪದ ಪ್ರದರ್ಶನ  ನಡೆಯಿತು. ಶಿಕ್ಷಕ ಕೃಷ್ಣಾ  ಬಡಿಗೇರ ಸ್ವಾಗತಿಸಿದರು. ಪರಮಾನಂದ ಪಿ.ಸಿ. ವಂದಿಸಿದರು. ಆನಂದ ಕುದರಿ ನಿರೂಪಿಸಿದರು.

loading...